ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ಹೂಡಿದ್ದ ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ ಬೆಂಗಳೂರು ಗ್ರಾಮಾಂತರ ಸಿವಿಲ್ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ರವಿಕಾಂತೇಗೌಡ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ಸಲೀಂ ಅವರು ಈ ಆದೇಶ ನೀಡಿದ್ದಾರೆ. 2023ರ ಸೆಪ್ಟೆಂಬರ್ 8ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಪ್ರತಿವಾದಿಯಾದ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿ ಅವರು ಉಲ್ಲಂಘಿಸಿದ್ದಾರೆ ಎಂಬುದು ಸಾಬೀತಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅದರಂತೆ ರಾಕೇಶ್ ಶೆಟ್ಟಿ ಅವರು ಮೂರು ತಿಂಗಳ ಕಾಲ ಜೈಲಿನಲ್ಲಿ ಇರಬೇಕಿದ್ದು, ಜೈಲಿನಲ್ಲಿ ಅವರಿಗೆ ತಗಲುವ ವೆಚ್ಚಗಳನ್ನು ದಾವೆದಾರ ಬಿ.ಆರ್. ರವಿಕಾಂತೇಗೌಡ ಅವರೇ ಭರಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
