ಇಂದು ರಾತ್ರಿ 8:30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶವನ್ನುದ್ದೇಶಿಸಿ ಭಾಷಣ

ದೆಹಲಿ: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಸೋಲುಂಡ ಮರುದಿನವೇ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಏಪ್ರಿಲ್ 18, ಶನಿವಾರ) ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬಗ್ಗೆ ಅಧಿಕೃತ ಮೂಲಗಳು ಖಚಿತಪಡಿಸಿವೆ.

ಶುಕ್ರವಾರ ಲೋಕಸಭೆಯಲ್ಲಿ ಸಂವಿಧಾನದ (131ನೇ ತಿದ್ದುಪಡಿ) ಮಸೂದೆಯ ವಿರುದ್ಧ ವಿರೋಧ ಪಕ್ಷಗಳು ಮತ ಚಲಾಯಿಸಿದ ಹಿನ್ನೆಲೆಯಲ್ಲಿ, ಮಹಿಳಾ ಮೀಸಲಾತಿ ಜಾರಿ ಮತ್ತು ಸಂಸತ್ತಿನಲ್ಲಿ ನಡೆದ ಬೆಳವಣಿಗೆಗಳ ಕುರಿತು ಪ್ರಧಾನಿಯವರು ತಮ್ಮ ನಿಲುವನ್ನು ಸ್ಪಷ್ಟಪಡಿಸುವ ಸಾಧ್ಯತೆಯಿದೆ.

ಮಹಿಳಾ ಮೀಸಲಾತಿ ಕಾನೂನನ್ನು 2029ರ ಲೋಕಸಭಾ ಚುನಾವಣೆಗೂ ಮುನ್ನ ಜಾರಿಗೆ ತರಲು, 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ನಡೆಸಿ, ಲೋಕಸಭಾ ಸ್ಥಾನಗಳನ್ನು ಪ್ರಸ್ತುತ 543 ರಿಂದ 816 ಕ್ಕೆ ಹೆಚ್ಚಿಸಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಅಲ್ಲದೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿಯೂ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲು ಸ್ಥಾನಗಳನ್ನು ಹೆಚ್ಚಿಸಲು ಯೋಜಿಸಲಾಗಿತ್ತು.

ಸಂವಿಧಾನ ತಿದ್ದುಪಡಿ ಮಸೂದೆಯ ಅಂಗೀಕಾರಕ್ಕೆ ಸದನದ ಮೂರನೇ ಎರಡರಷ್ಟು ಬಹುಮತ ಅಗತ್ಯವಿತ್ತು. ಆದರೆ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಅಗತ್ಯವಾದ ಸಂಖ್ಯೆಯನ್ನು ತಲುಪಲು ಸಾಧ್ಯವಾಗಲಿಲ್ಲ. ಶುಕ್ರವಾರ ರಾತ್ರಿ ನಡೆದ ಮತದಾನದಲ್ಲಿ ಒಟ್ಟು 528 ಸದಸ್ಯರು ಭಾಗವಹಿಸಿದ್ದು, ಮಸೂದೆಯ ಪರವಾಗಿ 298 ಸದಸ್ಯರು ಮತ ಚಲಾಯಿಸಿದರೆ, 230 ಸಂಸದರು ಮಸೂದೆಯನ್ನು ವಿರೋಧಿಸಿದರು. ಅಂದು ಹಾಜರಿದ್ದ ಸದಸ್ಯರ ಸಂಖ್ಯೆಗನುಗುಣವಾಗಿ ಮಸೂದೆಯ ಅಂಗೀಕಾರಕ್ಕೆ 352 ಮತಗಳ ಅಗತ್ಯವಿತ್ತು.

Related Articles

ಇತ್ತೀಚಿನ ಸುದ್ದಿಗಳು