Wednesday, September 18, 2024

ಸತ್ಯ | ನ್ಯಾಯ |ಧರ್ಮ

ಪಾವಗಡ: ವೃದ್ಧ ತಂದೆಯ ಹೆಣ ಸಾಗಿಸಲು ವಾಹನ ವ್ಯವಸ್ಥೆ ಮಾಡಲಾಗದೆ ಬೈಕಿನಲ್ಲೇ ಸಾಗಿಸಿದ ಮಕ್ಕಳು!

ಪಾವಗಡ: ಇದುವರೆಗೆ ಎಲ್ಲೆಲ್ಲೋ ಕೇಳುತ್ತಿದ್ದ ಘಟನೆಗೆ ಇಂದು ಕರ್ನಾಟಕವೇ ಸಾಕ್ಷಿಯಾಗಿದೆ. ತೀರಾ ಮೊನ್ನೆಯಷ್ಟೇ ನ್ಯುಮೋನಿಯಾದಿಂದ ಮೃತಪಟ್ಟ ತಮ್ಮ ಮಕ್ಕಳನ್ನು 15 ಕಿಲೋಮೀಟರ್‌ ದೂರ ದಂಪತಿಗಳು ಹೊತ್ತು ಸಾಗಿಸಿದ ನೆನಪು ಇನ್ನೂ ಹಸಿಯಾಗಿದೆ.

ಹೀಗಿರುವಾಗ ಇಂದು ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ ಎನ್‌ ಹೊಸಕೋಟೆ ಬಳಿ ವಯೋಸ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಂದೆಯ ಶವವನ್ನು ಮಕ್ಕಳಿಬ್ಬರು ಬೈಕಿನ ಮೇಲೆ ಸಾಗಿಸಿದ ಘಟನೆ ವರದಿಯಾಗಿದೆ.

ವಯೋಸಹಜ ಕಾಯಿಲೆಯಿಂದ ಪಾವಗಡ ತಾಲ್ಲೂಕಿನ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ ಎಂಬ 80 ವರ್ಷದ ವೃದ್ಧ ವೈ.ಎನ್. ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು.

ಮೃತಪಟ್ಟಿರುವ ಹೊನ್ನೂರಪ್ಪ ಅವರ ಶವವನ್ನು ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ದ್ವಿಚಕ್ರ ವಾಹನದಲ್ಲಿಯೇ ಹೊನ್ನೂರಪ್ಪ ಅವರ ಹಿರಿಯ ಪುತ್ರ ಚಂದ್ರಣ್ಣ ಮತ್ತು ಕಿರಿಯ ಪುತ್ರ ಗೋಪಾಲಪ್ಪ ತಮ್ಮೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಈ ಕುರಿತು ಅಲ್ಲಿನ ಸ್ಥಳೀಯ ಫೇಸ್ಬುಕ್‌ ಗ್ರೂಪ್‌ ಒಂದರಲ್ಲಿ ಪೋಸ್ಟ್‌ ಮಾಡಲಾಗಿದ್ದು ಸುದ್ದಿ ಹೊರ ಲೋಕಕ್ಕೆ ತಿಳಿಯದೆ ಉಳಿದಿದೆ. ಆಂಬುಲೆನ್ಸ್‌ ಸೇವೆಯು ಕಾಯಿಲೆಯೊಂದ ಬಳಲುತ್ತಿರುವವರ ಸೇವೆಗೆ ಇರುವುದಾದರೂ ಕೆಲವೊಮ್ಮೆ ಮೃತ ದೇಹಗಳನ್ನು ತಲುಪಿಸಲು ಸಹ ಬಳಸಲಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಹೆಣ ಸಾಗಿಸಲು ಸರ್ಕಾರಿ ಆಂಬುಲೆನ್ಸ್‌ ವಾಹನಗಳನ್ನು ಬಳಸಬಹುದು ಎಂದು ನಿಯಮಗಳು ಹೇಳುತ್ತವೆ. ಆದರೆ ಈ ನತದೃಷ್ಟ ಸಹೋದರರಿಗೆ ಆ ಸೇವೆ ಸಿಕ್ಕಿಲ್ಲ. ಬಹುಶಃ ಖಾಸಗಿ ವಾಹನವನ್ನು ಭರಿಸಲಾಗದೆ ಅವರು ಬೈಕಿನಲ್ಲಿ ತಂದೆಯ ಶವವನ್ನು ಸಾಗಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page