ಮಂಗಳೂರು : ‘ಮುಸ್ಲಿಂ ಮಹಿಳೆಯರು ನಾಯಿ ಮರಿ ಹಾಕಿದಂತೆ ಹೆರುತ್ತಾರೆ’ ಎಂದು ಹೇಳಿಕೆ ನೀಡಿ ಕೋಮುಸೌಹಾರ್ದತೆ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದಿದ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ಇಂದೂ ಇತ್ಯರ್ಥವಾಗದೇ ಮುಂದೂಡಲ್ಪಟ್ಟಿತು. ಬಿಎನ್‌ಎಸ್‌ಎಸ್ ಸೆಕ್ಷನ್ 338, 339 ಪ್ರಕಾರ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಸತೀಶನ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಾದ ಮಂಡಿಸಲು ಸಮಾಯಾವಕಾಶ ಕೇಳಿದರು. ಪೊಲೀಸರ ಪರ ಸರ್ಕಾರಿ ವಕೀಲರು ಜಾಮೀನು ಅರ್ಜಿಗೆ ಆರು ಪುಟಗಳ ತಕರಾರು ಅರ್ಜಿ ಸಲ್ಲಿಸಿದ್ದು, ನ್ಯಾಯಾಲವು ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
ಸರ್ಕಾರದ 6 ಪುಟಗಳ ತಕರಾರು ಅರ್ಜಿಯಲ್ಲಿ ಏನಿದೆ?
1. ಆರೋಪಿತನಾದ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡುವ ಹವ್ಯಾಸಿ ಉಳ್ಳವರಾಗಿದ್ದು ಇವರ ಮೇಲೆ ಈಗಾಗಲೇ ಬೇರೆ ಬೇರೆ ಠಾಣೆಗಳಲ್ಲಿ, ಇದೇ ರೀತಿಯ ದ್ವೇಷ ಭಾಷಣಕ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಆರೋಪಿತನಿಗೆ ಕಾನೂನಿನ ಮೇಲೆ ಅಥವಾ ನ್ಯಾಯಾಲಯದ ಮೇಲೆ ಯಾವುದೇ ರೀತಿಯ ಗೌರವ ಇಲ್ಲದೆ ಇದ್ದು, ಇಂತಹ ಪ್ರಕರಣಗಳಲ್ಲಿ, ಪುನರಾವರ್ತಿತ ಕೃತ್ಯಗಳನ್ನು ಮಾಡುವವರಾಗಿರುತ್ತಾರೆ.
ಆರೋಪಿತನ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ 08/2012 U/s 153(A), 295(A) IPC, ವಿಟ್ಲ ಠಾಣೆಯಲ್ಲಿ ಕ್ರೈನಂ 25/2014 153(A), 295(A) IPC, ಬಂಟ್ವಾಳ ನಗರ ಠಾಣೆಯಲ್ಲಿ 101/2014 153(A)IPC, ಬೆಳ್ತಂಗಡಿ ಠಾಣೆ 105/2014 153(A)IPC, ಪುತ್ತೂರು ನಗರ ಠಾಣೆಯಲ್ಲಿ 113/2014 506,306 IPC, ಬಂಟ್ವಾಳ ನಗರ 07/2015 153(A), 505(2) IPC, ಬಂಟ್ವಾಳ ನಗರ ಠಾಣೆಯಲ್ಲಿ 177/2017 142,143,188 r/w 149 IPC, ಬಜ್ಪೆ ಪೊಲೀಸ್ ಠಾಣೆಯಲ್ಲಿ 157/2018 125 of Representation of People Act, ಕೊಣಾಜೆ ಠಾಣೆಯಲ್ಲಿ 58/2018, 153 (A), IPC, 125 of Representation of people act, ಬಂಟ್ವಾಳ ನಗರ ಠಾಣೆಯಲ್ಲಿ 130/2019
295,298 IPC, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ 263/2023 IPC 354,294,509,506,153(A), 295(A),295,298, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ 60/2025, 353(2)BNS-2023 ದಾಖಲಾಗಿದೆ.
2. ಆರೋಪಿ ಪ್ರಭಾಕರ ಭಟ್ ಪ್ರಭಾವಿ ರಾಜಕೀಯ ವ್ಯಕ್ತಿ ಮತ್ತು ಆರ್ಥಿಕವಾಗಿ ಬಲಿಷ್ಠವಾಗಿದ್ದು, ಪದೇ ಪದೇ ಕಾನೂನನ್ನು ಉಲಂಘನೆ ಮಾಡುತ್ತಿದ್ದು, ಕಾನೂನಿಗೆ ಗೌರವ ನೀಡದೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೆ.
3. ಸದ್ರಿ ಪ್ರಕರಣದಲ್ಲಿ, ಆರೋಪಿಯ ಧ್ವನಿಮುದ್ರಣ ಸಂಗ್ರಹಿಸಲು ವೀಡಿಯೋಗ್ರಾಫಿ ಮಾಡಿದವರಿಂದ ವೀಡಿಯೋವನ್ನು ವಶಪಡಿಸಿಕೊಳ್ಳಲು ಬಾಕಿ ಇರುತ್ತದೆ.
4. ಆರೋಪಿಯು ಮಹಿಳೆಯರ ಬಗ್ಗೆ ಅವಹೇಳನ ಮಾಡಿ, ಮಹಿಳೆಯರ ಗೌರವಕ್ಕೆ ಧಕ್ಕೆ ತರುವ, ಅವಮಾನಕಾರಿ ಮತ್ತು ಸಾರ್ವಜನಿಕ ಅಶ್ಲೀಲ ಹೇಳಿಕೆಗಳನ್ನು ನೀಡಿದಂತಹ ಕೃತ್ಯವನ್ನು ಎಸಗಿರುವುದಾಗಿದೆ.
5. ದಕ್ಷಿಣ ಕನ್ನಡ ಜಿಲೆಯಲ್ಲಿ ಕಳೆದ 5 ತಿಂಗಳಲ್ಲಿ ಕೋಮುವಿಚಾರಕ್ಕೆ ಸಂಬಂದಿಸಿದಂತೆ ಮೂರು ಕೊಲೆಗಳಾಗಿದ್ದು, ಧರ್ಮ ಧರ್ಮಗಳ ನಡುವೆ ದ್ವೇಷವನ್ನು, ಕೆಟ್ಟಭಾವನೆಯನ್ನು ಉಂಟುಮಾಡುವ ಉದ್ದೇಶದಿಂದ ಪದೇ ಪದೇ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದಲ್ಲಿ ಸಾರ್ವಜನಿಕರಲ್ಲಿ, ಕೋಮು ಭಾವನೆಯನ್ನು ಮೂಡಿಸಿ ಇಂತಹ ಕೃತ್ಯಗಳನ್ನು ಮಾಡಲು ಪ್ರಚೋದನೆ ಮಾಡುವವರಾಗಿರುತ್ತಾರೆ.
6. ಆರೋಪಿತನಿಗೆ ದಿನಾಂಕ 30.10.2025 ರಂದು ವಿಚಾರಣೆಗೆ ಹಾಜರಾಗಬೇಕೆಂದು ಕಲಂ:35(3) ಬಿ.ಎನ್.ಎಸ್. ಎಸ್.-2023 ರಂತೆ ನೋಟೀಸು ನೀಡಿದ್ದು, ಅದರಂತೆ ಆರೋಪಿತನು ವಿಚಾರಣೆಗೆ ಹಾಜರಾಗಿರುವುದಿಲ್ಲ. ಇದರಿಂದ ತನಿಖೆಯ ಪ್ರಗತಿಗೆ ಅನಾನುಕೂಲ ಉಂಟಾಗಿದ್ದು, ಆರೋಪಿತನು ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದು ಬರುತ್ತದೆ.
8. ಆರೋಪಿತನು ಈ ಹಿಂದೆ ಭಾಗಿಯಾದ ಪ್ರಕರಣಗಳನ್ನು ಗಮನಿಸಿದರೆ ಆರೋಪಿತನು ಇದೇ ತರಹದ ದ್ವೇಷ ಭಾಷಣಗಳಂತಹ ಅಪರಾಧದಲ್ಲಿ, ಪದೇ ಪದೇ ಭಾಗಿಯಾಗಿರುವುದಾಗಿ ಕಂಡುಬರುತ್ತದೆ. ಆರೋಪಿತನು ಕೆಲವು ಪ್ರಕರಣಗಳಲ್ಲಿ, ನ್ಯಾಯಾಲಯಗಳಿಂದ ಜಾಮೀನು ಪಡೆದುಕೊಂಡಿದ್ದು, ಆ ವೇಳೆ “ಮುಂದಿನ ದಿನಗಳಲ್ಲಿ ಇದೇ ತರಹದ ಪ್ರಕರಣಗಳಲ್ಲಿ ಭಾಗಿಯಾಗಬಾರದು ಎಂಬಂತಹ ಒಂದು ಸಾಮಾನ್ಯ ಷರತ್ತು” ಹಾಕಲಾಗಿತ್ತು. ಅಂತಹ ಷರತ್ತನ್ನು ಆರೋಪಿಯು ಮುರಿದಿದ್ದಾರೆ. ಹಾಗಾಗಿ ಆರೋಪಿಗೆ ಜಾಮೀನು ನೀಡಬಾರದು.
9. ಆರೋಪಿಯು ಆರ್ಥಿಕ ಮತ್ತು ರಾಜಕೀಯ ವಾಗಿ ಬಲಾಡ್ಯರಾಗಿದ್ದು, ಜಾಮೀನು ನೀಡಿದರೆ ದೂರುದಾರರಿಗೆ ಮತ್ತು ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆ ಇರುತ್ತದೆ.
10. ಆರೋಪಿತನಿಗೆ ಜಾಮೀನು ನೀಡಿದ್ದರೆ ಪದೇ ಪದೇ ಇದೇ ರೀತಿಯ ಕೃತ್ಯಗಳನ್ನು ಮಾಡುವ ಸಾಧ್ಯತೆ ಇದೆ.
11. ಪ್ರಕರಣವು ತನಿಖಾ ಹಂತದಲ್ಲಿದ್ದು, ಆರೋಪಿತನಿಗೆ ಜಾಮೀನು ನೀಡಿದ್ದಲ್ಲಿ ಪ್ರಕರಣಕ್ಕೆ ಸಹಕರಿಸದೇ ತಲೆಮರೆಸಿಕೊಳ್ಳುವ ಮತ್ತು ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.
12. ಆರೋಪಿತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ನ್ಯಾಯಾಲಯದಲ್ಲಿ ವಿಚಾರಣೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
13. ದೇಶದಲ್ಲಿ, ದ್ವೇಷ ಭಾಷಣ (Hate Speech) ವನ್ನು ನಿಗ್ರಹಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಗಳನ್ನು ಮಾಡಿದ್ದು, ಇಂತಹ ಆರೋಪಿತರಿಗೆ ಜಾಮೀನು ನೀಡುವುದು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲು ಅನಾನುಕೂಲವಾಗುತ್ತದೆ. ಹಾಗಾಗಿ ಆರೋಪಿತನಿಗೆ ಈ ಮೇಲಿನ ಕಾರಣಗಳಿಗೆ ಜಾಮೀನನ್ನು ಯಾವುದೇ ಕಾರಣಕ್ಕೂ ಮಂಜೂರಾತಿ ಮಾಡಬಾರದು.
ಈ ರೀತಿಯಾಗಿ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಪ್ರಭಾಕರ ಭಟ್ ತಾನು ಮಾಡಿದ ಭಾಷಣದ ವಿರುದ್ದ ದಾಖಲಾಗಿರುವ ಎಫ್ಐಆರ್ ಗೆ ನಿರೀಕ್ಷಣಾ ಜಾಮೀನು ಕೋರಿ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಅಲ್ಲಿಸಿದ್ದರು. ಅಕ್ಟೋಬರ್ 27 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ’ ನೀಡಿ ಪೂರ್ಣ ಪ್ರಮಾಣದ ವಿಚಾರಣೆ ಮತ್ತು ನಿರೀಕ್ಷಣಾ ಜಾಮೀನು ಸಂಬಂಧ ಅದೇಶವನ್ನು ಅಕ್ಟೋಬರ್ 29 ಕ್ಕೆ ಮುಂದೂಡಿತ್ತು. ಅಕ್ಟೋಬರ್ 29 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ದೂರುದಾರರಾಗಿರುವ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಸತೀಶನ್ ಅವರು ಬಿಎನ್‌ಎಸ್‌ಎಸ್ ಸೆಕ್ಷನ್ 338, 339 ಪ್ರಕಾರ ದೂರುದಾರ ಮಹಿಳಾ ಹೋರಾಟಗಾರ್ತಿ ಈಶ್ವರಿ ಪರ ಅರ್ಜಿ ಸಲ್ಲಿಸಿದ್ದರು. ಸಹಜವಾಗಿ ಆರೋಪಿ ವಿರುದ್ಧ ಸರ್ಕಾರಿ ವಕೀಲರಿಗೆ ಮಾತ್ರ ವಾದಿಸುವ ಮತ್ತು ತಕರಾರು ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ. ದೂರುದಾರರ ಪರ ವಕೀಲರು ತಕರಾರು ಅರ್ಜಿ ಅಥವಾ ವಾದ ಮಂಡಿಸಬೇಕಾದರೆ ಬಿಎನ್‌ಎಸ್‌ಎಸ್ ಸೆಕ್ಷನ್ 338 ಮತ್ತು 339 ರಂತೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅನುಮತಿ ಕೋರಬೇಕಿರುತ್ತದೆ. ಅಕ್ಟೋಬರ್ 27 ರಂದು ವಕೀಲ ಸತೀಶನ್ ಅರ್ಜಿಯನ್ನು ಪಡೆದುಕೊಂಡ ನ್ಯಾಯಾಲಯವು, ಪ್ರಭಾಕರ ಭಟ್ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 04 ಕ್ಕೆ ಪ್ರಕರಣವನ್ನು ಮುಂದೂಡಿತ್ತು.
ನವೆಂಬರ್ 04 ರಂದು ಅರ್ಜಿ ವಿಚಾರಣೆಗೆ ಬಂದಾಗ ಈಶ್ವರಿ ಪದ್ಮುಂಜ ಪರ ವಕೀಲ ಸತೀಶನ್ ಅವರ ಬಿಎನ್‌ಎಸ್‌ಎಸ್ ಸೆಕ್ಷನ್ 338, 339 ಅರ್ಜಿಗೆ ಪ್ರಭಾಕರ ಭಟ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿಲ್ಲ. ಅರ್ಜಿ ಸಂಬಂಧ ವಿಸ್ತೃತ ವಾದ ಮಂಡಿಸಲು ವಕೀಲ ಸತೀಶನ್ ಅವರು ಸಮಯಾವಕಾಶ ಕೇಳಿದ್ದು ಅರ್ಜಿ ವಿಚಾರಣೆಯನ್ನು ನವೆಂಬರ್ 10 ಕ್ಕೆ ಮುಂದೂಡಲಾಗಿದೆ.
