ಮುಂಬೈ: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಮುಂಬರುವ ಅಮೆರಿಕ ಪ್ರವಾಸ ಹಾಗೂ ಆರ್‌ಎಸ್‌ಎಸ್ ನೋಂದಣಿ ವಿಚಾರವಾಗಿ ವಂಚಿತ್ ಬಹುಜನ ಆಘಾಡಿ (ವಿಬಿಎ) ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ತೀವ್ರ ವಾಗ್ದಾಳಿ ನಡೆಸಿದ್ದು, ಮೋಹನ್ ಭಾಗವತ್ ಭಾರತೀಯ ನಾಗರಿಕರೋ ಅಥವಾ ಪಾಕಿಸ್ತಾನದ ನಾಗರಿಕರೋ ಎಂಬುದನ್ನು ತಪಾಸಣೆ ಮಾಡುವ ಸಮಯ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, “ಮೋಹನ್ ಭಾಗವತ್ ಅವರು ಆಗಸ್ಟ್ 29 ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಅಲ್ಲಿನ ಕೆಲ ಧಾರ್ಮಿಕ ಹಾಗೂ ಹಕ್ಕುಗಳ ಸಂಘಟನೆಗಳು ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದು, ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿವೆ. ಇಲ್ಲಿನ ದೊಡ್ಡ ವಿಪರ್ಯಾಸವೆಂದರೆ, ಆರ್‌ಎಸ್‌ಎಸ್ ಭಾರತದಲ್ಲಿ ನೋಂದಣಿಯಾದ (ರಿಜಿಸ್ಟರ್ಡ್) ಸಂಸ್ಥೆಯಲ್ಲ; ಆದರೆ ಅಮೆರಿಕದಲ್ಲಿ ಮಾತ್ರ ಆರ್‌ಎಸ್‌ಎಸ್ ನೋಂದಣಿ ಹೊಂದಿದೆ,” ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, “ಅಮೆರಿಕದಲ್ಲಿ ನೋಂದಣಿ ಮಾಡಿಸಿಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾಗಿದೆ, ಆದರೆ ಭಾರತದಲ್ಲಿ ಅದು ನೋಂದಣಿಯಾಗಿಲ್ಲ. ಹಾಗಾಗಿ ಮೋಹನ್ ಭಾಗವತ್ ಅವರು ಭಾರತೀಯ ನಾಗರಿಕರೋ ಅಥವಾ ಪಾಕಿಸ್ತಾನಿ ನಾಗರಿಕರೋ ಎಂಬುದನ್ನು ಪರಿಶೀಲಿಸಬೇಕಾದ ಅಗತ್ಯವಿದೆ,” ಎಂದು ವ್ಯಂಗ್ಯವಾಡಿದರು.
ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) ಸೇರಿದಂತೆ ಹಲವು ಸಂಘಟನೆಗಳು ಭಾಗವತ್ ಅವರ ಪ್ರವಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ ಪ್ರಕಾಶ್ ಅಂಬೇಡ್ಕರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
