ಹುಬ್ಬಳ್ಳಿ: ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವು ಅದರ ಆರ್ಥಿಕ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ಧನದಾಹವು ಕೇಂದ್ರದ ‘ಆತ್ಮನಿರ್ಭರ ಭಾರತ’ದ ಕನಸಿಗೆ ಕೊಡಲಿ ಪೆಟ್ಟು ನೀಡುತ್ತಿದ್ದು, ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸುವ ಬದಲು ಜನರನ್ನು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳತ್ತ ಮುಖ ಮಾಡುವಂತೆ ಮಾಡುತ್ತಿದೆ ಎಂದು ಅವರು ಆಪಾದಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಗತ್ತಿನಾದ್ಯಂತ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತವು ಆಮದು ಅವಲಂಬನೆಯನ್ನು ತಗ್ಗಿಸಲು ನವೀಕರಿಸಬಹುದಾದ ಇಂಧನ ಮತ್ತು ಇವಿ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ, ಕರ್ನಾಟಕ ಸರ್ಕಾರವು ಕೇಂದ್ರದ ಇಂತಹ ಸ್ವಾವಲಂಬಿ ಯೋಜನೆಗಳಿಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರೂವರೆ ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರವು ಕೇವಲ 250 ಕೋಟಿ ರೂಪಾಯಿಗಳ ಆದಾಯ ಸಂಗ್ರಹಕ್ಕಾಗಿ ಇವಿ ವಾಹನಗಳ ಮೇಲೆ ತೆರಿಗೆ ವಿಧಿಸಿರುವುದು ದುರದೃಷ್ಟಕರ. ಜನಸಾಮಾನ್ಯರ ಮೇಲೆ ಅನಗತ್ಯ ಹೊರೆ ಹೊರಿಸುತ್ತಿರುವ ಸರ್ಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಾಣಿಜ್ಯ ತೆರಿಗೆಯಿಂದ ಹೆಚ್ಚಿನ ಆದಾಯ ಗಳಿಸುವ ಏಕೈಕ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ ಎಂದು ಜೋಶಿ ತೀವ್ರವಾಗಿ ಟೀಕಿಸಿದ್ದಾರೆ.
