ಹೊಸದಿಲ್ಲಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ಗಳು, ಆಹಾರ ಪದಾರ್ಥಗಳು ಮತ್ತು ತಂಪು ಪಾನೀಯಗಳ ಬೆಲೆಗಳು ವಿಪರೀತವಾಗಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಸಿನಿಮಾ ಥಿಯೇಟರ್‌ಗಳಿಗೆ ಪ್ರೇಕ್ಷಕರ ಆಗಮನ ಮುಂದುವರಿಯಬೇಕಾದರೆ, ದರಗಳನ್ನು ಕೈಗೆಟುಕುವಂತೆ ಇಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ಗಳ ಗರಿಷ್ಠ ದರವನ್ನು ₹200 ಕ್ಕೆ ಮಿತಿಗೊಳಿಸಿ ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ತಡೆ ನೀಡಿದ್ದ ಕರ್ನಾಟಕ ಹೈಕೋರ್ಟ್ ವಿಧಿಸಿದ ಕೆಲವು ಷರತ್ತುಗಳನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠವು ಮಂಗಳವಾರ ನಡೆಸಿತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾರಾಟವಾಗುವ ವಸ್ತುಗಳ ಬೆಲೆಗಳು ವಿಪರೀತವಾಗಿರುವುದನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್, “ನೀವು ವಾಟರ್ ಬಾಟಲ್‌ಗೆ ₹100, ಕಾಫಿಗೆ ₹700 ವಸೂಲಿ ಮಾಡುತ್ತಿದ್ದೀರಿ” ಎಂದು ಟೀಕಿಸಿದರು.
ಇದಕ್ಕೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಪರವಾಗಿ ಮುಕುಲ್ ರೋಹಟ್ಗಿ ಪ್ರತಿಕ್ರಿಯಿಸಿ, “ತಾಜ್ ಹೋಟೆಲ್‌ನಲ್ಲಿ ಕಾಫಿಗೆ ₹1,000 ವಸೂಲಿ ಮಾಡುತ್ತಾರೆ. ಅಲ್ಲಿನ ದರಗಳನ್ನು ನೀವು ನಿಯಂತ್ರಿಸಬಹುದೇ? ಇದು ಕೇವಲ ಜನರ ಇಷ್ಟಾಇಷ್ಟಗಳ ಮೇಲೆ ಅವಲಂಬಿತವಾಗಿರುತ್ತದೆ” ಎಂದರು. ಇದಕ್ಕೆ ನ್ಯಾಯಮೂರ್ತಿ ನಾಥ್ ಅವರು, “ದರಗಳನ್ನು ನಿಯಂತ್ರಣ ಮಾಡಲೇಬೇಕು. ಜನರು ಥಿಯೇಟರ್‌ಗಳಿಗೆ ಬಂದು ಮನರಂಜನೆ ಪಡೆಯುವಂತೆ ಬೆಲೆಗಳು ಕೈಗೆಟುಕುವಂತೆ ಇರಬೇಕು. ಇಲ್ಲದಿದ್ದರೆ ಥಿಯೇಟರ್‌ಗಳು ಖಾಲಿಯಾಗುತ್ತವೆ” ಎಂದು ಉತ್ತರಿಸಿದರು.
ರೋಹಟ್ಗಿ ತಮ್ಮ ವಾದವನ್ನು ಮುಂದುವರಿಸಿ, “ಖಾಲಿಯಾಗಿದ್ದರೆ ಇರಲಿ. ಈ ಆದೇಶಗಳು ಮಲ್ಟಿಪ್ಲೆಕ್ಸ್‌ಗಳಿಗೆ ಮಾತ್ರ ಸೀಮಿತ. ಜನರು ಸಾಮಾನ್ಯ ಸಿನಿಮಾ ಥಿಯೇಟರ್‌ಗಳಿಗೂ ಹೋಗಬಹುದು. ಮಲ್ಟಿಪ್ಲೆಕ್ಸ್‌ಗಳಿಗೆ ಮಾತ್ರ ಏಕೆ ಬರಬೇಕು?” ಎಂದು ಪ್ರಶ್ನಿಸಿದರು.
