“..ಶಿಶುನಾಳ ಶರೀಫರ ಬರಹಗಳಲ್ಲಿ ಬರುವ ಅಲಂಕಾರಗಳ ಪ್ರಸ್ತಾಪ, ಸ್ವರೂಪ, ನಿರೂಪಣ ವಿಧಾನ, ವಸ್ತುವಿನ್ಯಾಸ ನಿರ್ವಹಣೆ ಮುಂತಾದ ಸಂಗತಿಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ..” ಸಾಹಿತಿಗಳಾದ ಡಾ.ಸಂಗಮೇಶ ಎಸ್ ಗಣಿ ಅವರ ಬರಹದಲ್ಲಿ
ಕನ್ನಡದ ಕಬೀರ ಶಿಶುನಾಳ ಶರೀಫರ ತತ್ವಪದಗಳು ನಾಡಿನ ಸಾಹಿತ್ಯಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕವಾಗಿ ಗಮನ ಸೆಳೆಯುತ್ತವೆ. ಅವರ ತತ್ವಪದಗಳು ನೀತಿ ಬೋಧ ಪ್ರಧಾನವಾಗಿದ್ದರೂ ಅಲಂಕಾರ ಗುಣದಿಂದಲೂ ಕಂಗೊಳಿಸುತ್ತವೆ. ಈ ಹಿನ್ನೆಲೆಯಲ್ಲಿ ಅವರ ಬರಹಗಳಲ್ಲಿ ಅಲಂಕಾರಗಳ ಪ್ರಸ್ತಾಪ, ಸ್ವರೂಪ, ನಿರೂಪಣ ವಿಧಾನ, ವಸ್ತುವಿನ್ಯಾಸ ನಿರ್ವಹಣೆ ಮುಂತಾದ ಸಂಗತಿಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
ಭಾಷೆಯನ್ನು ಅಲಂಕಾರಿಕವಾಗಿ ಬಳಸುವುದು ಕವಿಯ ಗುಣಧರ್ಮ. ಅಲಂಕಾರವು ಕಾವ್ಯದ ಸೊಬಗನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಕವಿಗಳು ಅಲಂಕಾರವನ್ನು ಬಳಸಬೇಕೆಂಬ ಉದ್ದೇಶದಿಂದ ಕಾವ್ಯವನ್ನು ಕಟ್ಟುವುದಿಲ್ಲ. ವಸ್ತು ಕಾವ್ಯಕ್ಕೆ ಎಷ್ಟು ಮುಖ್ಯವೋ ಆಯ್ಕೆ ಮಾಡಿಕೊಂಡ ವಸ್ತುವಿನ ನಿರ್ವಹಣೆಯಲ್ಲಿ ಅಲಂಕಾರವೂ ಅಷ್ಟೇ ಮುಖ್ಯ. ಕಾವ್ಯಕ್ಕೆ ಸೊಗಸು ಮತ್ತು ಅರ್ಥವಂತಿಕೆ ದಕ್ಕುವುದು ಅಲಂಕಾರದಿಂದ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.
‘ಅಲಂಕಾರ’ ಎಂದರೆ ಕಾವ್ಯದ ಸೌಂದರ್ಯ, ಚೆಲುವು, ಮನಸ್ಸನ್ನು ಆಕರ್ಷಿಸುವ ಮಾಧ್ಯಮ. ‘ಸಾಹಿತ್ಯದಲ್ಲಿ ಗದ್ಯ ಪದ್ಯ ಕಾವ್ಯದ ಆಕರ್ಷಣೆ ಹೆಚ್ಚಿಸಲು ಕಾವ್ಯಲಕ್ಷಿö್ಮÃಯ ಶರೀರಕ್ಕೆ ಶಬ್ದ-ಅರ್ಥಗಳು ಸೌಂದರಾತಿಶಯವನ್ನು ಕಲ್ಪಿಸುವ ಅಲಂಕಾರಗಳಾಗಿರುತ್ತವೆ’ ಎಂದು ಆಯ್.ಎಸ್. ಅರಳಗುಪ್ಪಿ ಹೇಳಿದ್ದಾರೆ. ಶಬ್ದ ಮತ್ತು ಅರ್ಥದಿಂದ ಕಾವ್ಯದ ಸೊಬಗು ಹೆಚ್ಚುತ್ತದೆ. ಶಬ್ದ ಚಮತ್ಕಾರದಿಂದ ಉಂಟಾಗುವ ಕಾವ್ಯ ಸೌಂರ್ಯವನ್ನು ‘ಶಬ್ದಾಲಂಕಾರ’ ಎಂದೂ, ಅರ್ಥಪ್ರಧಾನವಾಗಿ ಉಂಟಾಗುವ ಕಾವ್ಯ ಸೊಬಗನ್ನು ‘ಅರ್ಥಾಲಂಕಾರ’ ಎಂದೂ ಕರೆಯಲಾಗುತ್ತದೆ. ಶಬ್ದಗಳ ಮೂಲಕ ಕಾವ್ಯದ ಬಾಹ್ಯ ಸೌಂರ್ಯ ಹೆಚ್ಚುತ್ತದೆ. ಅರ್ಥಾಲಂಕಾರದಿಂದ ಕಾವ್ಯದ ಆಂತರಿಕ ಸೌಂರ್ಯ ಹೆಚ್ಚಿ ಶೋಭಿಸುತ್ತದೆ. “ಅರ್ಥಾಲಂಕಾರಗಳು ನೈಸರ್ಗಿಕವಾಗಿರುವ ಸೌಂದರ್ಯವನ್ನು ಹೆಚ್ಚಿಸುವ ರತ್ನಖಚಿತ ಕುಂದಣದ ಒಡವೆಗಳಿಂತಿದ್ದರೆ, ಶಬ್ದಾಲಂಕಾರಗಳು ಸದ್ದಿಗೋಸ್ಕರ ಕಟ್ಟಿಕೊಂಡ ಗೆಜ್ಜೆಪಾಡಗಗಳಂತೆ’೧ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ ಎಂಬುದನ್ನು ಆಯ್.ಎಸ್. ಅರಳಗುಪ್ಪಿ ಅವರು ಉಲ್ಲೇಖಿಸಿರುವುದು ಗಮನಾರ್ಹವಾಗಿದೆ.
ಶಬ್ದಾಲಂಕಾರದಲ್ಲಿ ಅನುಪ್ರಾಸ ಯಮಕ ಮತ್ತು ಚಿತ್ರಕವಿತ್ವ ಎಂದು ಮೂರು ಪ್ರಕಾರಗಳಿವೆ. ಅರ್ಥಾಲಂಕಾರದಲ್ಲಿ ಉಪಮಾ, ರೂಪಕ, ಉತ್ಪ್ರೇಕ್ಷೆ, ಶ್ಲೇಷೆ, ನಾನಾರ್ಥ, ದೃಷ್ಟಾಂತ ಹೀಗೆ ಅನೇಕ ಪ್ರಕಾರಗಳಿವೆ. ಅರ್ಥದ ದೃಷ್ಟಿಯಿಂದ ಕಾವ್ಯದಲ್ಲಿ ಅಲಂಕಾರಗಳ ಬಳಕೆ ವಿಫುಲವಾಗಿರುವುದು ಸ್ಪಷ್ಟ.
ಶಿಶುನಾಳ ಶರೀಫರು ತಮ್ಮ ತತ್ವಪದಗಳಲ್ಲಿ ಅಲಂಕಾರಗಳನ್ನು ಬಳಸಿರುವುದನ್ನು ಕಾಣಬಹುದು. ಶರೀಫರು ತಮ್ಮ ತತ್ವಪದಗಳಲ್ಲಿ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳ ಬಳಕೆ ಕಂಡುಬರುತ್ತದೆ. ಶರೀಫರು ವಸ್ತುವನ್ನು ವರ್ಣಿಸುವಾಗ ಅಲಂಕಾರವನ್ನು ಬಲವಂತವಾಗಿ ಬಳಸಲಿಲ್ಲ. ಬದಲಾಗಿ, ಸಂದರ್ಭವು ವಸ್ತುವಿಗೆ ತಕ್ಕುದಾದ, ಸೂಕ್ತವೆನಿಸುವ ಅಲಂಕಾರವನ್ನು ಬಳಸುವ ಜಾಣ್ಮೆಯನ್ನು ಮೆರೆದಿರುವುದನ್ನು ಗಮನಿಸಬೇಕು. ಅಲಂಕಾರವನ್ನು ಬಳಸುವ ಉದ್ದೇಶದಿಂದ ಕಾವ್ಯವನ್ನು ಬರೆಯ ಹೊರಟವರಲ್ಲ ಶರೀಫರು. ಆತ್ಮಜ್ಞಾನವನ್ನು ಬೋಧಿಸುವ ಘನ ಉದ್ದೇಶವನ್ನು ಇರಿಸಿಕೊಂಡಿರುವುದರಿಂದ ಅಲಂಕಾರಗಳ ಬಳಕೆ ಆನುಷಂಗಿಕವಾಗಿದೆ. ಶರೀಫರಿಗೆ ಅಲಂಕಾರಕ್ಕಿಂತ ಹೇಳಬೇಕಾದ ನೀತಿ ಮುಖ್ಯವಾಗಿದೆ. ಆದರೂ ಅಲಂಕಾರವನ್ನು ಸಂಪೂರ್ಣವಾಗಿ ನಿರಾಕರಿಸಲಿಲ್ಲ ಎಂಬುದನ್ನು ನೆನಪಿಡಬೇಕು.
“ವಿರೋಧಾಭಾಸ, ರೂಪಕ ಮತ್ತು ಅನ್ಯೋಕ್ತಿಗಳು ಕೇವಲ ಭಾಷಿಕ ತಂತ್ರಗಳು ಮಾತ್ರವಲ್ಲ. ಅವು ಲೋಕಗ್ರಹಿಕೆಯ ವಿಧಾನಗಳೂ ಹೌದು. ವಿರೋಧವಿರುವಂತೆ ಕಂಡರೂ ನಿಜ ಹಾಗಿಲ್ಲ. ನಿಜವು ತರ್ಕ ಮತ್ತು ವಾಸ್ತವ ದೃಷ್ಟಿಯ ಅಳತೆಗೆ ಮೀರಿದ್ದು ಎಂಬುದನ್ನು ವಿರೋಧಾಭಾಸ ಸೂಚಿಸುತ್ತದೆ. ವಾಸ್ತವದಲ್ಲಿ ಪರಸ್ಪರ ಸಂಬಂಧವಿಲ್ಲದಂತೆ ಕಾಣುವ ವಸ್ತು, ಸಂಗತಿ, ಘಟನೆಗಳ ನಡುವೆ ಇರುವ ಸಾಮಾನ್ಯ ಅಂಶಗಳನ್ನು ರೂಪಕ ದೃಷ್ಟಿ ಕಾಣುತ್ತದೆ. ವಿರೋಧಾಭಾಸ ಮತ್ತು ರೂಪಕ ವಿಧಾನಗಳೆರಡೂ ವಾಸ್ತವ ದೃಷ್ಟಿಯ ಮಿತಿಯನ್ನು ಮೀರುವ ಉಪಾಯಗಳಾಗಿವೆ. ಅನ್ಯೋಕ್ತಿಯು ಒಪ್ಪಿದ ತತ್ವದ ಅಭಿನಯವನ್ನು ತತ್ವವು ವಾಸ್ತವ ವಿವರಗಳಲ್ಲಿ ಮೈದಾಳುವುದನ್ನು ಚಿತ್ರಿಸುತ್ತದೆ. ಅಮೂರ್ತ ವಿಚಾರವನ್ನು ಮೂರ್ತ ವಿವರಗಳಲ್ಲಿ ಕಟ್ಟಿಕೊಡುತ್ತದೆ. ಭಾಷೆಯು ತೀರ ಸ್ಥೂಲವಾದ ವಿವರಗಳನ್ನು ಅಭಿವ್ಯಕ್ತಿಸಲು ಸಮರ್ಥವಾದ್ದರಿಂದ ಅದರ ಸಾಮರ್ಥ್ಯವನ್ನು ಹೆಚ್ಚಿಸಲು ಈ ಉಪಾಯಗಳು ಬಳಕೆಯಾಗುತ್ತವೆ.”೨
ಶರೀಫರಿಗೆ ಅಲಂಕಾರಗಳ ಬಗ್ಗೆ ಪರಿಚಯವಿತ್ತು. ಪಾಂಡಿತ್ಯ ಪ್ರದರ್ಶನಕ್ಕಾಗಿ ತತ್ವಪದಗಳಲ್ಲಿ ಅಲಂಕಾರಗಳನ್ನು ಬಳಸದೇ, ಹದವರಿತು ಉಪಮಾ, ರೂಪಕ, ದೃಷ್ಟಾಂತ ಹೀಗೆ ಔಚಿತ್ಯಪೂರ್ಣವಾದ ಅಲಂಕಾರಗಳನ್ನು ಮಾತ್ರ ಬಳಸಿದರು ಎಂಬುದು ಇಲ್ಲಿ ಗಮನಾರ್ಹ.
ಉಪಮಾ ಅಲಂಕಾರ :
ಶರೀಫರು ತಮ್ಮ ತತ್ವಪದಗಳಲ್ಲಿ ಹೆಚ್ಚಾಗಿ ಉಪಮೆಗಳನ್ನು ಬಳಸಿದ್ದಾರೆ. ಕಾವ್ಯದ ಸೌಂರ್ಯವನ್ನು ಮತ್ತು ಅರ್ಥವನ್ನು ಹೆಚ್ಚಿಸುವ ಸಲುವಾಗಿ ಶರೀಫರು ತಮ್ಮ ಪದಗಳಲ್ಲಿ ಅವುಗಳನ್ನು ಹೇರಳವಾಗಿ ಬಳಸಿರುವುದು ತಿಳಿಯುತ್ತದೆ. ಉಪಮಾ ಅಲಂಕಾರವನ್ನು ಬಳಸಿರುವುದಕ್ಕೆ ಅವರ ಕೆಲವು ತತ್ವಪದಗಳನ್ನು ಉದಾಹರಿಸಬಹುದು ;
‘ಕುಂಟ ಕುರುಡರೆಂಟು ಮಂದಿ ರಂಟಿ ಹೊಡೆಯಲೋ
ಸೊಂಟರಗಾಳಿಗೆ ಸಿಗದೆ ಈ ಲೋಕವ ರಂಟಿಹೊಡಿಯಲೋ…’ ಎಂಬ ತತ್ವಪದದಲ್ಲಿ ಈ ಲೋಕವೆಂಬ ಗದ್ದೆಯನ್ನು ನೇಗಿಲಿನಿಂದ ಊಳಬೇಕು ಎಂದು ಹೇಳಿರುವುದು ವಿಶೇಷವಾಗಿದೆ.
‘…ಕೆಸರೊಳಗೆ ಕಮಲ ಉದ್ಭವಿಸಿ ಸುವಾಸನೆಯು
ಹಸನಾಗಿ ದೆಸೆದೆಸೆಗೆ ಎಸಗುತಿಹುದು
ಮುಸುಕಿರ್ದ ಮಾಯಾಂಧಕಾರವನು ಬೆಳಗಿಸುವ
ಶಿಶುಪುರೇಶನ ಹೊಂದಿ ಪರಮ ಸುಖವ ಬಯಸೋ’ (ಪು-೨೦೪) ಇಲ್ಲಿ ಮುಸುಕಿದ ಮಾಯಾಂಧಕಾರ ಎಂಬ ಉಪಮೇಯವನ್ನು, ಶಿಶುಪುರೇಶ ಎಂಬ ಬೆಳಕು ಉಪಮಾನವಾಗಿದ್ದು, ಪರಮಸುಖದ ಭಾವವನ್ನು ತಿಳಿಸುವ ಬೆಳಗುವುದು ‘ಸಮಾನಧರ್ಮ’ವಾಗಿ ಬಂದಿದೆ. ಆದ್ದರಿಂದ ಇದು ಲುಪ್ತೋಪಮೆ ಆಗಿದೆ.
“ಹುಟ್ಟಿದ್ದು ಹೊಲಿಮನಿ
ಬಿಟ್ಹೊಂಟ್ಯೋ ಕಾಯ್ಮನಿ
ಎಷ್ಟಿದ್ದರೇನಿದು ಕಾಲಿಮನಿ..’ (ಪು-೧೯೨) ಈ ವಾಸದ ಮನೆ ಕ್ಷಣಿಕವಾದುದು. ಹುಟ್ಟಿದ್ದು ಇರೋದು ಇವೆಲ್ಲ ಶಾಶ್ವತವಲ್ಲ. ಇಡೀ ತತ್ವಪದ ಉಪಮೆಗಳ ಮೂಲಕವೇ ಬಿಚ್ಚಿಕೊಳ್ಳುತ್ತ ಹೋಗಿ ಅಂತಿಮ ಸತ್ಯವನ್ನು ಅರುಹುತ್ತದೆ. ‘ಚೋಳು ಕಡಿತು ನನಗೊಂದು ಚೋಳು ಕಡಿತು’ ಎನ್ನುವಲ್ಲಿ ‘ಚೋಳು’ ಆತ್ಮಜ್ಞಾನದ ಸ್ವರೂಪದಲ್ಲಿ ಕಾಣಿಸುತ್ತದೆ. ‘ಅಗ್ಗದರವಿಯ ತಂದು ಹಿಗ್ಗಿ ಹೊಲಿಸಿದಿ ಅಂಗಿ’ ಎಂಬುವಲ್ಲಿ ‘ಅಂಗಿ’ ಯು ‘ಪುನರ್ಜನ್ಮ’ ವನ್ನು ಸಂಕೇತಿಸುತ್ತದೆ. ಹೀಗೇ ಶರೀಫರು ತಮ್ಮ ತತ್ವಪದಗಳಲ್ಲಿ ಉಪಮಾ ಅಲಂಕಾರವನ್ನು ಹೇರಳವಾಗಿ ಬಳಸಿರುವುದನ್ನು ಕಾಣಬಹುದು.
ರೂಪಕ ಅಲಂಕಾರ :
ಶರೀಫರು ತತ್ವಪದಗಳು ರೂಪಕಾತ್ಮಕವಾಗಿವೆ. ರೂಪಕ ಭಾಷೆಯನ್ನು ಬಳಸಿದ್ದಾರೆ. ಅಸಮಾನ್ಯವಾದುದನ್ನು ಕಾವ್ಯದಲ್ಲಿ ಅಭಿವ್ಯಕ್ತಿಸುವುದು ಸುಲಭವಲ್ಲ. ಅದನ್ನು ಶರೀಫರು ಸಮರ್ಥವಾಗಿ ಆಗು ಮಾಡಿದ್ದಾರೆ.
“ಸೋರುತಿಹುದು ಮನಿಯ ಮಾಳಿಗೆ ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗೆ…’ ಇಲ್ಲಿ ಮನೆಯನ್ನು ಜ್ಞಾನಕ್ಕೆ ಸಮೀಕರಿಸಲಾಗಿದೆ. ಮನೆ ಎಂದರೆ ಇಲ್ಲಿ ಭೌತಿಕ ಕಟ್ಟಡವಲ್ಲ. ಬೌದ್ಧಿಕ ಜ್ಞಾನದಿಂದ ಕೂಡಿದ ಮನೆ. ಮನೆ ಅಜ್ಞಾನ ಎಂಬ ಮಳೆಯಿಂದಾಗಿ ಹಾನಿಗೊಳಗಾಗುತ್ತದೆ ಎಂಬುದನ್ನು ಶರೀಫರು ಉಪಮೀಕರಿಸಿದ್ದಾರೆ.
ದೇಹವನ್ನು ‘ಕೊಡ’ಕ್ಕೆ ಹೋಲಿಸಿದ ಶರೀಫರು ಅದನ್ನು ಸರಿಯಾಗಿ ಮತ್ತು ಶುದ್ಧವಾಗಿಟ್ಟುಕೊಳ್ಳಬೇಕೆಂಬುದನ್ನು ಅರುಹುತ್ತಾರೆ. ಕೊಡವು ಲೋಹದಿಂದ ಮಾಡಿದ್ದರೆ ಅದು ಮಲೀನವಾಗುತ್ತದೆ. ಮಲೀನವಾಗುವ ಕೊಡವನ್ನು ಬಿಟ್ಟು ಈ ದೇಹ ಎನ್ನುವ ಕೊಡವನ್ನು ನಿತ್ಯವೂ ತೊಳೆಯಬೇಕು. ಶುದ್ಧವಾದ ನೀರನ್ನು ಅದರಲ್ಲಿ ತುಂಬಬೇಕು ಎಂಬುದನ್ನು ಶರೀಫರು;
“ಏನ ಕೊಡ ಏನ ಕೊಡವಾ
ಹುಬ್ಬಳಿ ಮಾಟ ಏನ ಚೆಂದುಳ್ಳ ಕೊಡವಾ
ತಿಕ್ಕಿಲ್ಲ ಬೆಳಗಿಲ್ಲ ತಳತಳ ಹೊಳೀತದ
ಕಂಚಿನದಲ್ಲ, ತಾಮ್ರದ್ದಲ್ಲ ಮಿರಿಮಿರಿ ಮಿಂಚತದ..’ (ಪು-೧೬೩) ಎಂದು ಜ್ಞಾನಕ್ಕೆ ಈ ಕೊಡವನ್ನು ಹೋಲಿಸಿದ್ದು ವಿಶೇಷವಾಗಿದೆ. ಶರೀಫರಿಗೆ ತತ್ವಬೋಧೆ ಮುಖ್ಯ. ಆದರೆ ಆ ತತ್ವಬೋಧೆಯನ್ನು ಪ್ರತಿಮಾತ್ಮಕ ಭಾಷೆಯಲ್ಲಿ ಹೇಳುವುದು ಅವರಿಗೆ ಸಿದ್ಧಿಸಿದೆ.
‘ಮಂಗನ ನೊಡಿದೆನೋ ನಾನೊಂದು
ಮಂಗನ ನೋಡಿದೆನೋ
ರಂಗೀಲೆ ಬಂದೆನ್ನ ಕಂಗೆಡಿಸಿತು ಮನ
ಹಂಗುದೊರೆದು ಅಂಜಿಸುತ್ತ ತಾನಿರುವಂಥ…’ (ಪು-೨೨೨) ಈ ಪದದಲ್ಲಿ ಮನಸ್ಸು ಎಂಬ ಮಂಗನನ್ನು ನೋಡಿರುವುದಾಗಿ ತಿಳಿಸುವ ಶರೀಫರು, ವಿವಿಧ ಆಸೆ-ಆಮಿಷಗಳ ರೂಪದಲ್ಲಿ ಬರುವ ಮೂಲಕ ಅಂಜಿಸುವ ಮನಸ್ಸಿನ ಸ್ವರೂಪವನ್ನು ಮಂಗನಿಗೆ ಹೋಲಿಕೆ ಮಾಡಿದ್ದು ಇಲ್ಲಿ ಗಮನಾರ್ಹ.
ಹೀಗೆ ಶರೀಫರ ಕಾವ್ಯದಲ್ಲಿ ಉಪಮೆಗಳು ಇಡಿಕಿರಿದುಕೊಂಡು ಕಾವ್ಯದ ಸೊಗಸನ್ನು ಮತ್ತು ಅರ್ಥವಂತಿಕೆಯನ್ನು ಹೆಚ್ಚಿಸಿರುವುದು ಸ್ಪಷ್ಟವಾಗಿದೆ.
‘ಅಗ್ಗದರವಿಯ ತಂದು ಹಿಗ್ಗಿ ಹೊಲಿಸಿದಿ ಅಂಗಿ
ಹೆಗ್ಗಣ ಒಯ್ತವ್ವ ತಂಗಿ’ ಎಂಬುವಲ್ಲೂ ‘ಹೆಗ್ಗಣ’ ಎಂಬುದು ‘ಅರಿಷಡ್ವರ್ಗ’ಗಳಿಗೆ ರೂಪಕವಾಗಿ ಬಂದಿದೆ.
“ನಾಯಿ ಬಂದಾವೋ ಬೆನ್ನತ್ತಿ ನಾರಾಯಣ
ನಾಯಿಯೆಂದರೆ ನಾಯಿಯಲ್ಲ
ಮನುಜ ಜನ್ಮದ ಹೀನ ನಾಯಿ..’ ಎಂದು ಮನುಷ್ಯನನ್ನು ಹೀನ ನಾಯಿಗೆ ರೂಪಕವಾಗಿ ವ್ಯಂಗ್ಯೋಕ್ತಿ ರೂಪದಲ್ಲಿ ಬಳಸಿರುವುದು ಸ್ಪಷ್ಟವಾಗುತ್ತದೆ.
‘ಎಷ್ಟು ಕಾಡತಾವ ಕಬ್ಬಕ್ಕಿ ಹೊಲದೊಳಗಿರುವೆನು ಒಬ್ಬಾಕಿ’ ಎಂಬುವಲ್ಲಿ ಕಬ್ಬಕ್ಕಿಗಳು ಎಂಬುದು ಕೀಟಲೆ ಮಾಡುವ ಯುವಕರನ್ನು ಕುರಿತು ಬಳಸಿರುವ ರೂಪಕವಾಗಿದೆ. ಹೆಣ್ಣುಮಗಳೊಬ್ಬಳು ಹೊಲದಲ್ಲಿರುವಾಗ ಅವಳನ್ನು ಚುಡಾಯಿಸುವ ಹುಡುಗರನ್ನು ಕುರಿತು ರೂಪಕ ಭಾಷೆಯಲ್ಲಿ ಶರೀಫರು ಸ್ತ್ರೀನೆಲೆಯಿಂದಲೇ ಅದನ್ನು ಟೀಕಿಸುತ್ತಾರೆ. ಹುಬ್ಬಳ್ಳಿಯ ಶಹರದ ವಾಣಿಜ್ಯ ವ್ಯಾವಹಾರ, ಹೊಸತಾಗಿ ಬಂದ ನೂಲಿನ ಗಿರಣಿ, ಸರ್ಕಾರಿ ಶಾಲೆ, ಸೂಜಿ, ಪ್ರಾಣಿ-ಪಕ್ಷಿಗಳು ಇತ್ಯಾದಿ ಸಂಗತಿಗಳು ಶರೀಫರ ಕಾವ್ಯದ ರೂಪಕ ಸಾಮಗ್ರಿಗಳಾಗಿವೆ. ಶರೀರವನ್ನು ಕಷ್ಟಕ್ಕೊಳಪಡಿಸಿದಾಗ ಮಾತ್ರ ಶಿಶುನಾಳೇಶ ಒಲಿಯಲು ಸಾಧ್ಯ ಎಂಬುದನ್ನು ಹೇಳುವಾಗ ‘ಹೃದಯಕಲಶ’ ಎಂಬ ರೂಪಕವನ್ನು ಬಳಸಿದ್ದಾರೆ.
ಹೀಗೇ ಶರೀಫರು ತಮ್ಮ ಕಾವ್ಯದಲ್ಲಿ ಪ್ರಾಣಿ-ಪಕ್ಷಿಗಳನ್ನು ರೂಪಕಗಳನ್ನಾಗಿ ಬಳಸಿಕೊಂಡು ಭಾಷೆಯ ಮೂಲಕ ಆಧ್ಯಾತ್ಮದ ತಿರುಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಶರೀಫರ ಈ ರೂಪಕಗಳು ಅನಾವಶ್ಯಕವಾಗಿ ಕಾವ್ಯದಲ್ಲಿ ನುಸುಳಿಕೊಂಡಿಲ್ಲ. ಸಹಜವಾಗಿಯೇ ಅವುಗಳನ್ನು ಬಳಸಿ ಕಾವ್ಯಶಕ್ತಿ ಮತ್ತು ಸೌಂರ್ಯವನ್ನು ಹೆಚ್ಚಿಸಿದ್ದಾರೆ.
ದೃಷ್ಟಾಂತ ಅಲಂಕಾರ :
ಶರೀಫರ ಪದಗಳಲ್ಲಿ ದೃಷ್ಟಾಂತಗಳು ಕಾಣಸಿಗುತ್ತವೆ. ಶರೀಫರು ಅಮೂರ್ತವಾದುದನ್ನು ಭಾಷೆಯ ಮೂಲಕ ಅಭಿವ್ಯಕ್ತಿಸುವ ಸಂದರ್ಭದಲ್ಲಿ ದೃಷ್ಟಾಂತಗಳ ಮೊರೆ ಹೋಗುತ್ತಾರೆ. ಶಿವನನ್ನು ಒಲಿಸಿಕೊಳ್ಳಬೇಕಾದಾಗ ಗುರುವಿನ ಮಾರ್ಗದರ್ಶನ ಅಗತ್ಯವಾಗಿರುತ್ತದೆ. ‘ಶಿವಪಥವನರಿವೊಡೆ ಗುರುಪಥವೇ ಮೊದಲು’ ಎನ್ನುವಂತೆ ಗುರುವಿನ ಕೃಪಾಶೀರ್ವಾದದ ಮೂಲಕ ಶಿವಸಾಯುಜ್ಯ ಪಡೆಯಲು ಸಾಧ್ಯ ಎಂಬುದನ್ನು ಶರೀಫರು, ಗುರುವನ್ನೇ ಗಂಡನನ್ನಾಗಿ ಮಾಡಿಕೊಳ್ಳುವುದು ಆಶ್ಚರ್ಯವಾದರೂ, ಅದು ಸತ್ಯವಾಗಿದೆ. ಆದ್ದರಿಂದಲೇ ಅವರು;
“ನನ್ನೊಳಗೆ ನಾ ತಿಳಕೊಂಡೆ
ನನಗೆ ಬೇಕಾದ ಗಂಡನ್ನ ಮಾಡಿಕೊಂಡೆ
………………………………………………
ಶಿವ ಶಿವಯೆಂಬ ಹಾದಿ ಬೇಡಿಕೊಂಡೆ
ಗುರೂಪದೇಶವ ಪಡಕೊಂಡೆ
ಈ ಭವದ ಬಾರದಂತೆ ಮಾಡಿಕೊಂಡೆ
ಗುರುಗೋವಿಂದನ ಪಾದಾ ಹಿಡಕೊಂಡೆ’ (ಪು-೪೨) ಎನ್ನುವ ಪದದಲ್ಲಿ ದೇಹ ಮತ್ತು ಮನಸ್ಸನ್ನೇ ದೃಷ್ಟಾಂತವನ್ನಾಗಿ ಮಾಡಿಕೊಂಡಿದ್ದಾರೆ. ದೇಹ ಮತ್ತು ಮನಸ್ಸಿನ ನಡುವೆ ಹೊಂದಾಣಿಕೆ ಮುಖ್ಯ. ಅದನ್ನು ಅನೇಕ ದೃಷ್ಟಾಂತಗಳ ಮೂಲಕ ಅವರು ಪ್ರತಿಪಾದಿಸಿದ್ದಾರೆ.
“ಇದೇ ಮನಿ ಇದೇ ಮನಿ
ಹೃದಯದೊಳಗೆ ನಲಿದಾಡುವ ಆತ್ಮನಿಗೆ
ಕುಟ್ಟಿದ ಕಣಕದಾ ಹಿಟ್ಟುಗಂಟಲೊಳು
ಎಟ್ಟಿತನದಿ ಕಳದಿಟ್ಟ ಮಹಾತ್ಮಗೆ…’ (ಪು-೫೧) ಶರೀಫರಿಗೆ ಜೀವಾತ್ಮ ಮತ್ತು ಪರಮಾತ್ಮಗಳ ನಡುವೆ ಸೇತುವೆಯಾಗುವ ಸದ್ವಿಚಾರಗಳು ಅವಶ್ಯ. ಅದನ್ನು ಅವರು ಹೃದಯವಾಸಿಯಾಗಿರುವ ಆತ್ಮನನ್ನು ಕಾಣಲು ದೇಹವೇ ನಿಜವಾದ ಮನೆ. ದೇಹದ ನಿರಾಕರಣೆ ಮಾಡದೇ ಆತ್ಮ ಮತ್ತು ಪರಮಾತ್ಮ ಐಕ್ಯವಾಗಬೇಕೆಂಬ ಹಂಬಲವನ್ನು ಶರೀಫರು ದೃಷ್ಟಾಂತದ ಮೂಲಕ ಕಟ್ಟಿಕೊಟ್ಟಿದ್ದಾರೆ.
ಪ್ರಾಸ :
ಶರೀಫರು ತಾವು ರಚಿಸಿದ ಪದಗಳಲ್ಲಿ ಪ್ರಾಸಪದಗಳನ್ನು ಯಥೇಚ್ಛವಾಗಿ ಬಳಸಿದ್ದಾರೆ. ಶರೀಫರ ಕಾವ್ಯದ ಮೆರಗನ್ನು ಹೆಚ್ಚಿಸುವಲ್ಲಿ ಪ್ರಾಸಪದಗಳು ನೆರವಾಗಿವೆ. ಜನಪದ ಭಾಷೆಯಲ್ಲಿ ಪ್ರಾಸಕ್ಕೆ ಹೆಚ್ಚಿನ ಮಾನ್ಯತೆ ಇದೆ. ‘ಪ್ರಾಸವಿಲ್ಲದ ಪದವ ಏಸ ಹಾಡಿದರೇನು’ ಎಂಬಂತೆ ಶರೀಫರು ಪ್ರಾಸಕ್ಕೆ ಮಾನ್ಯತೆಯನ್ನು ಕೊಟ್ಟಿರುವುದು ಕಂಡುಬರುತ್ತದೆ.
“…ನೀ ಮಾಡೋದು ಘಳಿಗಿ ಸಂತಿ
ಮೇಲ್ ಮಾಳಗಿ ಕಟ್ಟಬೇಕಂತಿ
ಆನೆ-ಅಂಬಾರಿ ಏರಬೇಕಂತಿ
ಮಣ್ಣಲಿ ಇಳಿಯೂದ ತಣ್ಣಗ ಮರತಿ…’(ಪು-೧೯೬) ಇಲ್ಲಿ ಅಂತ್ಯಪ್ರಾಸ ಇದೆ. ಪ್ರಾಸದ ಜೊತೆಗೆ ಲಯವೂ ಕೂಡ ನಿಯಮಿತವಾಗಿರುವುದರಿಂದ ಹಾಡಲು ಯೋಗ್ಯವಾಗಿದೆ. ಶರೀಫರು ಲಯಜ್ಞಾನವನ್ನು ಹೊಂದಿದ ತತ್ವಪದಕಾರರು ಎಂಬುದು ಇದರಿಂದ ವೇದ್ಯವಾಗುತ್ತದೆ. ಇನ್ನೊಂದು ಪದವನ್ನು ಉದಾಹರಿಸುವುದಾದರೆ;
“ಕೈಲೆ ಕೈವಾಲಿ ಕಟ್ಟಿ
ತಗಡಿನಸ್ತವನಿಟ್ಟಿ
ಶಾಸ್ತ್ರಧರ್ಮವ ಬಿಟ್ಟಿ
ಕುದುರಿ ಕಂದೂರಿ ಮಾಡಿ
ಮಸೂದಿಗ ಓದೆಲ್ಲೋ ಎಡಿ
ಮುಲ್ಲಾ ಓದುಕಿ ಮಾಡಿ…’ (ಪು-೩೫೯) ಎಂಬ ಪದದಲ್ಲಿ ಪ್ರಾಸವನ್ನು ಬಳಸುವ ಮೂಲಕ ಭಾಷೆಯನ್ನು ಸಹ್ಯಗೊಳಿಸಿರುವರು. ಹಿಂದು ಮುಸ್ಲಿಂ ಧರ್ಮಗಳ ಸಾಮರಸ್ಯವನ್ನು ಹೇಳುವ ಈ ಪದದಲ್ಲಿ ಪ್ರಾಸ ಅತ್ಯಂತ ಮಹತ್ವ ಪಡೆದುಕೊಂಡಿದೆ. ಪದ್ಯಗಳಲ್ಲಿನ ಅಂತ್ಯಪ್ರಾಸ ಕಾವ್ಯಕ್ಕೊಂದು ಸೊಬಗು ತಂದಿದೆ. ಶರೀಫರ ಪದಗಳಲ್ಲಿ ಆದಿಪ್ರಾಸವೂ ಕಾಣಿಸಿಕೊಳ್ಳುತ್ತದೆ.
ಆದಿಪ್ರಾಸಕ್ಕೂ ಅವರ ಪದಗಳಲ್ಲಿ ಸ್ಥಾನವಿದೆ. ಆದಿಪ್ರಾಸ ಇರುವ ಅನೇಕ ಪದ್ಯಗಳಲ್ಲಿ ಇದೊಂದು ಉದಾಹರಣೆ;
“ಅಚ್ಚ ಹಸುರು ಕೆಂಪುಪುಚ್ಚದ ಕೋಳಿ
ಅಚ್ಯುತಗೆಚ್ಚರ ಕೊಟ್ಟಂಥ ಕೋಳಿ
ಹೆಚ್ಚಿನ ಬ್ರಹ್ಮನು ಮೆಚ್ಚಿದ ಕೋಳಿ
ಹುಚ್ಚೆದ್ದು ರುದ್ರನ ಕಚ್ಚಿದ ಕೋಳಿ…’ (ಪು-೨೨೪) ಇಲ್ಲಿ ವೃತ್ತಾನುಪ್ರಾಸದ ಛಾಯೆ ಇದೆ. ಜೊತೆಗೆ ಅಚ್ಚ, ಅಚ್ಯುತ, ಹೆಚ್ಚಿನ, ಹುಚ್ಚೆದ್ದು ಪದಗಳಲ್ಲಿ ಆದಿಪ್ರಾಸವು ಇದ್ದು, ಕವಿತೆಯ ಸೌಂದರ್ಯವನ್ನು ಹೆಚ್ಚಿಸಿದೆ. ‘ಕೋಳಿ’ ಇಲ್ಲಿ ವೈರಾಗ್ಯದ ಸಂಕೇತವಾಗಿದೆ. ಶರೀಫರು ಆದಿ ಮತ್ತು ಅಂತ್ಯಪ್ರಾಸಗಳನ್ನು ಬಳಸಿರುವರು. ಅಂತ್ಯಪ್ರಾಸಕ್ಕೆ ಉದಾಹರಣೆ;
“…ವಸ್ತಿ ಇರುವ ಮನಿ
ಗಸ್ತಿ ತಿರುಗುವ ಮನಿ
ಶಿಸ್ತಿಲೆ ಕಾಣುವ ಶಿವನಮನಿ
ಚಿಂತೆ ಕಾಂತೆಯ ಮನಿ
ಸಂತೆ ಸವತಿಯ ಮನಿ
ಅಂತು ಬಲ್ಲವರಿಗೆ ಆಡುವ ಮನಿ…’(ಪು-೧೯೨) ಶರೀಫರು ರಚಿಸಿದ ಪದಗಳಲ್ಲಿ ದ್ವಿಪದಿ, ತ್ರಿಪದಿ, ಷಟ್ಪದಿಗಳೂ ಸೇರಿಕೊಂಡಿರುವುದು ವಿಶೇಷವಾಗಿದೆ. ಒಟ್ಟಾರೆ ಶರೀಫರು ನೀತಿಬೋಧೆಯನ್ನು ತಮ್ಮ ತತ್ವಪದಗಳ ಮೂಲಕ ಮಾಡಿರುವುದಾದರೂ ಅದರ ಪರಿಣಾಮದ ತೀವ್ರತೆಗಾಗಿ ಅಲಂಕಾರಗಳನ್ನು ಬಳಸಿರುವುದನ್ನೂ ಮರೆಯುವಂತಿಲ್ಲ. ಹೀಗಾಗಿ ಅವರ ತತ್ವಪದಗಳು ಅಲಂಕಾರಗಳಿAದ ಶೋಭಿಸಿದೆ. ಅರ್ಥವಂತಿಕೆಯನ್ನು ಹೆಚ್ಚಿಸಿಕೊಂಡಿದೆ. ಅಧ್ಯಾತ್ಮದ ಉದ್ದೇಶ, ಸಾಮಾಜಿಕ ಎಚ್ಚರ, ಜನಬದುಕಿನ ಕಥನ, ಜೀವನದ ನಿಗೂಢತೆ ಎಲ್ಲವನ್ನೂ ಹೇಳಲು ಪ್ರಯತ್ನಿಸಿದ ಶರೀಫದ ಪದಗಳಲ್ಲಿ ಅಲಂಕಾರಗಳ ಪ್ರಾಮುಖ್ಯತೆಯೂ ಪ್ರಶಂಸನೀಯ ಅಂಶಗಳಲ್ಲಿ ಒಂದು ಎಂಬುದನ್ನು ಅಲ್ಲಗಳೆಯಲಾಗದು.
ಕೊನೆ ಟಿಪ್ಪಣಿಗಳು :
೧. ಆಯ್.ಎಸ್. ಅರಳಗುಪ್ಪಿ, ಹೊಸಗನ್ನಡ ವ್ಯಾಕರಣ, ಪುಟ-೨೦೧, (೨೦೧೦)
೨. ಓ.ಎಲ್. ನಾಗಭೂಷಣಸ್ವಾಮಿ, ತತ್ವಪದ ಪ್ರವೇಶಿಕೆ, ಪು-೯೭-೯೮, (೨೦೧೭)
ಆಕರ ಕೃತಿ
ಶಿವಾನಂದ ಗುಬ್ಬಣ್ಣವರ (ಸಂ), ಶಿಶುನಾಳ ಶರೀಫರ ಗೀತೆಗಳು, (೧೯೮೫)
