ಕರ್ನಾಟಕ ಸಂಗೀತ ಪ್ರಸ್ತುತಿಯಲ್ಲಿ ‘ಮನೋಧರ್ಮ ಸಂಗೀತ’ ನಂಗೆ ಬಹಳ ಇಷ್ಟವಾದುದು. ಪ್ರತಿ ಕಚೇರಿಯಲ್ಲೂ ಸಂಗೀತಗಾರನು ತಾನು ಎತ್ತುಕೊಂಡ ಕೃತಿಯನ್ನು ಹೇಗೆಲ್ಲಾ ಬೆಳೆಸುತ್ತಾ ವಿಸ್ತಾರ ಮಾಡುವನೆಂದು ಮಗುವಿನಂತೆ ತೀವ್ರ ಕುತೂಹಲವುಳ್ಳವನಾಗಿ ನೋಡ್ತಾ ಕಾಯ್ತಾ ಕೂತಿರ್ತೀನಿ. ನನಗನ್ನಿಸುವುದು ಆತನ ನಿಜವಾದ ಪ್ರತಿಭೆ ಇರುವುದು ಈ ವಿಸ್ತರಣೆಯಲ್ಲೇ ಅಂತ. ಇದು ನನ್ನ ವೈಯುಕ್ತಿಕವಾದ ಅಭಿಮತ. ಯಾಕಂದರೆ ರಾಗ ತಾಳ ಸಮಯಗಳು ವಾಗ್ಗೇಯಕಾರರಿಂದಲೇ ನಿಗದಿಕೊಂಡು ರೂಪಿತವಾಗಿವೆ. ಸಂಗೀತಗಾರ ಅವನ್ನು ಬರಿದೇ ಹಾಡಿಬಿಟ್ಟರೆ ಹೇಗೆ? ಆ ಕೃತಿಗಳನ್ನು ವಾಗ್ಗೇಯಕಾರನ ಸ್ವರ ಬಂಧದಿಂದಾಚೆಗೆ ಬೆಳೆಸಿ ವಿಸ್ತರಿಸಿ ನಾನಾ ರೀತಿಯ ಸ್ವರಸಂಚಾರವನ್ನು ಏರ್ಪಡಿಸಿ ಶೋತ್ರ್ರುವಿಗೆ ರಸದೌತಣವನ್ನು ಬಡಿಸಬೇಕು. ಇದು ಕೇವಲ ಆನಂದದ ಉದ್ದೀಪನ ಮಾತ್ರವಲ್ಲ ಆತ್ಮ ಜಾಗೃತಿಯ ವಿವೇಕವೂ ಹೌದು. ಹೀಗೇ ಭೂಮವಾಗಿ ಸಂಗೀತ ಬೆಳೆಯುತ್ತಿರುವಂತೆಯೇ ಕೇಳುಗನ ಬುದ್ದಿ ಭಾವಗಳಲ್ಲಿ ಅಡಗಿರುವ ಅಂಧಕಾರವು ತೊಲಗುವುದು. ಇದೊಂದು ವಿಸ್ತಾರವಾದ ಮಾತುಕತೆ.
ಮನೋಧರ್ಮ ಸಂಗೀತದಂತೆಯೇ ಕಾವ್ಯವು ಕೂಡ. ಅಥವಾ ಎಲ್ಲ ಕಲೆಯ ಪ್ರಕಾರಗಳು. ಎಷ್ಟೋ ಕವಿಯು ಶುರು ಮಾಡಿದ ಕವಿತೆ ಶುರುವಿನಲ್ಲೇ ಮುಗ್ಗರಿಸಿಬಿಡುತ್ತದೆ. ಅದಕ್ಕೆ ಹೇಗೆ ಸಾಗಬೇಕೆಂಬ ತಿಳಿವು ಇಲ್ಲ, ಹೇಗೆ ಹರಡಿಕೊಳ್ಳಬೇಕೆಂಬ ಅರಿವು ಇಲ್ಲ. ಅದಕ್ಕಿರುವುದು ಮುನ್ನುಗ್ಗುವ ಆವೇಶ ಮಾತ್ರ. ಆ ಆವೇಶವು ಕವಿತೆಯನ್ನು ಒಂದು ‘ಘೋಷಣೆ ಮಾಡಿ ಕವಿತೆಯ ಸ್ಥಿತಿಯನ್ನು ಕಳೆದು ಬಿಡುತ್ತದೆ. ಹೌದು ಅದೊಂದು ಸಾಲಿಗಾಗಿಯೇ ಇಡಿ ಕವಿತೆ ಹುಟ್ಟಿಕೊಳ್ಳುವುದು. ಆದರೆ ಆ ಸಾಲು ಮಾತ್ರವೇ ಕವಿತೆ ಆಗಲಾರದು. ಹೃದಯವಿದ್ದ ಮಾತ್ರ ಮನುಷ್ಯರಾಗಲು ಸಾಧ್ಯವಿಲ್ಲ ಅಂತೆಯೇ ದೇಹವಿದ್ದ ಮಾತ್ರಕೆ ಮನುಷ್ಯರಾಗಲು ಸಾಧ್ಯವಿಲ್ಲ, ಹೃದಯವಿರಬೇಕು. ಅಲ್ಲವೇ?
ಸ್ಪೂರ್ತಿ, ಪ್ರೇರಣೆಗಳಿಗೆ ಮುಸಲಧಾರೆಯಂತೆ ಸ್ಪುರಿಸುವ ಬಹುತೇಕ ಕವಿತೆಗಳು ಹದವಾದ ಪ್ರಮಾಣದಲ್ಲಿ ಸಿದ್ದವಾಗಿರುವುದಿಲ್ಲ ( ಇಲ್ಲಿ ‘ಪೂರ್ಣ’ ಎಂಬ ಪದ ಬಳಸಲಾಗದು) ಬೀಡು ಕಬ್ಬಿಣವನ್ನು ಚೆನ್ನಾಗಿ ಕಾಯಿಸಿ ಬಡಿದು ತಿದಿಯೊತ್ತಿ ಆಯುಧವಾಗಿಸಿ ನಂತರ ಅರದಿಂದ ಉಜ್ಜಿ ಹರಿತಗೊಳಿಸುವಂತೆ ಕವಿತೆಯನ್ನು ಮೂಲಧಾತುವನ್ನು ಹಿಡಿದುಕೊಂಡು ಅದನ್ನು ಪದ, ಪ್ರಾಸ, ಲಯ ಗತಿಗಳಿಗೆ ಹೊಂದಿಸಿ, ಬೇರೆ ಬೇರೆ ಪರಿಕರ, ಉಪಪರಿಕರಗಳೊಂದಿಗೆ ಅದನ್ನು ಪ್ರಸ್ತುತಿಗೊಳಿಸುತ್ತಾ ಹೋಗುತ್ತಾನೆ. ಆದರೆ ಈ ಪ್ರಕ್ರಿಯೆಯನ್ನು ಹೀಗೆಯೇ ಇರಬೇಕೆಂದು ಬಯಸಲುಬಾರದು. ಇದು ವ್ಯಕ್ತಿ ಸಹಜವಾದ ಮತ್ತು ನುಡಿ ಸಹಜವಾದ ನುಡಿಗಟ್ಟು, ನಡೆಗಟ್ಟುಗಳಿಂದ ನಿರ್ಮಿತವಾಗಬೇಕೇ ಪರಂತು ಸೂತ್ರಗಳಿಂದ ಸೃಷ್ಟಿಸಲು ಸಾಧ್ಯವಾಗುವುದಿಲ್ಲ.
ವಾಪಸು ಈ ಮನೋಧರ್ಮ ಸಂಗೀತದ ರೂಪಕಕ್ಕೆ ಬರುವುದಾದರೆ ಕವಿತೆಯು ಥೇಟ್ ಹೀಗೆಯೇ. ಆದರೆ ಬಹಳಷ್ಟು ಸಾರ್ತಿ ಕವಿತೆ ಶುರು ಮಾಡುವ ನಾವು ಅದನ್ನು ಮುಗಿಸಲು ಬಾರದೆ ಓತಪ್ರೋತವಾಗಿ ದಿಕ್ಕು ತಪ್ಪಿ ಎಲ್ಲೆಲ್ಲೋ ಅಲೆದು ವಿಶ್ರಮಿಸುವುದು ಉಂಟು. ಇಲ್ಲಿ ಓದುಗ ಕೂಡ ಬಸವಳಿದುಬಿಡುತ್ತಾನೆ. ಇಂತಹ ಆಭಾಸಗಳಿಂದಲೇ ಓದುಗ ಕಾವ್ಯದ ಓದಿನಿಂದ ದೂರವುಳಿವುದು ಕೂಡ. ಇಲ್ಲಿ ಕೃಷ್ಣ ಹೇಳುತ್ತಿರುವ ‘ಪಾಯಿಂಟ್ ಆಫ್ ಎಂಟ್ರಿ’ ಕಾವ್ಯದಲ್ಲೂ ಬಹಳ ಮುಖ್ಯವಾದ್ದು. ಒಂದು ಹರವು, ಸಂಗತಿಯನ್ನು ಆರಿಸಿಕೊಂಡು ಶುರುವಾಗುವ ಕವಿತೆ ಆ ದಾರಿಯನ್ನು ಬಿಟ್ಟು ಮತ್ತೇನೋ ಹೇಳುತ್ತಾ ಮತ್ತೆಲ್ಲೋ ಮುಗಿದುಬಿಡುತ್ತದೆ. ಈ ಹೇಳುವ ನಿರೂಪಿಸುವ ಸಂಗತಿಗೆ ಒಂದು ಒಳತಂತು ಇಲ್ಲದೆ ಹೋದರೆ, ಅದು ತನ್ನನು ವಿಸ್ತರಿಸಿಕೊಳ್ಳದೆ ಹೋದರೆ ಕತ್ತರಿಸಿಟ್ಟ ದಾರದ ತುಂಡುಗಳಂತೆ ಭಾಸವಾಗುತ್ತದೆ ಅಥವಾ ಹರಿದುದಿಟ್ಟ ಚಿತ್ರದ ತುಂಡುಗಳಂತೆ ಕಾಣುತ್ತದೆ ಯಾವುದೊಂದೂ ಒಂದಕ್ಕೊಂದು ಸಂಬಂಧವಿರುವುದಿಲ್ಲ. ನನ್ನ ಓರಗೆಯ ಗೆಳೆಯರು ಕೆಲವೊಮ್ಮೆ ನಾನೂ ಇಂತಹ ತಪ್ಪು ಮಾಡುವುದುಂಟು. ಮೊದಲ ಪ್ಯಾರಕ್ಕು ಎರಡು ಮೂರನೆಯದಕ್ಕು ಸಂಬಂಧವೇ ಇರದ ಚಿತ್ರ, ಸನ್ನಿವೇಶ, ಪದ, ಪದಾರ್ಥಗಳು ಕೊನೆಯಲ್ಲಿ ಮತ್ತಾವುದೋ ಪಂಚಿಂಗ್ ಸಾಲಿನೊಂದಿಗೆ ಕವಿತೆ ಮುಕ್ತಾಯವಾಗಿಬಿಡುತ್ತದೆ. ಆ ಕ್ಷಣಕ್ಕೆ ನಮಗೆ ಸಿಗಬಹುದಾದ ಲೈಕು, ಕಾಮೆಂಟುಗಳು ಬಂದು ನಾವು ಹಿಗ್ಗಿಬಿಡುತ್ತೇವೆ.. ಆದರೆ ಒಂದೆರಡು ಓದುಗಳಲ್ಲೇ ತೊಡಕು ಶುರುವಾಗುತ್ತದೆ. ಅಸ್ಪಷ್ಟ, ಅಸಂಗತತೆ ಹೆಚ್ಚಾಗಿ ಅನರ್ಥವು ಪ್ರಾಪ್ತಿಯಾಗಿ, ಕೆಲವೊಮ್ಮೆ ಅನರ್ಥವೂ ಇಲ್ಲ ಕವಿತೆ ದಿಕ್ಕುಗೆಟ್ಟ ಪರದೇಸಿಯಾಗಿ ಯಾವುದೊ ಮೂಲೆ ಸೇರಿ ಕಳೇಬರವಾಗಿಬಿಡುತ್ತದೆ.
ಕವಿತೆಯ ‘ಪಾಯಿಂಟ್ ಆಫ್ ಎಂಟ್ರಿ’ ಯು ಕಟ್ಟಕಡೆಯವರೆಗೂ ಉಳಿದುಕೊಂಡರೆ ಅಂದರೆ ವಸ್ತುಶಃ ಅಲ್ಲ. ಎತ್ತರಕ್ಕೆ ಏರುವಾಗ ವಿಸ್ತಾರಕ್ಕೆ ಹರಡುವಾಗ ಥೇಟ್ ಸಂಗೀತದ ಹಾಗೇ ಕಾವ್ಯದ ನೆಲೆ ಕೂಡ ಬಲೆಯ ಹಾಗೇ ಹೆಣೆದುಕೊಳ್ಳುತ್ತಾ ಹೋದರೆ ಅದೊಂದು ವಿನ್ಯಾಸವಾಗುತ್ತದೆ. ಇಲ್ಲದೆ ಹೋದರೆ ಬೇರೆ ಬೇರೆ ಹೂಗಳ ಪಕಳೆ ಕಿತ್ತು ನಿರರ್ಥಕವಾಗಿ ಎಸೆದುಬಿಟ್ಟ ಹಾಗೆ ಆಗುತ್ತದೆ.
ಕವಿತೆಯ ನುಡಿ ವಿನ್ಯಾಸ ಮತ್ತು ವಸ್ತು ಸುರುಳಿಪಾತಳಿಗಳು ನನ್ನ ಪಾಲಿಗೆ ಸಂಗೀತದಂತೆಯೇ ಭಾಸವಾಗುತ್ತದೆ. ಇದು ನನ್ನ ವೈಯುಕ್ತಿಕ ಅಭಿಮತ. ಲೋಕಸತ್ಯವೇನಲ್ಲ. ಗೆಳೆಯರು, ಹಿರಿಯರು ಈ ಕುರಿತು ಬೇರೆ ಬೇರೆ ಹರಹಿನಲ್ಲಿ ಚರ್ಚಿಸಬಹುದು.
ರಾಜೇಂದ್ರ ಪ್ರಸಾದ್
(ಟಿ ಎಂ ಕೃಷ್ಣ ರವರ “ಮನೋಧರ್ಮ” ಪ್ರಸ್ತುತಿಯನ್ನು ಕುರಿತಂತೆ “)