Home ಮೀಡಿಯಾ ಜನಪರ ವಿಶ್ಲೇಷಣೆ ಮರೆತ ಮಾಧ್ಯಮಗಳು: ಕುಸಿದ ಮಾಧ್ಯಮ ನೈತಿಕತೆ

ಜನಪರ ವಿಶ್ಲೇಷಣೆ ಮರೆತ ಮಾಧ್ಯಮಗಳು: ಕುಸಿದ ಮಾಧ್ಯಮ ನೈತಿಕತೆ

0

10 ಕೆಜಿ ಅಕ್ಕಿ ಕೊಡೋದರಿಂದ ಜನ ಸೋಮಾರಿಗಳಾಗುತ್ತಾರೆ ಅಂತೆಲ್ಲಾ ಮೂರ್ಖತನದ ವರದಿಗಳನ್ನು ಮಾಡುತ್ತಿರುವ ಈ ಮಾನಗೆಟ್ಟ ಮಾಧ್ಯಮಗಳು, ಸರ್ಕಾರಿ ಇಲಾಖೆಯಲ್ಲಿ ಮತ್ತು ದೊಡ್ಡ ದೊಡ್ಡ ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಸಂಬಳದ ಹೊರತಾಗಿ, ಮನೆ ಬಾಡಿಗೆ, ವಿದ್ಯುತ್ ಬಿಲ್, ಪ್ರಯಾಣ ಭತ್ತೆ, ರಜೆ ದಿನಗಳಲ್ಲಿ ಕೊಡುವ ಸಂಬಳ ಉಚಿತ ಎನ್ನುವ ಪ್ರಜ್ಞೆಯಿಲ್ಲ – ವಿಕ್ರಮ್ ತೇಜಸ್, ಪತ್ರಕರ್ತ

ಜವಾಬ್ದಾರಿಯಿಂದ ನುಣುಚಿಕೊಂಡರೆ, ಪ್ರಾಮಾಣಿಕತೆ ಮರೆತರೆ, ಸ್ವಾರ್ಥ ನಮ್ಮನ್ನು ಆವರಿಸಿಕೊಂಡರೆ ಆ ವ್ಯಕ್ತಿ, ಪಕ್ಷ ಅಥವಾ ಸಂಸ್ಥೆ ಆತ್ಮ ವಂಚನೆಗೆ ಇಳಿದು ಭ್ರಷ್ಟವಾಗುತ್ತದೆ. ಅಂತಹ ಆತ್ಮವಂಚನೆಯ ಕೆಲಸಕ್ಕೆ ಇಳಿದು ಅತ್ಯಂತ ಭ್ರಷ್ಟವಾಗಿರುವುದು ಭಾರತದ ಬಹುತೇಕ ಮಾಧ್ಯಮಗಳು. ಸುಮಾರು ಒಂದೂವರೆ ದಶಕದಿಂದೀಚೆಗೆ ಅವು ಕಡು ಭ್ರಷ್ಟತೆಗೆ ಇಳಿದು ಜನ ಸಮುದಾಯಕ್ಕೆ ಮೋಸ ಮಾಡುತ್ತಿವೆ. ಹಣ ಗಳಿಸುವ ಏಕಮಾತ್ರ ಉದ್ದೇಶದಿಂದ ವಾಮ ಮಾರ್ಗ ತುಳಿಯುತ್ತಿವೆ. ಹಸಿ ಹಸಿ ಸುಳ್ಳನ್ನು ಸತ್ಯವೆಂದು ಬಿಂಬಿಸುವ ಇವರ ಸುದ್ದಿಗಳೇ ಮಾಧ್ಯಮ ಕ್ಷೇತ್ರದ (ಎಲ್ಲಾ ಮಾಧ್ಯಮಗಳಲ್ಲ, ಬಹುತೇಕ) ನೈತಿಕತೆ ಕುಸಿದಿರುವುದಕ್ಕೆ ಸಾಕ್ಷಿಯಾಗಿವೆ.

ತಂದೆ ತಾಯಿಯೊಂದಿಗೆ ಮುನಿಸುಗೊಂಡು ಮಗಳು ಮನೆ ಬಿಟ್ಟು ಹೋದರೆ, ಗಂಡನೊಂದಿಗೆ ಜಗಳವಾಡಿ ಹೆಂಡತಿ ತವರು ಮನೆಗೆ ಹೋದರೆ, ಇಬ್ಬರು ಪ್ರೀತಿ ಮಾಡಿ ಒಂದಾದರೆ ಅಥವಾ ಅವರು ವಿವಾಹವಾದರೆ (ವಿವಾಹಿತರು ಅಥವಾ ಅವಿವಾಹಿತರು), ಅದಕ್ಕೆ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯೇ ಕಾರಣ, ಇದರಿಂದ ಮಹಿಳೆಯರು ಗಂಡ, ಮನೆ, ಮಕ್ಕಳನ್ನು ಬಿಟ್ಟು ಸುಮ್ನೆ ಓಡಾಡುತ್ತಾರೆ, ಎಂದು ಆಪಾದಿಸುವ ಮುಠ್ಠಾಳ ಮಾಧ್ಯಮಗಳಿಗೆ, ಮನೆಯ ಜವಾಬ್ದಾರಿಯನ್ನು ಪುರುಷರಿಗಿಂತ ಮಹಿಳೆಯರೆ ಹೆಚ್ಚು ನಿಭಾಯಿಸುತ್ತಾರೆ ಎಂಬ ಕನಿಷ್ಟ ಅರಿವಿಲ್ಲ. ಮಹಿಳೆಯರ ಮೇಲೆ ಕಿಂಚಿತ್ತು ಗೌರವವಿಲ್ಲದ ಇವರದು ʼಮನುʼ ಬುದ್ದಿ ಎಂಬುದನ್ನು ತೋರುತ್ತದೆ. 10 ಕೆಜಿ ಅಕ್ಕಿ ಕೊಡೋದರಿಂದ ಜನ ಸೋಮಾರಿಗಳಾಗುತ್ತಾರೆ ಅಂತೆಲ್ಲಾ ಮೂರ್ಖತನದ ವರದಿಗಳನ್ನು ಮಾಡುತ್ತಿರುವ ಈ ಮಾನಗೆಟ್ಟ ಮಾಧ್ಯಮಗಳು, ತಮ್ಮನ್ನೂ ಒಳಗೊಂಡಂತೆ (ಗ್ರಾಮೀಣ ತಾಲೂಕು ಪತ್ರಕರ್ತರನ್ನು ಹೊರತುಪಡಿಸಿ) ಸರ್ಕಾರಿ ಇಲಾಖೆಯಲ್ಲಿ ಮತ್ತು ದೊಡ್ಡ ದೊಡ್ಡ ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಸಂಬಳದ ಹೊರತಾಗಿ, ಮನೆ ಬಾಡಿಗೆ, ವಿದ್ಯುತ್ ಬಿಲ್, ಪ್ರಯಾಣ ಭತ್ತೆ, ರಜೆ ದಿನಗಳಲ್ಲಿ ಕೊಡುವ ಸಂಬಳ ಉಚಿತ ಎನ್ನುವ ಪ್ರಜ್ಞೆಯಿಲ್ಲ. ಮಹಿಳೆಯರಿಗೆ ಮತ್ತು ಬಡವರಿಗೆ ಹುಲ್ಲುಕಡ್ಡಿಯಷ್ಟು ಸಹಾಯ ಮಾಡಿದರೂ, ಸಹಿಸಿಕೊಳ್ಳಲಾಗದೇ ಸರ್ಕಾರದ ಯೋಜನೆಗಳ ವಿರುದ್ಧ ನಾಮುಂದು ತಾಮುಂದು ಎಂದು ಅಪಪ್ರಚಾರ ಮಾಡುತ್ತಿರುವುದು ನೋಡಿದರೆ, ಮಾಧ್ಯಮಗಳು ಯಾವ ಮಟ್ಟದಲ್ಲಿ (ಎಲ್ಲವೂ ಅಲ್ಲ ಬಹುತೇಕ) ನೈತಿಕತೆಯನ್ನು ಕಳೆದುಕೊಂಡಿವೆ ಎನ್ನುವುದಕ್ಕೆ ಇವು ಸಾಕ್ಷಿಯಲ್ಲವೆ?

ಇಂದಿನ ಮುಖ್ಯವಾಹಿನಿ (ಎಂದು ಹೇಳಿಕೊಳ್ಳುವ)ಯ ಬಹುತೇಕ ಮಾಧ್ಯಮಗಳು ಒಂದು ಮೂಲಭೂತವಾದಿ ಸಿದ್ಧಾಂತಕ್ಕೆ ಹಾಗೂ ಒಂದೆರಡು ಮೇಲ್ಜಾತಿಗಳ (ಎಂದು ಹೇಳಿಕೊಳ್ಳುವ) ಮತ್ತು ಸಂಘ ಪರಿವಾರದ ಕಾಲಾಳುಗಳಾಗಿ ಕೆಲಸ ಮಾಡುತ್ತಿರುವುದು ಎಂತಹ ವ್ಯಕ್ತಿಗೂ ಗೋಚರಿಸುವ ಸತ್ಯವಾಗಿದೆ. ಹಿಂದೆ ಪತ್ರಕರ್ತರು ಎಂದರೆ ಸರಳತೆ, ಸಭ್ಯತೆ ಹಾಗೂ ಪ್ರಾಮಾಣಿಕತೆ ಇರುವ ವ್ಯಕ್ತಿ ಎಂಬ ವಿಶೇಷ ಗೌರವವಿತ್ತು. ಆದರೆ, ಇಂದು ಕೆಲವು ಅಪ್ರಾಮಾಣಿಕ ಪತ್ರಕರ್ತರ ಅನೈತಿಕ ನಡವಳಿಕೆಯಿಂದಾಗಿ ದೇಶದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತದ ಪತ್ರಿಕೋದ್ಯಮ ಹಾಗೂ ಪತ್ರಕರ್ತರ ಮಾನ ಹರಾಜಾಗುವಂತಾಗಿದೆ. ಇವರ ನಡೆ ಸಾಮಾಜಿಕ ಮಾಧ್ಯಮದಲ್ಲಿ ಜನಸಾಮಾನ್ಯರಿಂದ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ನಿಂದನೆಗಳಿಗೆ ಗುರಿಯಾಗಿದೆ. ಒಂದು ಕಾಲದಲ್ಲಿ ಸಮಾಜದ ಕನ್ನಡಿಯಾಗಿ ಕೆಲಸ ಮಾಡುತ್ತಿದ್ದ ಮಾಧ್ಯಮ ರಂಗ ಇಂದು ಹಣ ಗಳಿಸುವ ಉದ್ಯಮವಾಗಿ (ಪತ್ರಿಕೋದ್ಯಮ) ಬೆಳೆಯುತ್ತಿರುವುದೇ ಒಂದು ದುರಂತ.

ಮಾಧ್ಯಮಗಳು ಉದ್ಯಮಗಳಾದುದರಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈ ಗೋದಿ ಮಾಧ್ಯಮಗಳು, ವಾಸ್ತವ ಸಂಗತಿಗಳನ್ನು ಬದಿಗೊತ್ತಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ಹಾಗೂ ಆರ್‍ಎಸ್‍ಎಸ್‍ನ ಭಜನೆಯಲ್ಲಿ ನಿರತವಾಗಿವೆ. ಈ ನಡುವೆ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶವು ಬಿಜೆಪಿ, ಜೆಡಿಎಸ್ ಪಕ್ಷಗಳ ಜೊತೆಗೆ ಗೋದಿ ಮಿಡಿಯಾಗಳ ಸೋಲು ಕೂಡಾ ಹೌದು. ಸಂವಿಧಾನದ ನಾಲ್ಕನೇ ಸ್ತಂಭ ಎನಿಸಿಕೊಳ್ಳುವ ಮಾಧ್ಯಮಗಳು ಸಂವಿಧಾನ ರಕ್ಷಿಸುವ ಕಾವಲು ನಾಯಿಗಳಾಗದೆ, ಜೀವ ವಿರೋಧಿ ಸಿದ್ಧಾಂತದ ಕಾಲಾಳುಗಳಾಗಿ ಕೆಲಸ ಮಾಡುತ್ತಿವೆ. ಬಂಡವಾಳ ಶಾಹಿಯ ಪರವಾದ ಯಾವುದೇ ಯೋಜನೆಗಳು, ಅವರ ಸಾಲ ಮತ್ತು ಬಡ್ಡಿ ಮನ್ನಾ ಮಾಡಿದಾಗ, ಜಿಎಸ್‍ಟಿ ಕಡಿಮೆ ಮಾಡಿದಾಗ ಅಥವಾ ಅವರಿಗೆ ಅನುಕೂಲವಾಗುವ ಕಾನೂನು ತಿದ್ದುಪಡಿ ತಂದರೆ ನಿಯತ್ತಿನ ನಾಯಿಗಳಂತೆ ಬಾಲ ಮುದುಡಿಕೊಂಡು ಬಾಯಿ ಮುಚ್ಚಿಕೊಳ್ಳುತ್ತಿದ್ದ ಮಾಧ್ಯಮಗಳು, ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಂಚೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ಗ್ಯಾರಂಟಿಗಳನ್ನು ಕೇಳಿಯೇ ಬುಡಕ್ಕೆ ಬೆಂಕಿ ಬಿದ್ದಂತೆ ಆಡುತ್ತಿದ್ದವು. ಬಡವರ ಪರವಾದ ಕೆಲವೇ ಕೆಲವು ಯೋಜನೆಗಳಿಂದ ದಿಕ್ಕು ತಪ್ಪಿದಂತಾಗಿ ಅಧಿಕಪ್ರಸಂಗದ ಪ್ರಶ್ನೆಗಳನ್ನು ಕೇಳಲಾರಂಭಿಸಿವೆ. ಈ ಎಲ್ಲದರ ನಡುವೆ ಸತ್ಯದ ತಲೆಯ ಮೇಲೆ ಕಾಲಿಟ್ಟು ಸುಳ್ಳು ಭರವಸೆಯ ಗೋಪುರ ಕಟ್ಟಿ, ಹುಸಿ ಕನಸುಗಳನ್ನು ಹಂಚಿ ದುರಾಡಳಿತ ಮಾಡುತ್ತಿದ್ದ ಬಿಜೆಪಿ ಪಕ್ಷ ನೆಲೆ ಕಳೆದುಕೊಳ್ಳುವಂತೆ ಮಾಡಿದ ಕರುನಾಡಿನ ಪ್ರಜ್ಞಾವಂತ ಮತದಾರರ ಸೂಕ್ಷ್ಮತೆಗೆ ದೇಶವೇ ನಿಬ್ಬೆರಗಾಗುವಂತಾಗಿದೆ.

ಜನಪರ ವಿಶ್ಲೇಷಣೆ ಮರೆತ ಮಾಧ್ಯಮಗಳು

ದೇಶದ ಮಾಧ್ಯಮಗಳು ಮುಂಚೆ ಸಂವಿಧಾನದ ಕಾವಲು ನಾಯಿಗಳಾಗಿ ಕೆಲಸ ಮಾಡುತ್ತಿದ್ದವು. ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆ ಮತ್ತು ತಿದ್ದುಪಡಿಗಳು ಜನಪರ ಇವೆಯೋ ಇಲ್ಲವೋ ಎಂದು ಪ್ರಾಮಾಣಿಕವಾಗಿ ವಿಶ್ಲೇಷಣೆ ಮಾಡುತ್ತಿದ್ದವು. ತಪ್ಪಿದ್ದರೆ ಸರ್ಕಾರದ ವಿರೋಧ ಪಕ್ಷಗಳಾಗಿ ಕೆಲಸ ಮಾಡುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಅಥವಾ ಇತರೆ ಪಕ್ಷಗಳು ಅಧಿಕಾರದಲ್ಲಿದ್ದರೆ, ಸರ್ಕಾರಕ್ಕೆ ಅಸಹಕಾರ ಪ್ರತಿಪಕ್ಷಗಳಾಗಿ ಕೆಲಸ ಮಾಡುತ್ತವೆ. ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದರೆ, ಆ ಪಕ್ಷದ ಕಚೇರಿ ಕಾಯುತ್ತ ವಿರೋಧ ಪಕ್ಷಗಳಿಗೆ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿರುವುದು ವಿಪರ್ಯಾಸವೇ ಸರಿ.

ಇದಕ್ಕೆ ತಾಜಾ ಉದಾಹರಣೆ, ಕರ್ನಾಟಕದ ಡಬಲ್ ಇಂಜಿನ್ ಸರ್ಕಾರದಲ್ಲಿ ಒಂದು ಇಂಜಿನ್ ಸ್ವಯಂ ತಪ್ಪಿನಿಂದ ಅಪಘಾತಕ್ಕೀಡಾಗಿ ಕೈಕಾಲು ಮುಖ ಕಳೆದುಕೊಂಡು ಕೋಮಾ ಸ್ಥಿತಿಯಲ್ಲಿ ಇರಬೇಕಾದರೆ, ಅದರ ಸ್ಥಾನವನ್ನು ಕೆಲವು ಮಾಧ್ಯಮಗಳು ತುಂಬಲು ನಾಮುಂದು ತಾಮುಂದು ಎಂದು ಸ್ಪರ್ಧೆಗೆ ಇಳಿದಿವೆ. ಸರ್ಕಾರ ಯಾವುದೇ ಒಂದು ಜಾತಿ-ಧರ್ಮಕ್ಕೆ ಸೀಮಿತ ಮಾಡದೇ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಎಲ್ಲಾ ಜಾತಿಯ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ, ಪ್ರತಿ ಮನೆಯ ಒಡತಿಗೆ (ಆದಾಯ ತೆರಿಗೆ ಕಟ್ಟುವವರ ಹೊರತುಪಡಿಸಿ) ರು.2,000 ಸಾವಿರ ಸಹಾಯ ಧನ, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಪದವಿ ಓದಿದ ನಿರುದ್ಯೋಗಿ ಯುವಕನಿಗೆ ರೂ.3000 ಡಿಪ್ಲೋಮಾ ಓದಿ ಕುಳಿತ ವಿದ್ಯಾರ್ಥಿಗಳಿಗೆ ರು.1,500 ನಿರುದ್ಯೋಗ ಭತ್ತೆ ಘೋಷಿಸಿದೆ. ಇದಕ್ಕೆ ಮಾಧ್ಯಮಗಳು ಮೊದಲಿಗೆ ಚುನಾವಣೆ ಗಿಮಿಕ್ ಎಂದವು, ಕಾಂಗ್ರೆಸ್ ಬಹುಮತ ಬಂದ ದಿನವೇ ಗ್ಯಾರಂಟಿಗಳ ಜಾರಿ ಯಾವಾಗ ಎಂದು ಬಾಯಿ ಬಾಯಿ ಬಡಿದುಕೊಂಡವು. ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಿದಾಗ ಕಂಡಿಶನ್ ಯಾಕೆ ಎಂದವು. ಈಗ ಹಣ ಎಲ್ಲಿಂದ ತರ್ತೀರಿ, ರಾಜ್ಯಕ್ಕೆ ಸಾಲದ ಹೊರೆ ಆಗಲ್ವ ಎಂಬ ಮುರ್ಖತನದ ಪ್ರಶ್ನೆಗಳನ್ನು ಕೇಳುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಹಾಗಂತ ಈ ಮಾಧ್ಯಮಗಳಿಗೆ ಸ್ಪಷ್ಟತೆ ಇಲ್ಲ ಅಂತಲ್ಲ. ಬಹುಪಾಲು ಮಾಧ್ಯಮ ಜಾತಿವಾದಿ, ಸಂಪ್ರದಾಯವಾದಿಗಳಾಗಿದ್ದು ಒಂದೇ ಜಾತಿಗೆ ಸೇರಿದವುಗಳಾಗಿವೆ. ಹಾಗಾಗಿ, ಬಡವರ, ರೈತರ, ಕೂಲಿ ಕಾರ್ಮಿಕರ ಹಾಗೂ ಮಹಿಳಾ ಪರ ಯೋಜನೆಗಳನ್ನು ವಿರೋಧಿಸುವುದೇ ತಮ್ಮ ಧರ್ಮ ಎಂದುಕೊಂಡಿವೆ.

ಬಿಜೆಪಿ ಸೋಲಿಗೆ ಕಾರಣಗಳು

ಕಾಂಗ್ರೆಸ್ ಪಕ್ಷ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಐದು ಗ್ಯಾರಂಟಿಗಳು ಜನಪರವಾಗಿದ್ದವು. ಗೋದಿ ಮಿಡಿಯಾಗಳ ಆರ್ಭಟದ ನಡುವೆಯೂ, ಜನಪರ ಮಾಧ್ಯಮಗಳು ನೈಜ ಸುದ್ದಿ ಬಿತ್ತರಿಸಿದ್ದು, ಪ್ರಗತಿಪರ ಸಾಹಿತಿಗಳು, ಚಿಂತಕರು, ಸಂಘಟನೆಗಳು ಹಾಗೂ ಅನೇಕ ಸಂಸ್ಥೆಗಳು ಒಟ್ಟಾಗಿ ಬಿಜೆಪಿಯನ್ನು ಇಲ್ಲಿಂದ ಕದಲಿಸಲೇಬೇಕು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಬೇಕು, ಬಸವಾದಿ ಶರಣರು ಸೂಫಿಗಳು ದಾಸ ಪುರಂದರ ಕುವೆಂಪು ಕಾರಂತರು ಕಂಡ ಸರ್ವಜನಾಂಗದ ಶಾಂತಿಯ ತೋಟ ಉಳಿಸಲೇಬೇಕೆಂದು ಪಣತೊಟ್ಟಿದ್ದರು. ಜತೆಗೆ ಬಿಜೆಪಿ ಸರ್ಕಾರದ ಮೂರು ವರ್ಷದ ಅಧಿಕಾರ ಅವಧಿಯಲ್ಲಿ ಅತ್ಯಂತ ಕಳಪೆ ಆಡಳಿತ ನೀಡಿದ್ದು, ಜನತಾ ಪರಿವಾರದಿಂದ ಬಂದಿದ್ದರೂ, ಆರ್‍ಎಸ್‍ಎಸ್ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಸಣ್ಣ ನಿರ್ಣಯವೂ ತೆಗೆದುಕೊಳ್ಳಲಾಗದ ಅಸಮರ್ಥ, ನಿಷ್ಪ್ರಯೋಜಕ ಮುಖ್ಯಮಂತ್ರಿಯ ನಡೆಗಳಿಂದ ಬಿಜೆಪಿ ಕರುನಾಡಿಂದ ಧೂಳಿಪಟವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.

2014 ರಿಂದೀಚೆಗೆ ಲೋಕಪಾಲದ ಬಗ್ಗೆ ಮಾತನಾಡುವುದನ್ನು ಇವು ನಿಲ್ಲಿಸಿವೆ. ಕಪ್ಪು ಹಣ, 2 ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವ ಆಶ್ವಾಸನೆ ಬಗ್ಗೆ ಮಾತನಾಡುವುದು ಇವರಿಗೆ ಅಪಶಕುನ. ಬೆಲೆ ಏರಿಕೆ, ರೈತ ಕಾರ್ಮಿಕರ ಸಮಸ್ಯೆ ಇವರಿಗೆ ಸಾಮಾಜಿಕ ಪಿಡುಗು ಅನ್ನಿಸುವುದೇ ಇಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು, ರಾಷ್ಟ್ರಕ್ಕೆ ಚಿನ್ನ ತಂದುಕೊಟ್ಟ ಮಹಿಳಾ ಕುಸ್ತಿ ಪಟುಗಳ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡದಂತೆ ಮನಸ್ಸು ಕಲ್ಲು ಮಾಡಿಕೊಂಡಿವೆ. ಗುಂಪು ಹಲ್ಲೆಗಳ ಬಗ್ಗೆ ವರದಿಗಳಿಲ್ಲ. ಆದರೆ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳನ್ನು ಗುರಿಯಾಗಿಸುವುದು ಈ ಕೆಲವು ಮಾಧ್ಯಮಗಳ ಹಿಡನ್ ಅಜೆಂಡಾಗಳಾಗಿವೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎನಿಸಿಕೊಂಡಿರುವ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಸಂಘ ಪರಿವಾರ, ಒಬ್ಬ ವ್ಯಕ್ತಿ ಒಂದು ಪಕ್ಷ ಹಾಗೂ ಒಂದು ಸಿದ್ಧಾಂತಕ್ಕೆ ಜೋತು ಬಿದ್ದು ಹಗಲು ರಾತ್ರಿ ಅದೇ ಭಜನೆ ಮಾಡುತ್ತ ಮೂರೂ ಮಾರಿಕೊಂಡಂತೆ ವರ್ತಿಸುತ್ತಿವೆ. ಹಾಗಾಗಿ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎನಿಸಿಕೊಂಡಿರುವ ಪತ್ರಿಕೋದ್ಯಮ ಯಾವ ಹಂತದಲ್ಲಿ ಕೊಳೆತಿದೆ ಎನ್ನುವುದು ಜನಸಾಮಾನ್ಯರೇ ನಿರ್ಧರಿಸಬೇಕು. ಇದನ್ನು ಸರಿಪಡಿಸುವ ಜವಾಬ್ದಾರಿಯೂ ಜನಸಾಮಾನ್ಯರ ಮೇಲೆಯೇ ಇದೆ.

ವಿಕ್ರಮ್ ತೇಜಸ್, ವಾಡಿ

ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ

ಇದನ್ನೂ ಓದಿ-ಆ ಅಪಪ್ರಚಾರಗಳಿಗೆ ಆಘಾತಗೊಳ್ಳುವ ಮುನ್ನ..

You cannot copy content of this page

Exit mobile version