ಬಿಜೆಪಿಯ ಮಾಜಿ ಶಾಸಕ ಹಾಗೂ ಪರಿಷತ್ ಟಿಕೆಟ್ ಆಕಾಂಕ್ಷಿ ರಘುಪತಿ ಭಟ್ ತಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಸಂಘದ ಹಿರಿಯರೂ ಸಹ ಅಸಹಾಯಕರಾಗಿ ಆಯ್ತು ಸ್ಪರ್ಧಿಸಿ ಎನ್ನುವ ಸ್ಥಿತಿಗೆ ಬಂದಿದ್ದಾರೆ ಎಂದಿರುವ ರಘುಪತಿ ಭಟ್ ಬಿಜೆಪಿಯಲ್ಲಿ RSS ಮಾತುಗಳು ನಡೆಯುತ್ತಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಸಂಘದ ಅನುಪಸ್ಥಿತಿ ಎದ್ದು ಕಾಣುತ್ತಿತ್ತು ಹಾಗೂ ಸಂಘದ ಆಪ್ತರು ಟಿಕೆಟ್ ಪಡೆಯುವಲ್ಲಿಯೂ ವಿಫಲರಾಗಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಪ್ರಸ್ತುತ ಬಿಜೆಪಿಗೆ ಪ್ರತಿಯೊಂದು ಕ್ಷೇತ್ರದಿಂದಲೂ ಬಂಡಾಯ ಎದುರಾಗುತ್ತಿದ್ದು, ಉಲ್ಬಣಿಸುತ್ತಿರುವ ಬಂಡಾಯವನ್ನು ಎದುರಿಸಲಾಗದೆ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅಸಹಾಯಕರಾಗಿದ್ದಾರೆ.
ಇನ್ನು ತಾನು ಚುನಾವಣೆಯಲ್ಲಿ ಗೆದ್ದರೂ ಪಕ್ಷದ ಕಾರ್ಯಕರ್ತನಾಗಿಯೇ ಉಳಿಯುವೇ ಎಂದಿರುವ ರಘುಪತಿ ಭಟ್ ಗೆದ್ದ ನಂತರವೂ ಪಕ್ಷದ ಕಚೇರಿಗೆ ಬರುವುದಾಗಿ ತಿಳಿಸಿದ್ದಾರೆ. ಆದರೆ ಇದೇ ರೀತಿ ಹೇಳಿ ಚುನಾವಣೆಗೆ ನಿಂತಿದ್ದ ಈಶ್ವರಪ್ಪನವರನ್ನು ಪಕ್ಷ ಈಗ ಹೊರಹಾಕಿದೆಯೆನ್ನುವುದು ಗಮನಾರ್ಹ.
ಬಿಜೆಪಿ ನಾಯಕತ್ವದ ವಿರುದ್ಧ ಮುನಿಸಿಕೊಂಡಿರುವ ರಘುಪತಿ ಭಟ್ ತಮ್ಮ ಮನೆಯಲ್ಲಿ ಬುಧವಾರ ನಡೆದ ಹಿತೈಷಿಗಳ ಸಭೆಯಲ್ಲಿ ಮಾತನಾಡಿ, “ಜೀವನದಲ್ಲಿ ಇಂತಹ ದಿನ ಬರಲಿದೆ ಎಂದೂ ಯೋಚಿಸಿರಲಿಲ್ಲ. ಇದು ದುಡುಕಿನ ನಿರ್ಧಾರವಲ್ಲ; ಯೋಚಿಸಿಯೇ ತೆಗೆದುಕೊಂಡಿದ್ದು. ಕಣದಿಂದ ಹಿಂದೆ ಸರಿಯಲಾರೆ” ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು “2023ರ ವಿಧಾನಸಭೆ ಚುನಾವಣೆ ಯಲ್ಲಿ ಪಕ್ಷದಿಂದ ಟಿಕೆಟ್ ಕೈತಪ್ಪಿದಾಗ ಕಾಂಗ್ರೆಸ್ ಅಥವಾ ಪಕ್ಷೇತರರಾಗಿ ಸ್ಪರ್ಧಿಸಲು ಒತ್ತಡ ಇತ್ತು. ಆದರೂ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡಿದೆ. ಲೋಕಸಭೆ ಚುನಾವಣೆಯಲ್ಲೂ ಪೂರ್ಣ ತೊಡಗಿಕೊಂಡೆ. ಆದರೆ ಬಿಜೆಪಿ ನಾಯಕರು ನಾನು ಮೂರು ಬಾರಿ ಗೆದ್ದಿರುವ ಮಾಜಿ ಶಾಸಕ ಎಂಬುದನ್ನು ಮರೆತು ಕಚೇರಿಯಲ್ಲಿದ್ದ ನನ್ನ ಭಾವಚಿತ್ರವನ್ನು ತೆಗೆದು ಹಾಕಿದರು. ಕನಿಷ್ಠ ಮನ್ನಣೆ, ಪ್ರೀತಿ, ಗೌರವವನ್ನು ತೋರಿಸಿಲ್ಲ” ಎಂದು ದೂರಿದರು.
ಮನೆಯಲ್ಲಿ ನಡೆದ ಕೋಲದ ಸಂದರ್ಭ ನನ್ನ ಸ್ಪರ್ಧೆಯ ಬಗ್ಗೆ ಕಲ್ಕುಡ, ಪಂಜುರ್ಲಿ ದೈವಗಳಲ್ಲಿ ಪ್ರಶ್ನೆ ಮಾಡಿದಾಗ “ನಿನ್ನ ನಿರ್ಧಾರ ಸರಿಯಾಗಿದೆ; ಮುಂದೆ ಸಾಗಬಹುದು” ಎಂದು ಅಭಯ ನೀಡಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಒಟ್ಟು ಆರು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಸ್ಪರ್ಧಿಸುತ್ತಿದ್ದು, ಎರಡು ಕ್ಷೇತ್ರಗಳನ್ನು ತನ್ನ ಮಿತ್ರ ಪಕ್ಷವಾದ ಜೆಡಿ(ಎಸ್) ಬಿಟ್ಟುಕೊಟ್ಟಿದೆ.