Home ರಾಜಕೀಯ ಒಂದು ರೀಲ್‌ಗೆ 50,000 ರೂಪಾಯಿ ತನಕ ಸಂಭಾವನೆ: ಮತಬೇಟೆಗೆ ಇನ್‌ಫ್ಲುಯೆನ್ಸರ್‌ಗಳ ‘ಡಿಜಿಟಲ್ ಸೈನ್ಯ’ ಕಟ್ಟುತ್ತಿರುವ ರಾಜಕೀಯ...

ಒಂದು ರೀಲ್‌ಗೆ 50,000 ರೂಪಾಯಿ ತನಕ ಸಂಭಾವನೆ: ಮತಬೇಟೆಗೆ ಇನ್‌ಫ್ಲುಯೆನ್ಸರ್‌ಗಳ ‘ಡಿಜಿಟಲ್ ಸೈನ್ಯ’ ಕಟ್ಟುತ್ತಿರುವ ರಾಜಕೀಯ ಪಕ್ಷಗಳು!

0

ದೆಹಲಿ: ಈವರೆಗೆ ರಾಜಕೀಯ ಪಕ್ಷಗಳಿಗೆ ತಮ್ಮ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರೇ ಜೀವಾಳವಾಗಿದ್ದರು. ಆದರೆ ಈಗ ಅವರ ಜೊತೆಗೆ ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಮೈಕ್ರೋ ಇನ್‌ಫ್ಲುಯೆನ್ಸರ್‌ಗಳನ್ನು ಒಳಗೊಂಡ ‘ಡಿಜಿಟಲ್ ಸೈನ್ಯ’ವೇ ಅಖಾಡಕ್ಕಿಳಿದಿದೆ. ಇವರ ಕೈಯಲ್ಲಿ ಯಾವುದೇ ಪಕ್ಷದ ಧ್ವಜವಾಗಲಿ, ಹುದ್ದೆಯಾಗಲಿ ಇರುವುದಿಲ್ಲ; ಆದರೆ ಲಕ್ಷಾಂತರ ಯುವಕರ ಮೊಬೈಲ್ ಪರದೆಗಳನ್ನು ತಲುಪುವ ಅಸಾಧಾರಣ ಶಕ್ತಿ ಇವರಿಗಿದೆ.

ಒಂದು ರೀಲ್, ಮೀಮ್ ಅಥವಾ ಕಿರು ವಿಡಿಯೋ ಕೇವಲ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮತದಾರರನ್ನು ತಲುಪುತ್ತಿದೆ. ಮುಂಬರುವ ಮಹತ್ವದ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ರಾಜಕೀಯ ಪಕ್ಷಗಳು 10,000 ದಿಂದ 50,000 ವರೆಗೆ ಫಾಲೋವರ್ಸ್ ಹೊಂದಿರುವ ಸ್ಥಳೀಯ ಇನ್‌ಫ್ಲುಯೆನ್ಸರ್‌ಗಳ ಬೃಹತ್ ಜಾಲವನ್ನು ನಿರ್ಮಿಸುತ್ತಿವೆ.

ಡಿಜಿಟಲ್ ಪ್ರಚಾರ ನಿರ್ವಹಿಸುವ ತಜ್ಞರ ಪ್ರಕಾರ, ಈ ಸಣ್ಣ ಹಾಗೂ ಮಧ್ಯಮ ಕ್ರಿಯೇಟರ್‌ಗಳು ಯಾವುದೇ ಒಂದು ಪಕ್ಷದೊಂದಿಗೆ ಶಾಶ್ವತವಾಗಿ ಗುರುತಿಸಿಕೊಳ್ಳುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಬಿಜೆಪಿ, ಕಾಂಗ್ರೆಸ್, ಆಪ್ ಅಥವಾ ಪ್ರಾದೇಶಿಕ ಪಕ್ಷಗಳಿಗೆ ಪ್ರಚಾರ ಒದಗಿಸುತ್ತಾರೆ. ಒಂದು ರಾಜಕೀಯ ಪ್ರಚಾರದ ರೀಲ್‌ಗೆ ₹15,000 ದಿಂದ ₹50,000 ವರೆಗೆ ಹಾಗೂ ಕೇವಲ ಒಂದು ಪೋಸ್ಟ್‌ಗೆ ₹15,000 ದಿಂದ ₹20,000 ವರೆಗೆ ನಗದು ರೂಪದಲ್ಲಿ ಹಣ ಸಂದಾಯವಾಗುತ್ತಿದೆ.

ಸಾಮಾಜಿಕ ಜಾಲತಾಣ ಸಂಸ್ಥೆ ನಡೆಸುವ ಶ್ಯಾಮ್ ತಿವಾರಿ ಅವರ ಪ್ರಕಾರ, ಸುಮಾರು 5 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಕ್ರಿಯೇಟರ್‌ಗಳು ₹50,000 ದಿಂದ ₹1 ಲಕ್ಷ ವರೆಗೆ ಚಾರ್ಜ್ ಮಾಡಿದರೆ, 50 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಬೃಹತ್ ಕ್ರಿಯೇಟರ್‌ಗಳ ಒಂದು ಕಂಟೆಂಟ್‌ಗೆ ಬರೋಬ್ಬರಿ ₹30 ಲಕ್ಷದವರೆಗೂ ಹಣ ನೀಡಲಾಗುತ್ತದೆ.

ರಾಷ್ಟ್ರೀಯ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ 15,000 ದಿಂದ 20,000 ಫಾಲೋವರ್ಸ್ ಇರುವ ಸ್ಥಳೀಯ ಶಿಕ್ಷಕ, ರೈತ ಅಥವಾ ಕಾಮೆಡಿಯನ್‌ಗಳ ಮಾತುಗಳಿಗೆ ಸ್ಥಳೀಯವಾಗಿ ಹೆಚ್ಚಿನ ಮಾನ್ಯತೆಯಿರುತ್ತದೆ. ನಾಯಕರ ವರ್ಚಸ್ಸು ಹೆಚ್ಚಿಸಲು ಪಾಡ್‌ಕಾಸ್ಟ್‌ಗಳು ಹಾಗೂ ರೀಲ್ಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣಗಳ ರಾಜಕೀಯ ಜಾಹೀರಾತು ವೆಚ್ಚದ ಮೇಲೆ ನಿಗಾ ಇರಿಸಿದ್ದರೂ, ಈ ಇನ್‌ಫ್ಲುಯೆನ್ಸರ್‌ಗಳಿಗೆ ನಗದು (Cash) ರೂಪದಲ್ಲೇ ಪಾವತಿಗಳು ನಡೆಯುತ್ತಿವೆ ಎಂಬ ಆರೋಪಗಳಿವೆ.

ಒಬ್ಬ ಶಿಕ್ಷಕ ಸರ್ಕಾರದ ಶಿಕ್ಷಣ ನೀತಿಯನ್ನು ಹೊಗಳಿದರೆ ಅದು ನೈಜ ಅಭಿಪ್ರಾಯವೋ ಅಥವಾ ಹಣ ಪಡೆದು ಮಾಡಿದ ಪ್ರಾಯೋಜಿತ ಪ್ರಚಾರವೋ (Paid Promotion) ಎಂಬುದನ್ನು ಸಾಮಾನ್ಯ ಮತದಾರ ಪತ್ತೆಹಚ್ಚುವುದು ಮುಂಬರುವ ಚುನಾವಣೆಗಳಲ್ಲಿ ದೊಡ್ಡ ಸವಾಲಾಗಲಿದೆ. ಆದರೆ, ರೀಲ್ಸ್‌ಗಳು ಜನಪ್ರಿಯತೆ ತಂದುಕೊಡಬಹುದೇ ವಿನಃ ಮತದಾರರನ್ನು ಬೂತ್‌ಗೆ ಕರೆತರುವಲ್ಲಿ ಬೂತ್ ಮಟ್ಟದ ಕಾರ್ಯಕರ್ತರೇ ನಿರ್ಣಾಯಕ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

You cannot copy content of this page

Exit mobile version