ಬಿಡದಿ ಬಳಿಯ ಹಕ್ಕಿಪಿಕ್ಕಿ ಕಾಲೋನಿ ಪಕ್ಕದಲ್ಲೇ ಆದ ಮಾತು ಬಾರದ, ಕಿವಿ ಕೇಳದ 15 ವರ್ಷದ ಬಾಲಕಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅದೊಂದು ರೈಲು ಅಪಘಾತ ಹಾಗೂ ಯಾವುದೇ ಅತ್ಯಾಚಾರ ಅಥವಾ ಕೊಲೆ ನಡೆದಿಲ್ಲ ಎಂದು ಹೇಳಿದ್ದಾರೆ.
ಹಕ್ಕಿಪಿಕ್ಕಿ ಜನಾಂಗದ ಅಪ್ರಾಪ್ತ ಬಾಲಕಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿ ಬಳಿಕ ಹತ್ಯೆಗೈದು ರೈಲ್ವೆ ಹಳಿಯ ಬಳಿ ಶವ ಎಸೆದು ಪರಾರಿ ಆಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿತ್ತು. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಪೊಲೀಸರು ಇದೊಂದು ರೈಲ್ವೆ ಅಪಘಾತ, ಅತ್ಯಾಚಾರದ ಮಾಹಿತಿ ಎಲ್ಲವೂ ಊಹಾಪೋಹ ಎಂದು ಹೇಳಿದ್ದಾರೆ.
ಬಾಲಕಿ ಶವದ ಮರಣೋತ್ತರ ಪರೀಕ್ಷೆ ವರದಿ ಇದನ್ನು ದೃಢಪಡಿಸಿದ್ದು ಬಾಲಕಿಗೆ ರೈಲು ಡಿಕ್ಕಿ ಹೊಡೆದಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಸಾಬೀತುಪಡಿಸುವ ಸಿಸಿಟಿವಿ ಫೂಟೇಜ್ ಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಪೊಲೀಸರು ಸಹ ಈ ವಿಡಿಯೊ ಪರಿಶೀಲಿಸಿ ನಿಜವೆಂದು ಹೇಳಿದ್ದಾರೆ.
ಈ ಬಾಲಕಿ ಸಂಜೆ ರೈಲು ಹಳಿ ಬಳಿ ತೆರಳಿದ್ದಾಗ 6.07 ಕ್ಕೆ ಬಂದ ರೈಲು ಆಕೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದು ಆಕೆ ಸಾವಿಗೀಡಾಗಿದ್ದಾಳೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.