Home ದೇಶ ಸ್ವದೇಶಿ ಉತ್ಪನ್ನಗಳ ಬಗ್ಗೆ ಹೆಮ್ಮೆಯಿರಲಿ: ಸ್ವದೇಶಿ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ಆಗ್ರಹ

ಸ್ವದೇಶಿ ಉತ್ಪನ್ನಗಳ ಬಗ್ಗೆ ಹೆಮ್ಮೆಯಿರಲಿ: ಸ್ವದೇಶಿ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ಆಗ್ರಹ

0

ದೆಹಲಿ: ದೇಶದಲ್ಲಿ ಹಬ್ಬಗಳ ವಾತಾವರಣ ಇರುವ ಕಾರಣ, ಜನರು ಸ್ವದೇಶಿ ಉತ್ಪನ್ನಗಳನ್ನು ಖರೀದಿಗೆ ಆದ್ಯತೆ ನೀಡಬೇಕು ಮತ್ತು ಅವುಗಳ ಬಗ್ಗೆ ಹೆಮ್ಮೆ ಪಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದು, ಆತ್ಮನಿರ್ಭರ ಭಾರತದ ನೀತಿಯು ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸಲು ಸಹಕಾರಿ. ಜೀವನಕ್ಕೆ ಅಗತ್ಯವಾದ ಪ್ರತಿಯೊಂದು ವಿಷಯವೂ ‘ಸ್ವದೇಶಿ’ ಆಗಿರಬೇಕು ಎಂದು ಭಾನುವಾರ ನಡೆದ ಮನ್‌ ಕಿ ಬಾತ್‌ನ 125ನೇ ಕಾರ್ಯಕ್ರಮದಲ್ಲಿ ಮೋದಿ ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಗಣಪತಿ ನವರಾತ್ರಿಗಳು, ಶೀಘ್ರದಲ್ಲಿ ಬರಲಿರುವ ಶರನ್ನವರಾತ್ರಿಗಳು (ದಸರಾ) ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ, ಉಡುಗೊರೆಗಳು, ಬಟ್ಟೆಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ಪ್ರತಿ ವಸ್ತುವಿನ ಖರೀದಿಯಲ್ಲಿ ‘ಸ್ವದೇಶಿ’ ಮಂತ್ರವನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಉದ್ಯೋಗ ಸೃಷ್ಟಿಯೇ ಗುರಿ

ಯುಪಿಎಸ್‌ಸಿ ಆಕಾಂಕ್ಷಿಗಳಿಗಾಗಿ ವಿಶೇಷವಾಗಿ ‘ಪ್ರತಿಭಾ ಸೇತು’ ಪೋರ್ಟಲ್ ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಾಗರಿಕ ಸೇವಾ ಪರೀಕ್ಷೆಯ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಿ, ಮೆರಿಟ್ ಪಟ್ಟಿಯಲ್ಲಿ ಹೆಸರು ಇಲ್ಲದ ಅಭ್ಯರ್ಥಿಗಳ ವಿವರಗಳನ್ನು ಈ ಪೋರ್ಟಲ್‌ನಲ್ಲಿ ನೀಡಲಾಗುತ್ತದೆ ಎಂದು ಪ್ರಧಾನಿ ತಿಳಿಸಿದರು.

ಖಾಸಗಿ ಸಂಸ್ಥೆಗಳು ಈ ವಿವರಗಳನ್ನು ಬಳಸಿಕೊಂಡು ತಮ್ಮ ಸಂಸ್ಥೆಗಳಲ್ಲಿ ಅವರಿಗೆ ಉದ್ಯೋಗ ನೀಡಬಹುದು ಎಂದು ಹೇಳಿದರು. ಯುವಕರಿಗೆ ಉದ್ಯೋಗ ನೀಡುವುದೇ ಈ ಕ್ರಮಗಳ ಗುರಿಯಾಗಿದೆ ಎಂದು ಅವರು ತಿಳಿಸಿದರು.

ನೈಸರ್ಗಿಕ ವಿಕೋಪಗಳು ದೇಶವನ್ನು ಪರೀಕ್ಷಿಸುತ್ತಿವೆ
ದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ, ಭೂಕುಸಿತ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ದೇಶವನ್ನು ಪರೀಕ್ಷಿಸುತ್ತಿವೆ ಎಂದು ಮೋದಿ ಹೇಳಿದರು.

ಸಂತ್ರಸ್ತರನ್ನು ರಕ್ಷಿಸಲು ಶ್ರಮಿಸುತ್ತಿರುವ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಗಳು, ಸೈನ್ಯ, ಸ್ಥಳೀಯ ಜನರು, ಸಾಮಾಜಿಕ ಕಾರ್ಯಕರ್ತರು, ವೈದ್ಯರು ಮತ್ತು ಆಡಳಿತ ಯಂತ್ರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಮತ್ತಷ್ಟು ಮುನ್ನಡೆಯುತ್ತಿದೆ

ವಿನಾಶಕಾರಿ ನೈಸರ್ಗಿಕ ವಿಕೋಪಗಳು ಜಮ್ಮು ಮತ್ತು ಕಾಶ್ಮೀರವನ್ನು ತತ್ತರಿಸುವಂತೆ ಮಾಡಿದ್ದರೂ, ಅದು ಅನೇಕ ವಿಷಯಗಳಲ್ಲಿ ಮುಂದುವರಿಯುತ್ತಿದೆ ಎಂದು ಮೋದಿ ತಿಳಿಸಿದರು.

ಇತ್ತೀಚೆಗೆ ಶ್ರೀನಗರದ ದಾಲ್ ಸರೋವರದಲ್ಲಿ ನಡೆದ ಖೇಲೋ ಇಂಡಿಯಾ ವಾಟರ್ ಸ್ಪೋರ್ಟ್ಸ್ ಫೆಸ್ಟಿವಲ್ ಮತ್ತು ಪುಲ್ವಾಮಾದಲ್ಲಿ ನಡೆದ ಕ್ರಿಕೆಟ್ ಪಂದ್ಯದ ಬಗ್ಗೆ ಅವರು ಪ್ರಸ್ತಾಪಿಸಿದರು.

You cannot copy content of this page

Exit mobile version