ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಆಡಳಿತ ಅಧಿಕಾರಿಗಳಿಗೆ ಅಸಹ್ಯಕರ ವಸ್ತುಗಳು ಹಾಗೂ ಅಶ್ಲೀಲ ಚಿತ್ರಗಳನ್ನು ಒಳಗೊಂಡ ಪಾರ್ಸೆಲ್‌ಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ವಿದೇಶಿ ಪೌರನನ್ನು ಕೆಐಎ ಪೊಲೀಸರು ಬಂಧಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ವಿಮಾನ ನಿಲ್ದಾಣದ ಆಡಳಿತ ಕಚೇರಿಗೆ ನಿರಂತರವಾಗಿ ಅನುಮಾನಾಸ್ಪದ ಪಾರ್ಸೆಲ್‌ಗಳು ಬರುತ್ತಿದ್ದವು. ಪಾರ್ಸೆಲ್‌ಗಳನ್ನು ತೆರೆಯುತ್ತಿದ್ದ ಅಧಿಕಾರಿಗಳಿಗೆ ದುರ್ವಾಸನೆಯೊಂದಿಗೆ ಅಸಹ್ಯಕರ ದೃಶ್ಯ ಎದುರಾಗಿದ್ದು, ಒಳಗೆ ಕೊಳೆತ ತರಕಾರಿಗಳು, ಬಾಡಿದ ಹೂವಿನ ಹಾರಗಳು, ಹಳೆಯ ಬಳಕೆಯ ವಸ್ತುಗಳು ಹಾಗೂ ಅಶ್ಲೀಲ ಚಿತ್ರಗಳು ಪತ್ತೆಯಾಗಿದ್ದವು.
ಈ ಬಗ್ಗೆ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ತನಿಖೆಯ ವೇಳೆ ವಿಮಾನ ನಿಲ್ದಾಣದ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಮೇಲೆ ಕಣ್ಣಿಟ್ಟ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಬಂಧಿತನನ್ನು 65 ವರ್ಷದ ಸುಭಾಷ್ ಜೈ ಅಜೀಜ್ ಎಂದು ಗುರುತಿಸಲಾಗಿದೆ. ಭಾರತೀಯ ಮೂಲದ ಈತ ಪ್ರಸ್ತುತ ನೆದರ್ಲ್ಯಾಂಡ್ಸ್ ಪೌರತ್ವ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿಯ ಮಾನಸಿಕ ಸ್ಥಿತಿ ಸಮತೋಲನದಲ್ಲಿಲ್ಲ ಎಂಬುದು ಬೆಳಕಿಗೆ ಬಂದಿದ್ದು, ಉದ್ದೇಶಪೂರ್ವಕವಾಗಿ ಅಧಿಕಾರಿಗಳಿಗೆ ಕಿರುಕುಳ ನೀಡಲು ಈ ರೀತಿಯ ಕೃತ್ಯ ಎಸಗುತ್ತಿದ್ದಾನೆ ಎಂಬುದು ತಿಳಿದುಬಂದಿದೆ.
