ಬೆಂಗಳೂರು: ಸದ್ಯದ ಬಿಜೆಪಿ ಆಡಳಿತದಲ್ಲಿ ಗೋಹತ್ಯೆ ಮುಂದುವರಿದಿದೆ ಎನ್ನುತ್ತಾ ಜ್ಯೋತಿರ್ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು “ಪ್ರಧಾನಿ ಮತ್ತು ರಾಷ್ಟ್ರಪತಿ ಹುದ್ದೆಗಳಲ್ಲಿ ಕುಳಿತವರು ಹಿಂದೂಗಳಲ್ಲ,” ಎಂದು ಹೇಳಿದ್ದಾರೆ.
‘ಗೋಧ್ವಜ ಸ್ಥಾಪನಾ ಭಾರತ ಯಾತ್ರೆ’ಯ ಎರಡನೇ ದಿನವಾದ ಇಂದು ಲಕ್ನೋದಲ್ಲಿ ಮಾತನಾಡಿದ ಅವಿಮುಕ್ತೇಶ್ವರಾನಂದ್, “ಯಾವುದೇ ಒಬ್ಬ ಹಿಂದೂ ಪ್ರಧಾನಿ ಅಥವಾ ರಾಷ್ಟ್ರಪತಿ ಗೋಹತ್ಯೆ ನಿಲ್ಲಿಸಲು ಆದೇಶವನ್ನು ಹೊರಡಿಸುತ್ತಾರೆ, ಇಲ್ಲವೇ ರಾಜೀನಾಮೆ ನೀಡುತ್ತಾರೆ,” ಎನ್ನುತ್ತಾ ಆ ಹುದ್ದೆಗಳಲ್ಲಿ ಇರುವವರು “ಪ್ರದರ್ಶನಕ್ಕೆ ಇಟ್ಟಿರುವ ಲಕ್ನೋ ಆನೆಯ ಪ್ರತಿಮೆಗಳು,” ಎಂದು ಟೀಕಿಸಿದ್ದಾರೆ
ಜ್ಯೋತಿರ್ಮಠ ಶಂಕರಾಚಾರ್ಯರು ಆರಂಭಿಸಿದ ‘ಗೋಧ್ವಜ ಸ್ಥಾಪನಾ ಭಾರತ ಯಾತ್ರೆ’ ಭಾನುವಾರ ಅಯೋಧ್ಯೆಯಿಂದ ಆರಂಭಗೊಂಡಿದ್ದು, ಸೋಮವಾರ ಲಖನೌ ತಲುಪಿದ್ದು, ಇದೀಗ ಬಿಹಾರದ ಬಕ್ಸಾರ್‌ಗೆ ತೆರಳಲಿದೆ.
“ಅವರಲ್ಲಿ ಹಿಂದೂ ಯಾರು? ಯಾವ ರಾಷ್ಟ್ರಪತಿ ಹಿಂದೂ; ಯಾವ ಪ್ರಧಾನಿ ಹಿಂದೂ? ಅವರು ಹಿಂದೂಗಳಾಗಿದ್ದರೆ ಅವರ ಆಡಳಿತದಲ್ಲಿ ಗೋಹತ್ಯೆ ಮುಂದುವರಿಯುತ್ತಿತ್ತೇ? ನೀವು ಹಿಂದೂಗಳು. ನಿಮ್ಮನ್ನು ಪ್ರಧಾನಿಯನ್ನಾಗಿ ಮಾಡಿದರೆ, ನಿಮ್ಮ ಆಡಳಿತದಲ್ಲಿ ಗೋಹತ್ಯೆಯನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಪ್ರಧಾನಿ ಮತ್ತು ರಾಷ್ಟ್ರಪತಿ ಇಬ್ಬರೂ ಹಿಂದೂಗಳು ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.
ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಜ್ಯೋತಿರ್ಮಠ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ್, “ಇಲ್ಲಿಯವರೆಗೆ, ಯಾವುದೇ ಹಿಂದೂ ಈ ಹುದ್ದೆಗಳನ್ನು (ಪ್ರಧಾನಿ/ರಾಷ್ಟ್ರಪತಿ) ವಹಿಸಿಕೊಂಡಿಲ್ಲ. ಹೀಗಿದ್ದಿದ್ದರೆ ಅವರ ಅಂತರಂಗದ ಆತ್ಮಸಾಕ್ಷಿ ಇದನ್ನು (ಗೋಹತ್ಯೆ) ಮುಂದುವರಿಯುವಂತೆ ಮಾಡಲು ಬಿಡುತ್ತಿರಲಿಲ್ಲ. ಅವರು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದರು ಇಲ್ಲವೇ, ಇಲ್ಲಿ ಗೋಹತ್ಯೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸುತ್ತಿದ್ದರು,” ಎಂದು ಹೇಳಿದ್ದಾರೆ.
“ಈಗ ಈ ಹುದ್ದೆಗಳಲ್ಲಿ ಯಾವೊಬ್ಬ ಹಿಂದೂವೂ ಕುಳಿತಿಲ್ಲ” ಎಂದೂ ಅವರು ಹೇಳಿದ್ದಾರೆ.
“ಲಕ್ನೋದ ಉದ್ಯಾನವನಗಳಲ್ಲಿರುವ ಆನೆಗಳಂತೆಯೇ… ಅವು (ನಿಜವಾದ) ಆನೆಗಳೇ? ಅವು ನಡೆಯುತ್ತವೆಯೇ? ಅವು ಪ್ರದರ್ಶನಕ್ಕೆ ಮಾತ್ರ, ಅಲ್ಲಿ ನಿಲ್ಲಿಸಲು ಮಾತ್ರ. ಲಕ್ನೋದ ಉದ್ಯಾನವನಗಳ ಆನೆಗಳು ಕೇವಲ ಪ್ರದರ್ಶನಕ್ಕಾಗಿ ಮತ್ತು ನಡೆಯಲು ಸಾಧ್ಯವಿಲ್ಲ, ಮರವನ್ನು ಮುರಿಯಲು ಸಾಧ್ಯವಿಲ್ಲ ಮತ್ತು ಸೌಂದರ್ಯವನ್ನು ನೀಡಲೂ ಸಾಧ್ಯವಿಲ್ಲ … ಅದೇ ರೀತಿಯಲ್ಲಿ, ಅವರು ಪ್ರದರ್ಶನಕ್ಕಾಗಿರುವ ಹಿಂದೂಗಳು … ನಿಜವಾದ ಹಿಂದೂಗಳಲ್ಲ. ಅವರು ಹಿಂದೂಗಳಾಗಿದ್ದರೆ, ಅವರ ಆಡಳಿತದಲ್ಲಿ ಒಂದೇ ಒಂದು ಬಾರಿಯೂ ಗೋಹತ್ಯೆ ನಡೆಯುತ್ತಿರಲಿಲ್ಲ,” ಎಂದು ಅವರು ಹೇಳಿದರು.
ಅಯೋಧ್ಯೆಯಲ್ಲಿ ‘ಗೋಧ್ವಜ ಸ್ಥಾಪನಾ ಭಾರತ ಯಾತ್ರೆ’ ನಡೆಸುವಾಗ ಗೋಹತ್ಯೆ ನಿಲ್ಲಿಸಲು ಶಕ್ತಿ ನೀಡುವಂತೆ ರಾಮ್ ಲಲ್ಲಾನ ಬಳಿ ಕೇಳಿದ್ದೇನೆ, ಗೋಹತ್ಯೆ ನಿಷೇಧ ಈಡೇರಿಸುವವರೆಗೆ ದೇವರ ದರ್ಶನಕ್ಕೆ ಹೋಗುವುದಿಲ್ಲ ಎಂದು ಶಪಥ ಮಾಡಿದ್ದೇನೆ ಎಂದು ಅವಿಮುಕ್ತೇಶ್ವರಾನಂದರು ಹೇಳಿದ್ದಾರೆ.
ಜ್ಯೋತಿರ್ಮಠ ಶಂಕರಾಚಾರ್ಯರು ಯಾತ್ರೆಯ ಪ್ರಾರಂಭಕ್ಕಾಗಿ ಭಾನುವಾರ ಅಯೋಧ್ಯೆಯಲ್ಲಿದ್ದರು ಆದರೆ ರಾಮ ಮಂದಿರಕ್ಕೆ ಭೇಟಿ ನೀಡುವುದನ್ನು ತಪ್ಪಿಸಿದರು ಮತ್ತು ಅದರ ಸಂಕೀರ್ಣವನ್ನು ಮಾತ್ರ ಪ್ರದಕ್ಷಿಣೆ ಮಾಡಿದರು.
ದೇವಾಲಯಕ್ಕೆ ಏಕೆ ಭೇಟಿ ನೀಡಲಿಲ್ಲ ಎಂಬ ಪ್ರಶ್ನೆಗೆ, ಅವಿಮುಕ್ತೇಶ್ವರಾನಂದರು, “ಭಾಗಶಃ ನಿರ್ಮಿಸಲಾದ ದೇವಾಲಯದಲ್ಲಿ ಯಾರೂ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಅದರ ‘ಶಿಖರ’ ಪೂರ್ಣಗೊಂಡ ನಂತರ ದೇವಾಲಯಕ್ಕೆ ಭೇಟಿ ನೀಡುತ್ತೇನೆ,” ಎಂದು ಹೇಳಿದರು.
2024 ರ ಜನವರಿಯಲ್ಲಿ, ಅವಿಮುಕ್ತೇಶ್ವರಾನಂದರವರು ಅಪೂರ್ಣವಾಗಿರುವ ರಾಮಮಂದಿರದಲ್ಲಿ ರಾಮ ಲಲ್ಲಾನ ‘ಪ್ರಾಣ ಪ್ರತಿಷ್ಠೆ’ ಮಾಡಿದ್ದು ʼಶಾಸ್ತ್ರಗಳಿಗೆ ವಿರುದ್ಧವಾಗಿದೆʼ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ಸುದ್ದಿಯಾಗಿದ್ದರು.
ಇಂದು ಸೋಮವಾರ, “ರಾಮನ ಜೊತೆಗೆ, ನಮಗೆ ಲಕ್ಷ್ಮಣ ಜೀ ಕೂಡ ಬೇಕು – ಅದಕ್ಕಾಗಿಯೇ ನಾವು ಲಕ್ಷ್ಮಣಪುರಿಗೆ ಬಂದಿದ್ದೇವೆ (ಲಕ್ನೋದ ಹಳೆಯ ಹೆಸರು, ಇದನ್ನು ರಾಮನ ಕಿರಿಯ ಸಹೋದರ ಲಕ್ಷ್ಮಣ ಸ್ಥಾಪಿಸಿದ ಎಂದು ಪುರಾಣ ಹೇಳುತ್ತದೆ)” ಎಂದು ಹೇಳಿದರು. ಸ್ವಾಮೀಜಿ ದೇಶಾದ್ಯಂತ ಸಂಚರಿಸಲು ಯೋಜನೆ ಹಾಕಿಕೊಂಡಿದ್ದು, ಎಲ್ಲಾ ರಾಜ್ಯಗಳಲ್ಲಿ ʼಗೋಧ್ವಜʼ ಸ್ಥಾಪಿಸಲು ಯೋಜಿಸಿತ್ತಿರುವುದಾಗಿ ಹೇಳಿದ್ದಾರೆ.
‘ಯೋಗಿ ಇದ್ದರೂ ಗೋಮಾಂಸ ರಫ್ತಿನಲ್ಲಿ ಯುಪಿ ಅಗ್ರಸ್ಥಾನ – ತಿರುಪತಿ ಲಡ್ಡು ತನಿಖೆ ವಿಳಂಬ’
ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರಕಾರ ಕಾನೂನನ್ನು ರೂಪಿಸಬೇಕು ಎಂದಿರುವ ಜ್ಯೋತಿರ್ಮಠ ಶಂಕರಾಚಾರ್ಯರು ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸದ್ಯಕ್ಕೆ ಮಠ ತೊರೆದಿರುವುದಾಗಿ ಹೇಳಿದ್ದಾರೆ.
“ಮಹಂತ್ ಯೋಗಿ ಆದಿತ್ಯನಾಥ್ ಅವರು ಯುಪಿ ಮುಖ್ಯಮಂತ್ರಿಯಾಗಿದ್ದಾರೆ … ಹೀಗಿದ್ದೂ, ಯುಪಿ ಗರಿಷ್ಠ ಪ್ರಮಾಣದಲ್ಲಿ ಗೋಮಾಂಸ ರಫ್ತು ಮಾಡುತ್ತಿದೆ … ಬಿಜೆಪಿ ಮೊದಲು ನನ್ನ ಯಾತ್ರೆಯನ್ನು ವಿರೋಧಿಸಿತು – ಇದು ನನಗೆ ಆಶ್ಚರ್ಯವನ್ನುಂಟುಮಾಡಿತು” ಎಂದು ಅವರು ಹೇಳಿದರು.
“ನಮ್ಮನ್ನು ನಾಗಾಲ್ಯಾಂಡ್‌ನಲ್ಲಿ ನಿಲ್ಲಿಸಲಾಯಿತು, ಆದರೆ ನಾವು ಇನ್ನೂ ನಾಗಾಲ್ಯಾಂಡ್‌ಗೆ ಭೇಟಿ ನೀಡುತ್ತೇವೆ. ಇದು ಬಿಜೆಪಿಯ ದ್ವಂದ್ವ ನೀತಿ- ಇದು ನನಗೆ ಆಶ್ಚರ್ಯ ತಂದಿದೆ,” ಎಂದು ಅವರು ಹೇಳಿದರು. “ಶಂಕರಾಚಾರ್ಯರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಗೋವನ್ನು ತಿನ್ನುವುದು ಅವರ ಹಕ್ಕು ಎಂದು ಅಲ್ಪಸಂಖ್ಯಾತರು ಹೇಳಲು ಸಾಧ್ಯವಿಲ್ಲ. ಹೀಗಿದ್ದರೆ, ಅವರು ಷರಿಯಾ ಕಾನೂನು ಹೊಂದಿರುವ ದೇಶಕ್ಕೆ ಹೋಗಲಿ,” ಎಂದು ಹೇಳಿಕೆ ನೀಡಿದ್ದಾರೆ.
ತಿರುಪತಿ ಲಡ್ಡು ಪ್ರಸಾದದ ವಿಚಾರದಲ್ಲಿ ಮಾತನಾಡಿದ ಅವಿಮುಕ್ತೇಶ್ವರಾನಂದ, ಕೋಟ್ಯಂತರ ಜನ ಗೋಮಾಂಸದ ಕೊಬ್ಬಿನಂಶವಿರುವ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 18 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತದಲ್ಲಿ ತಿರುಪತಿ ಪ್ರಸಾದದ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪಿಸಿದ್ದು ಭಾರೀ ಗದ್ದಲಕ್ಕೆ ಕಾರಣವಾಯಿತು. ರೆಡ್ಡಿ ಆರೋಪಗಳನ್ನು “ಹೇಯ” ಮತ್ತು “ಶುದ್ಧ ಸುಳ್ಳು”, ಇದು ರಾಜಕೀಯ ಲಾಭಕ್ಕಾಗಿ ಸಿಎಂ ಮಾಡಿರುವ ವಿವಾದ ಎಂದು ಅವರು ಹೇಳಿದ್ದರು.
ಈ ಕುರಿತು ಮಾತನಾಡಿದ ಜ್ಯೋತಿರ್ಮಠದ ಶಂಕರಾಚಾರ್ಯರು, “ಜನ ಹಿಂದೂಗಳ ಮತವನ್ನು ಪಡೆದು ಆದರೆ ಹಿಂದೂಗಳಿಗೆ ದ್ರೋಹ ಬಗೆಯುತ್ತಿದ್ದಾರೆ. ಇವರ ಮತಗಳನ್ನು ತೆಗೆದುಕೊಂಡು ಇನ್ನೂ ಗೋಹತ್ಯೆಯನ್ನು ಮುಂದುವರಿಸಿದ್ದಾರೆ … ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಯು ಭವಿಷ್ಯದಲ್ಲಿ ಬೆಳೆಯದಂತೆ ನೋಡಿಕೊಳ್ಳಲು ನಾವು ನಮ್ಮ ‘ಮಠ’ವನ್ನು ತೊರೆಯುತ್ತಿದ್ದೇವೆ,” ಎಂದು ಹೇಳಿದರು.
“ಈ ದೇಶದಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಚರ್ಚೆಯಲ್ಲಿರುವಾಗ, ನಾವು ರಾಜ್ಯಗಳಾದ್ಯಂತ ‘ಗೋಮಾತೆ’ಗಾಗಿ ಬೇರೆ ಬೇರೆ ಕಾನೂನುಗಳನ್ನು ಏಕೆ ಹೊಂದಿದ್ದೇವೆ?” ಎಂದು ಪ್ರಶ್ನಿಸಿದರು.
ತಿರುಪತಿಯಲ್ಲಿ ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ಸಮಿತಿಯನ್ನು ರಚಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ ಎಂದು ಜ್ಯೋತಿರ್ಮಠ ಶಂಕರಾಚಾರ್ಯರು ಟೀಕಿಸಿದ್ದಾರೆ.
“ಇದು ಸಣ್ಣ ಸಮಸ್ಯೆ ಎಂದು ನೀವು ಭಾವಿಸುತ್ತೀರಾ? ಈಗಾಗಲೇ ತನಿಖೆ ಆರಂಭವಾಗಬೇಕಿತ್ತು. ಆದರೆ ಏನಾಗುತ್ತಿದೆ? ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ? ಕೋಟ್ಯಂತರ ಹಿಂದೂಗಳ ಪರಿಶುದ್ಧತೆಗೆ ಭಂಗ ತರುವ ಯತ್ನ ನಡೆಯುತ್ತಿದೆ,” ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆಂಧ್ರಪ್ರದೇಶ ಸರ್ಕಾರ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲು ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದ ಅವರು, ಎಸ್‌ಐಟಿ ತನಿಖೆಯನ್ನು ಪೂರ್ಣಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಪ್ರಶ್ನಿಸಿದರು. “ಸಮಸ್ಯೆಯು ಹಿನ್ನಲೆಗೆ ಸರಿಬೇಕೆಂದು ಸರ್ಕಾರ ಬಯಸುತ್ತದೆಯೇ?” ಎಂದು ಕೇಳಿದ್ದಾರೆ.