ಬೆಂಗಳೂರು: ಧರ್ಮಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆ ಘಟನೆಯನ್ನು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯು ಭಕ್ತಾದಿಗಳು ನಂಬುವ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಕಳಂಕ ತಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಧರ್ಮಸ್ಥಳದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಮಿತ್ರರ ಮೇಲಿನ ಹಲ್ಲೆ ಖಂಡನಾರ್ಹ.. ಇಂತಹ ಗೂಂಡಾಗಳಿಂದಲೇ ಭಕ್ತಾದಿಗಳು ನಂಬುವ ಧರ್ಮಸ್ಥಳಕ್ಕೆ ಕಳಂಕ ಬಂದಿರುವುದು.. ಸೌಜನ್ಯಾಳ ದಾರುಣ ಹತ್ಯೆಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ.. ದಯವಿಟ್ಟು ಬಂಧಿಸಿ ಸತ್ಯ ಹೊರತನ್ನಿ” ಎಂದು ಪ್ರಕಾಶ್ ರಾಜ್ ತಮ್ಮ X (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸೌಜನ್ಯಾ ಅವರ ದಾರುಣ ಹತ್ಯೆ ಪ್ರಕರಣಕ್ಕೆ ನ್ಯಾಯ ಕೇಳಿದಾಗ ಕೆಲವರಿಗೆ ಏಕೆ ಕೋಪ ಬರುತ್ತದೆ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ. ಈ ಮೂಲಕ ಮಾಧ್ಯಮದವರ ಮೇಲಿನ ಹಲ್ಲೆ ಮತ್ತು ಸೌಜನ್ಯಾ ಪ್ರಕರಣದ ನಡುವೆ ಸಂಬಂಧ ಕಲ್ಪಿಸಿ, ಸತ್ಯವನ್ನು ಹೊರತರಲು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಅಸ್ಥಿಪಂಜರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ವರದಿ ಮಾಡಲು ತೆರಳಿದ್ದವು. ಈ ವೇಳೆ ಕೆಲ ಕಿಡಿಗೇಡಿಗಳು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿ, ಅವರ ಕ್ಯಾಮೆರಾಗಳನ್ನು ಹಾಳು ಮಾಡಿದ್ದರು. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
https://x.com/prakashraaj/status/1953115237030236546