ಇದುವರೆಗೆ ವಿನಯ್ ರಾಜಕುಮಾರ್ ರವರ ಬಹುತೇಕ ಸಿನಿಮಾಗಳನ್ನು ನೋಡಿದ್ದೇನೆ. He has never disappointed me! ಅದರಲ್ಲೂ ” ಗ್ರಾಮಾಯಣ” ಸಿನಿಮಾದಲ್ಲಂತೂ ಅವರ ಹೊಸದೊಂದು Flavour ನಮಗೆ ಸಿಗುತ್ತದೆ!ನಿನ್ನೆ ಸಿನಿಮಾ ನೋಡುವವರೆಗೂ ನಾನು ಟ್ರೈಲರ್ ಕೂಡ ನೋಡಿರಲಿಲ್ಲ. ಸಿನಿಮಾ ಶುರುವಾದ ತಕ್ಷಣ ಒಂದು ಹೊಡೆದಾಟದ ದೃಶ್ಯ! ತಕ್ಕಮಟ್ಟಿಗೆ ಇಷ್ಟವಾಯಿತು. ನಂತರ ಹಳ್ಳಿಯ ಕಥೆ. ಏನು ಆಗುವುದಿಲ್ಲ ಅಂದುಕೊಂಡಾಗ ಅಲ್ಲೊಂದು ಉತ್ಸವದ ದೃಶ್ಯವಿದೆ! ಅಲ್ಲೇ ಶುರುವಾಗಿದ್ದು ನಿಜವಾದ Cinematic Experience. ಇಂತಹ ಸಾವಿರಾರು ಆಚರಣೆಗಳು ನಮ್ಮ ಗ್ರಾಮಗಳಲ್ಲಿವೆ. ಸಿನಿಮಾರಂಗದವರು ಇಂಥವುಗಳನ್ನು ಆಯ್ದುಕೊಳ್ಳುತ್ತ ಹೋದರೆ ಕಥಾಹಂದರಕ್ಕೆ ಅದ್ಯಾಕೆ ವಿಷಯಗಳು ಸಿಗುವುದಿಲ್ಲವೋ ನೋಡೋಣ!?!ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿಯವರ ಮ್ಯಾಜಿಕ್ ವರ್ಕ್ ಆಗಿದ್ದು ಇಲ್ಲೇ.
ಊರಿಗೆ ಬಂದ ಮಾರಿಯನ್ನು ಸತ್ಕರಿಸಿ ಮತ್ತೆ ಬರದಂತೆ ಕೇಳಿಕೊಂಡು ಊರಿಂದ ಹೊರಗೆ ಹಾಕುವ ಪದ್ಧತಿ ಇದೆ. ಅಲ್ಲಿ ಬರುವ ನೃತ್ಯಕ್ಕೆ, ಹೊಗಳಿಕೆಗೆ, ಬೈಗುಳಕ್ಕೆ ಎಲ್ಲಕ್ಕೂ ತೇಜಸ್ವಿಯವರ ಸಂಗೀತದಿಂದಾಗಿ ಒಳ್ಳೆಯ ಆರಂಭ ಸಿಗುತ್ತದೆ.ನಂತರ ಹಳ್ಳಿಗಳಲ್ಲಿ ಸಾಮಾನ್ಯವಾಗಿ ನಡೆಯುವ ರಾಜಕೀಯಗಳನ್ನು ಆಧಾರವಾಗಿಟ್ಟುಕೊಂಡು ಕಥೆ ಮುಂದೆ ಸಾಗುತ್ತದೆ. ಈ ಹಂತದಲ್ಲಿ ನನಗೆ ಸಿಕ್ಕ surprise ಲೂಸ್ ಮಾದ ಯೋಗಿ ಅವರದು! ಈ ಪಾತ್ರ ನೋಡಿದಾಗ ನನಗನ್ನಿಸಿದ್ದು ಇದೇ: ” ಸುಮ್ಮನೆ ಹೀರೋ ಪಾತ್ರಗಳಲ್ಲೇ ಮಿಂಚುವ ಬದಲಾಗಿ ಈ ತರದ ಪಾತ್ರಗಳನ್ನು ಆಯ್ದುಕೊಂಡರೆ ಅವರನ್ನು ಬೇರೊಂದು ರೀತಿಯಲ್ಲಿ ಸಿನಿಮಾ ಪ್ರೇಮಿಗಳು ಸ್ವಾಗತಿಸಬಹುದು ಅಂತ!
ನಾಯಕಿ ಮೇಘ ಶೆಟ್ಟಿ ಅವರದು ಮೊದಲಿಗೆ ಕೇವಲ ಗ್ಲಾಮರ್ ಗೋಸ್ಕರ ಅಂದುಕೊಂಡರೂ ನಂತರ ಪಾತ್ರ ಮಾಡುವ ಇಂಪ್ಯಾಕ್ಟ್ ಖುಷಿ ಕೊಡುತ್ತದೆ. ಎಂದಿನಂತೆ ಗೋಪಾಲಕೃಷ್ಣ ದೇಶಪಾಂಡೆ ಅವರ ಬಗ್ಗೆ ಮಾತನಾಡುವ ಹಾಗೆ ಇಲ್ಲ.
ಇಡೀ ಸಿನಿಮಾವನ್ನು ಅವರು ಆವರಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯ ಅಂದರೆ ನಮ್ಮನ್ನಗಲಿದ ಅಪರ್ಣ ಅವರು ಇಲ್ಲಿ ಒಂದು ಚಂದದ ಪಾತ್ರದಲ್ಲಿ ನಮಗೆ ಸಿಕ್ಕಿರುವುದು!ಮೊದಲಾರ್ಧ ಮುಗಿಯುವ ಹೊತ್ತಿಗೆ ಕಥೆಯಲ್ಲಿ ಎಲ್ಲ ಪಾತ್ರಗಳ ಅದ್ಭುತ ಪರಿಚಯ, ಮುಂದೇನಾಗಬಹುದು ಅನ್ನುವ ಕುತೂಹಲ. ಆದರೆ ಕೊಂಚ ನಿರಾಶೆ ಮೂಡಿಸಿದ್ದು ಎರಡನೆಯ ಅರ್ಧ! ಕಥೆಯಲ್ಲಿ ಅನೇಕ ಬೇರೆ ಬೇರೆ ತುಂಬಾ ಕುತೂಹಲ ಅನ್ನಿಸಿಕೊಳ್ಳುವ ಎಳೆಗಳಿವೆ. ಆದರೆ ಪ್ರತಿ ಎಳೆಯೂ ಆ ಕ್ಷಣಕ್ಕಷ್ಟೇ ಕಥೆಯನ್ನು ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಲು ಸಹಾಯ ಮಾಡಿದೆ. ಅದಕ್ಕೇನಾದರೂ ಮುಕ್ತಾಯ/ಪ್ರಾಮುಖ್ಯತೆ ಸಿಗುತ್ತದೆ ಅಂತ ಕಾದರೆ ಅಷ್ಟರಲ್ಲಾಗಲೇ ಇನ್ನೇನೋ ಬಂದಿರುತ್ತದೆ. ಕೇವಲ ಒಂದೆರಡು ವಿಷಯಗಳನ್ನಷ್ಟೇ ತೆಗೆದುಕೊಂಡು ಚಿತ್ರಕಥೆ ಹೆಣೆದಿದ್ದರೆ ಸಿನಿಮಾ ಅದ್ಭುತ ಅನ್ನಿಸುತ್ತಿತೇನೋ. ಒಂದಷ್ಟು ವಿಷಯಗಳು ಹೇಳಿ ಮುಗಿಸುವ ಹೊತ್ತಿಗೆ ಸಿನಿಮಾ ಮುಗಿದಿರುತ್ತದೆ! ಇದನ್ನು ಕೊರತೆ ಎನ್ನುವುದಕ್ಕಿಂತ ಸಿನಿಮಾದ Output ಇನ್ನು ಅದ್ಭುತವಾಗಿ ಬರಬಹುದಿತ್ತು ಅನ್ನುವ ದುರಾಸೆ ಅಷ್ಟೇ!
ಮೊದಲಾರ್ಧದಲ್ಲಿ ಲೂಸ್ ಮಾದ ಅವರ ಪಾತ್ರ ಏನೇನೋ ಮಾಡಿಬಿಡುತ್ತದೆ ಅನ್ನುವ ನಂಬಿಕೆ ಮೂಡಿಸಿದರೂ ನಂತರ ಅದು ಸಾಧಾರಣವಾಗಿ ಮುಗಿಯುತ್ತದೆ. ಅಚ್ಯುತ್ ಕುಮಾರ್ ಇದ್ದರೂ ಅವರ ಪಾತ್ರಕ್ಕೆ ಅಷ್ಟೊಂದು ತೂಕವಿಲ್ಲ. ಆದರೆ ಇಡೀ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಪಾತ್ರಗಳಿವೆ. ಒಂದೊಂದು ಪಾತ್ರವನ್ನು ಗಮನಿಸಿದಾಗ ವಾವ್ ಎನಿಸಿದರೂ ಒಟ್ಟಾರೆ ಸಿನಿಮಾ ನೋಡುವಾಗ ಇಂಪ್ಯಾಕ್ಟ್ ಮಾಡುವಂತಹ ಪಾತ್ರಗಳು ಕಡಿಮೆ.
ಹಾಡುಗಳ ವಿಷಯಕ್ಕೆ ಬಂದರೆ, ” ಬೆಂಕಿಯಲ್ಲಿ ತಂಪು ಕಂಡೆನು” ಹಾಡು ಬಿಟ್ಟರೆ ಬೇರೆ ಹಾಡುಗಳನ್ನು ಯುಟ್ಯೂಬ್ ನಲ್ಲಿ ನೋಡಿರಲಿಲ್ಲ. ಆದರೆ ಸಿನಿಮಾ ನೋಡುವಾಗ ಉಳಿದ ಹಾಡುಗಳು ಸಹ ಕನೆಕ್ಟ್ ಆದವು! ಹಾಗೆ ನೋಡಿದರೆ ಪ್ರಮೋಷನ್ ಗೋಸ್ಕರ ಬಳಸಿದ “ಬೆಂಕಿಯಲ್ಲಿ ತಂಪು ಕಂಡೆನು” ಹಾಡು ಕಥೆಗಿಂತ ಕೊಂಚ ಹೊರತು ಒಂದು ಅನ್ನಿಸಿದ್ದು!ಒಟ್ಟಾರೆ ಸಿನಿಮಾ ಬಗ್ಗೆ ಹೇಳಬೇಕೆಂದರೆ ಕೊಟ್ಟ ಹಣಕ್ಕೆ ಮೋಸವಿಲ್ಲ. ಆರಾಮಾಗಿ ಪೂರ್ತಿ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ನಿನ್ನೆಯಷ್ಟೇ ಬಿಡುಗಡೆಯಾಗಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿದೆ. ನೋಡಿ!ಈ ಸಿನಿಮಾ ಅರ್ಧಕ್ಕೆ ನಿಂತು ಹೋಗಿ, ಮತ್ತೆ ಚಿತ್ರೀಕರಣವಾಗಿ ಈಗ ಮುಗಿದು ಬಿಡುಗಡೆ ಆಗಿರುವುದೇ ದೊಡ್ಡ ಪವಾಡ! ನಿರ್ದೇಶಕರಾದ ದೇವನೂರು ಚಂದ್ರು ಅವರು ವಿಶ್ವಾಸ ಕಳೆದುಕೊಳ್ಳದೆ ಸಿನಿಮಾ ಮುಗಿಸಿ ಕಡೆಗೂ ತೆರೆಗೆ ತಂದಿರುವುದನ್ನು ಅಭಿನಂದಿಸಲೇಬೇಕು. ಸಿನಿಮಾದವರ ಪಾಡುಗಳು ಏನೇನು ಅಂತ ಈಗ ಬರುವ ಹೊಸಬರು ಅವರನ್ನು ಮಾತನಾಡಿಸಿದರೆ ದೊಡ್ಡದೊಂದು ಪಾಠ ಅವರು ಹೇಳಬಹುದೇನೋ… ಅವರ ಮುಂದಿನ ಸಿನಿಮಾಗಳಿಗೆ ಶುಭವಾಗಲಿ
ಸಂತೋಷ್ ಕುಮಾರ್ ಎಲ್ ಎಮ್
