ಹಾಸನ: ಗಾಂಜಾ ಅಮಲಿನಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ಶವನದ ಮುಂದೆಯೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಆಲೂರು ತಾಲೂಕು ದೊಡ್ಡಕಣಗಾಲು ಗ್ರಾಮದ ಆಟೋರಿಕ್ಷಾ ಚಾಲಕ ಉಲ್ಲಾಸ್ ಕ್ಯಾಟಿ(21) ಬಂಧಿತ ಆರೋಪಿ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಮಾತನಾಡಿ , ಬಂಧಿತ ಆರೋಪಿ ಹಾಗೂ ಕೊಲೆಯಾದ ಯುವಕ ಹೂವಿನಹಳ್ಳಿ ಗ್ರಾಮದ ಕೀರ್ತಿ (21) ಇಬ್ಬರೂ ಆಟೋ ಚಾಲಕರಾಗಿದ್ದು ಸ್ನೇಹಿತರಾಗಿದ್ದು ಡಿ. 8ರಂದು ಸಂಜೆ ಕ್ಷುಲ್ಲಕ ಕಾರಣಕ್ಕೆ ಕೀರ್ತಿಯೊಂದಿಗೆ ಜಗಳ ತೆಗೆದು ಉಲಾಸ್ ಹಾಗೂ ಇತರ ಆರೋಪಿಗಳು ಕೀರ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಬಂಧಿತ ಆರೋಪಿ ಉಲ್ಲಾಸ್ ಶವದ ಮುಂದೆಯೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಎಂದು ಮಾಹಿತಿ ನೀಡಿದ್ದಾರೆ.
ಡಿ. 9 ರಂದು ಬೆಳಗ್ಗೆ ಮೃತ ಕೀರ್ತಿ ಸಹೋದರ ಕಿರಣ್ ಅವರ ಮೊಬೈಲ್‌ಗೆ ಬಂದ ವೀಡಿಯೋ ನೋಡಿ ಕೂಡಲೇ ಹಾಸನ ನಗರ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ತಿಳಿಸಿದ್ದರು. ಬಳಿಕ ನಗರ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕ, ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಹರೀಶ್, ಸಿಬ್ಬಂದಿ ಲತೇಶ ಅವರೊಂದಿಗೆ ವಿಡಿಯೋದಲ್ಲಿದ್ದ ಜಾಗದ ಅಂದಾಜಿನಲ್ಲಿ ಚನ್ನಪಟ್ಟಣ ಮತ್ತು ಬಿಟ್ಟಗೌಡನಹಳ್ಳಿ ಜಂಕ್ಷನ್ ನಡುವಿನ ಪವನಪುತ್ರ ಕೋಳಿ ಫಾರಂ ಹಿಂಭಾಗದ ಖಾಲಿ ಜಾಗದ ಮುಳ್ಳು ಮತ್ತು ಗಿಡಗಳ ನಡುವೆ ಹುಡುಕುತ್ತಾ ಬಂದಾಗ ಕೀರ್ತಿ ಶವ ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಮುಖ ಆರೋಪಿ ಉಲ್ಲಾಸ್‌ನನ್ನು ಬಂಧಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.
