Home ರಾಜಕೀಯ ವಕ್ಫ್ ಬೋರ್ಡ್ ಆಸ್ತಿ ವಿವಾದದಿಂದ ರಾಜಕೀಯ ಲಾಭ : ಬಿಜೆಪಿ ಮತ್ತು ಕಾಂಗ್ರೆಸ್ ರೈತರಿಗೆ ನ್ಯಾಯ...

ವಕ್ಫ್ ಬೋರ್ಡ್ ಆಸ್ತಿ ವಿವಾದದಿಂದ ರಾಜಕೀಯ ಲಾಭ : ಬಿಜೆಪಿ ಮತ್ತು ಕಾಂಗ್ರೆಸ್ ರೈತರಿಗೆ ನ್ಯಾಯ ಒದಗಿಸಲಿ: ಡಾ. ಮುಖ್ಯಮಂತ್ರಿ ಚಂದ್ರು

0

ಬೆಂಗಳೂರು: ವಿಜಯಪುರದಲ್ಲಿ ರೈತರ ಜಮಿನು ವಕ್ಫ್ ಬೋರ್ಡ್ ಗೆ ಸೇರಿದ್ದು ಎಂದು ನೋಟಿಸ್ ನೀಡಲಾಗಿರುವ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಗೊಂದಲ ಸೃಷ್ಟಿಸಿದ್ದು, ಇದನ್ನೇ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಆಮ್ ಅದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚಂದ್ರು ಅವರು, ವಕ್ಫ್ ಆಸ್ತಿ ವಿವಾದವನ್ನು ಜ್ವಲಂತವಾಗಿರಿಸಿ ರಾಜಕೀಯ ಲಾಭ ಪಡೆಯಲು ಎರಡು ಪಕ್ಷಗಳು ಹವಣಿಸುತ್ತಿವೆ. ವಕ್ಫ್ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಾಲಕ್ಕನುಗುಣವಾಗಿ ನವೀಕರಿಸದೆ ಗೊಂದಲಗಳನ್ನು ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ, ಸಂಪುಟ ಸಚಿವರಿಗೆಲ್ಲ ಉಪಚುನಾವಣೆ ಉಸ್ತುವಾರಿ ಹೊರಿಸಲಾಗಿದೆ. ರಾಜ್ಯದ ಆಡಳಿತ ಯಂತ್ರವೇ ಸ್ಥಗಿತಗೊಂಡಿದೆ. ಆದರೆ ಇದನ್ನು ವಕ್ಫ್ ಬೋರ್ಡ್ ಆಸ್ತಿ ವಿವಾದದ ಮೂಲಕ ಮರೆ ಮಾಚಲು ಪ್ರಯತ್ನಗಳು ನಡೆಯುತ್ತಿವೆ. ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ ರೈತರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕೆ ವಿನಃ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಬಾರದು ಎಂದು ಆಕ್ರೋಶ ಹೊರಹಾಕಿದರು.

ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯವನ್ನು ತಮ್ಮ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಕೋಮು ವಿಚಾರಕ್ಕೆ ಸಂಬಂಧಿಸಿ ವಿವಾದವಾದರೆ ಎಲ್ಲಿದ್ದರೂ ಓಡಿಬಂದು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ. ಮಳೆಯಿಂದ ರಾಜಧಾನಿಗೆ ಸಾಕಷ್ಟು ಹಾನಿಯಾಗಿದೆ, ಇಲ್ಲಿನ ಜನ ಸಾಕಷ್ಟು ಸಮಸ್ಯೆಗಳ ಜೊತೆ ಹೋರಾಡುತ್ತಿದ್ದರು ತಲೆ ಕೆಡಿಸಿಕೊಳ್ಳದ ತೇಜಸ್ವಿ ಸೂರ್ಯ ವಿಜಯಪುರ ರೈತರ ಬಗ್ಗೆ ಹಠಾತ್ತನೆ ಕಾಳಜಿ ತೋರಿಸುತ್ತಿರುವುದು ಹಾಸ್ಯಾಸ್ಪದ. ವಿಜಯಪುರದಲ್ಲಿ ಕೋಮು ಬೆಂಕಿ ಹತ್ತಿ ಮೈಕಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಮಾತೆತ್ತಿದರೆ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎನ್ನುತ್ತಾರೆ, ತಮ್ಮ ಅಸಮರ್ಥತೆಯನ್ನು ಮುಚ್ಚಿಡಲು ಇಂತಹ ವಿವಾದಗಳನ್ನು ಬಳಸಿಕೊಳ್ಳುವುದು ಬಿಜೆಪಿ ಮುಖಂಡರಿಗೆ ಸಾಮಾನ್ಯ ಎಂಬಂತಾಗಿದೆ .ಹಲವು ದಶಕಗಳಿಂದ ರಾಜ್ಯವನ್ನಾಳಿದ ಮೂರು ಜೆಸಿಬಿ ಪಕ್ಷಗಳು ಈ ವಿಷಯದಲ್ಲಿ ಕೇವಲ ರಾಜಕಾರಣವನ್ನು ಮಾತ್ರ ಮಾಡಿಕೊಂಡು ಬಂದಿವೆ ಎಂದು ಮುಖ್ಯಮಂತ್ರಿ ಚಂದ್ರು ಕಿಡಿ ಕಾರಿದರು.

ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ, ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು, ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಇಲ್ಲಿನ ರೈತರಿಗೆ ಹೆಚ್ಚಿನ ಪರಿಹಾರ ಸಿಗುವಂತೆ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರವನ್ನು ಟೀಕಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕೂಡ ಇಂತಹ ವಿವಾದಗಳನ್ನು ಪರಿಹರಿಸುವುದು ಬೇಕಿಲ್ಲ, ತಮಗೆ ರಾಜಕೀಯವಾಗಿ ಲಾಭವಾಗುತ್ತಾ ಎನ್ನುವುದನ್ನು ಮಾತ್ರ ನೋಡುತ್ತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದರೂ ಎಲ್ಲರಿಗೂ ಉಪ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯವಾಗಿದೆ, ಇವರಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಬೇಕಿಲ್ಲ, ಅವರ ಮತಗಳಷ್ಟೇ ಮುಖ್ಯವಾಗಿವೆ ಎಂದು ಟೀಕಿಸಿದರು.

ವಿಜಯಪುರದಲ್ಲಿ ರೈತರು ನೋಟಿಸ್ ಪಡೆದಿರುವ ಬಗ್ಗೆ ಕೂಡಲೇ ಸ್ಪಷ್ಟನೆ ಕೊಡಲಿ. ಅಲ್ಲಿನ ರೈತರಿಗೆ ತಮ್ಮ‌ಜಾಗ ಕಳೆದುಕೊಳ್ಳುವ ಭಯ ಶುರುವಾಗಿದ್ದು, ಸಚಿವರು ಕೂಡಲೇ ಆ ರೈತರ ಜೊತೆ ಮಾತನಾಡಿ, ಅವರ ಆತಂಕ ದೂರ ಮಾಡುವ ಕೆಲಸ ಮಾಡಲಿ. ಇಂತಹ ವಿವಾದಗಳು ಮುಂದೆ ಬರದಂತೆ ನೋಡಿಕೊಳ್ಳಲು ಸರ್ಕಾರ ಕ್ರಮ ವಹಿಸಲಿ. ಅತಿವೃಷ್ಠಿಯಿಂದ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರಿಗೆ ನೆರವು ನೀಡಬೇಕು. ಯಾವ ರೈತರು ಬೆಳೆ ಕಳೆದುಕೊಂಡಿದ್ದಾರೋ ಅವರಿಗೆ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಲು ಕ್ರಮ ವಹಿಸಲಿ ಎಂದು ಒತ್ತಾಯಿಸಿದರು.

You cannot copy content of this page

Exit mobile version