ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ವಾರಕ್ಕೂ ಹೆಚ್ಚು ದಿನಗಳ ಕಾರ್ಯಾಚರಣೆ, ಸಾಕ್ಷ್ಯ ಸಂಗ್ರಹ, ಆರೋಪಿಗಳ ಮಾಹಿತಿ ಕಲೆ ಹಾಕಿದ ನಂತರ ಈಗ ಪೊಲೀಸರು ಆರೋಪಿ ದರ್ಶನ್ ಕಡೆಯಿಂದ ಸ್ವ ಇಚ್ಚಾ ಹೇಳಿಕೆ ದಾಖಲಿಸಿದ್ದಾರೆ. ಅದರಂತೆ ಆರೋಪಿ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆಯಲ್ಲಿ ತಮ್ಮ ಪಾತ್ರದ ಬಗ್ಗೆ ಇಂಚಿಂಚೂ ಮಾಹಿತಿಯನ್ನು ನೀಡಿದ್ದಾರೆ.
ಕಳೆದ ಎಂಟು ದಿನದಿಂದಲೂ ದರ್ಶನ್ ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ಸತತ ವಿಚಾರಣೆ, ತನಿಖೆಗಳು ನಡೆಯುತ್ತಲೇ ಇವೆ. ಇದರ ನಡುವೆ ದರ್ಶನ್ ಪೊಲೀಸರ ಮುಂಚೆ ಸ್ವ-ಇಚ್ಛಾ ಹೇಳಿಕೆ ದಾಖಲಿಸಿದ್ದು, ರೇಣುಕಾ ಸ್ವಾಮಿ ಕೊಲೆಯಲ್ಲಿ ತಮ್ಮ ಪಾತ್ರ ಏನೆಂಬುದನ್ನು ಪೊಲೀಸರಿಗೆ ವಿವರಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆಯಲ್ಲಿ ತಮ್ಮ ಪಾತ್ರದಿಂದ ಹಿಡಿದು, ಹಲ್ಲೆ ಮಾಡಿದ್ದು, ಹಲ್ಲೆ ಮಾಡಿದ ರೀತಿ, ಪ್ರಕರಣದಲ್ಲಿ ತಮ್ಮ ಹೆಸರು ಮುನ್ನೆಲೆಗೆ ಬರದಂತೆ ತಡೆಯಲು ಮಾಡಿದ್ದ ಪ್ರಯತ್ನದ ಬಗ್ಗೆಯೂ ದರ್ಶನ್ ವಿವರಿಸಿದ ಬಗ್ಗೆ ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಪ್ರದೋಶ್ಗೆ 30 ಲಕ್ಷ ರೂಪಾಯಿ ಹಣ ನೀಡಿದರ ಬಗ್ಗೆಯೂ ಮಾಹಿತಿ ನೀಡಿರುವ ದರ್ಶನ್, ಆ ನಂತರ ಪ್ರಕರಣದಿಂದ ಹೊರಬರಲು ಯಾವ್ಯಾವ ಪ್ರಭಾವಿಗಳನ್ನು ಸಂಪರ್ಕಿಸಿದ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸ್ವ-ಇಚ್ಛೆ ಹೇಳಿಕೆ ದಾಖಲಿಸಿದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಆಗಬಹುದೆಂಬ ನಿರೀಕ್ಷೆ ಹಾಗೂ ಈಗಾಗಲೇ ಪೊಲೀಸ್ ಕಸ್ಟಡಿ ತೀರಾ ಹಿಂಸೆಯ ವಾತಾವರಣ ಸೃಷ್ಟಿಯಾದ ಕಾರಣ ಆದಷ್ಟು ಬೇಗ ಈ ಒತ್ತಡದಿಂದ ದೂರವಾಗುವ ದೃಷ್ಟಿಯಿಂದ ದರ್ಶನ್ ಹೀಗೆ ಮಾಡಿರಬಹುದು ಎನ್ನಲಾಗುತ್ತಿದೆ.
ದರ್ಶನ್ ಹೇಳಿಕೆಯ ಅನುಸಾರ ಪೊಲೀಸರು ಸಾಕ್ಷ್ಯಗಳನ್ನಷ್ಟೆ ಒಂದು ಮಾಡಬೇಕಿದೆ. ಈಗಾಗಲೇ ಬಹುತೇಕ ಸಾಕ್ಷ್ಯಗಳನ್ನು ಕಲೆ ಹಾಕಿರುವ ಪೊಲೀಸರು ಕೆಲವೇ ದಿನಗಳಲ್ಲಿ ಪ್ರಕರಣಕ್ಕೆ ಮುಕ್ತಿ ಸಿಕ್ಕಿ, ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎನ್ನಲಾಗಿದೆ.
ಸ್ವ ಇಚ್ಚಾ ಹೇಳಿಕೆಯಿಂದ ದರ್ಶನ್ ಪೊಲೀಸ್ ಕಸ್ಟಡಿ ಅಂತ್ಯವಾಗುವ ಸಾಧ್ಯತೆ ಇದ್ದು, ಜೂನ್ 20 ಕ್ಕೆ ದರ್ಶನ್ ಹಾಗೂ ಇತರೆ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ನಾಳೆ ನ್ಯಾಯಾಲಯದ ಆದೇಶದಂತೆ ದರ್ಶನ್ ಹಾಗೂ ಇತರ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡಬೇಕಾಗಬಹುದು ಎನ್ನಲಾಗಿದೆ.