ಗದಗ: ಲಕ್ಕುಂಡಿಯ ರಿತ್ತಿ ಅವರ ಜಾಗದಲ್ಲಿ ಪತ್ತೆಯಾದ ನಿಧಿಯಲ್ಲಿ 466 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 634 ಗ್ರಾಂ ತಾಮ್ರದ ವಸ್ತುಗಳು ಸಿಕ್ಕಿದ್ದು, ಅವುಗಳನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ. ಈ ನಿಧಿ ಬೆಳಕಿಗೆ ಬರಲು ಕಾರಣನಾದ 14 ವರ್ಷದ ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆ ಅನುಕರಣೀಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಶ್ಲಾಘಿಸಿದರು.
ಲಕ್ಕುಂಡಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಮಾತನಾಡಿದ ಅವರು, ನಿಧಿ ಎಷ್ಟೇ ಮೌಲ್ಯದದ್ದಾಗಿರಲಿ, ಅದನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಬಾಲಕನ ನಡೆ ನಿಧಿಗಿಂತಲೂ ದೊಡ್ಡದು ಎಂದು ಮುಖ್ಯಮಂತ್ರಿ ಕೂಡ ಪ್ರಶಂಸಿಸಿದ್ದಾರೆ ಎಂದರು. ಪತ್ತೆಯಾದ ತಾಮ್ರದ ಪೈಪ್ ಅನ್ನು ಪ್ರಜ್ವಲ್ ದೇವಸ್ಥಾನದ ಕೋಣೆಯಲ್ಲಿ ಸುರಕ್ಷಿತವಾಗಿ ಇಟ್ಟು ಬೀಗ ಹಾಕಿದ್ದಾನೆ ಎಂದು ತಿಳಿಸಿದರು.
ಲಕ್ಕುಂಡಿಯನ್ನು ವಿಶ್ವ ಪರಂಪರಾ ತಾಣವಾಗಿ ಘೋಷಿಸಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ರಾಷ್ಟ್ರಕೂಟರು ಮತ್ತು ಚಾಲುಕ್ಯರ ಆಳ್ವಿಕೆಯ ಐತಿಹಾಸಿಕ ಹಿನ್ನೆಲೆಯುಳ್ಳ ಈ ಪ್ರದೇಶದಲ್ಲಿ ಪತ್ತೆಯಾಗಿರುವ ನಿಧಿಯನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಜನವರಿ 26ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ರಿತ್ತಿ ಕುಟುಂಬವನ್ನು ಜಿಲ್ಲಾಡಳಿತ ಸನ್ಮಾನಿಸಲಿದೆ. ನೆರವು ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಂದೇ ಅಧಿಕೃತ ಮಾಹಿತಿ ಪ್ರಕಟಿಸಲಾಗುವುದು ಎಂದು ಪಾಟೀಲ ತಿಳಿಸಿದರು. ಲಕ್ಕುಂಡಿಯ ಪ್ರಾಚ್ಯಾವಶೇಷ ಸಂಗ್ರಹ ಅಭಿಯಾನದಲ್ಲಿ ಗ್ರಾಮಸ್ಥರು ಈಗಾಗಲೇ 1,100ಕ್ಕೂ ಹೆಚ್ಚು ಪುರಾತನ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ ಎಂದರು.
