ಅವ್ವ ತಣ್ಣಗೆ ಇದ್ದಾಳೆಂದು
ನಾನು ನಂಬುವುದಿಲ್ಲ,,
ಬೆಂಕಿಯನ್ನೆ ಒಡಲಲ್ಲಿರಿಸಿಕೊಂಡ ಬುವಿ
ಪ್ರಶಾಂತವಾಗಿಯೆ ಇರುವುದನ್ನು ಕಂಡಿದ್ದೇನೆ…
ಕತ್ತಿಗಳು ಕೆನ್ನೆತ್ತರ ಕ್ರೌರ್ಯಗಳನ್ನಷ್ಟೇ
ಮೆರೆಯುತ್ತವೆ ಎಂದು ಭಾವಿಸುವುದಿಲ್ಲ
ಕತ್ತಿಯನ್ನೆ ಜಳಪಿಸಿದ ಅಶೋಕ ಮಹಾಶಯ
ಅಹಿಂಸೆಯ ಹೊಸ ಭಾಷ್ಯ ಬರೆದುದನ್ನು ಅರಿತಿದ್ದೇನೆ…
ಅರಮನೆಗಳು ಅಹಂಕಾರದ
ಅಮಲಿನ ಕೇಂದ್ರವೆoದಷ್ಟೆ ಎಂದು ಸಾರುವುದಿಲ್ಲ
ಅರಮನೆಯ ಸುಪ್ಪತ್ತಿಗೆಯಲ್ಲೆ
ಬುದ್ದನಂತ ಕಾರುಣ್ಯ ಜನಿಸಿದ್ದನ್ನು ತಿಳಿದಿದ್ದೇನೆ
ಕೊಲ್ಲುವ ಮನಸ್ಸು ಬರಿ ಸಾವನ್ನೇ
ಬಯಸುತ್ತದೆ ಎಂದು ಹೇಳಹೊರಡುವುದಿಲ್ಲ
ಅಂಗುಲಿಮಾಲನಂತವರು ಬುದ್ಧನ ಮುಂದೆ
ಮಂಡಿಯೂರಿದ್ದನ್ನು ಓದಿದ್ದೇನೆ…
ಬರೆದದ್ದೆಲ್ಲ ಸತ್ಯ ಎಂದು ನಂಬುವುದಿಲ್ಲ,
ಇತಿಹಾಸದ ಪುಟಗಳು ಅದೆಷ್ಟೋ
ಅಸತ್ಯಗಳನ್ನೆ ಬಿಂಬಿಸಿ ಸತ್ಯಗಳನ್ನು
ಮರೆಮಾಚಿದ್ದನ್ನು ಗಮನಿಸಿದ್ದೇನೆ..
ಇದು ಹೀಗೇ.. ಇಷ್ಟೇ.. ಎಂದು
ಗೆರೆ ಎಳೆದು ನಿಲ್ಲುವುದಿಲ್ಲ
ಗಡಿಗಳಾಚೆಗೂ ಪ್ರೀತಿಯ ಗಾಳಿ ಬೀಸುವುದೆಂದು
ನಂಬಿದ್ದೇನೆ.. ನಡೆದಿದ್ದೇನೆ… ನಡೆಯುತ್ತಿರುತ್ತೇನೆ..
ತಿಲಕ್ ಲಕ್ಷ್ಮೀಪುರ
ಕನ್ನಡ ಉಪನ್ಯಾಸಕ, ಚೆನ್ನಮ್ಮ ಪ್ರಥಮ ದರ್ಜೆ ಕಾಲೇಜು, ಕೊಳಾಲ.