Home ಬೆಂಗಳೂರು ಪಕ್ಷ ನಿಷ್ಠೆ, ಪ್ರಾಮಾಣಿಕತೆ, ತ್ಯಾಗಕ್ಕೆ ಮತ್ತೊಂದು ಹೆಸರು ಮಲ್ಲಿಕಾರ್ಜುನ ಖರ್ಗೆ : ಡಿ.ಕೆ ಶಿವಕುಮಾರ್

ಪಕ್ಷ ನಿಷ್ಠೆ, ಪ್ರಾಮಾಣಿಕತೆ, ತ್ಯಾಗಕ್ಕೆ ಮತ್ತೊಂದು ಹೆಸರು ಮಲ್ಲಿಕಾರ್ಜುನ ಖರ್ಗೆ : ಡಿ.ಕೆ ಶಿವಕುಮಾರ್

0

ಬೆಂಗಳೂರು : AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಬೆಂಗಳೂರಿಗೆ ಆಗಮಿಸಿದ್ದು, ಈ ಸಲುವಾಗಿ ಹಮ್ಮಿಕೊಂಡಿದ್ದ ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರು ಮಾತನಾಡಿ ಮಲ್ಲಿಕಾರ್ಜುನ ಖರ್ಗೆಯವರ ಕಾರ್ಯಸಾಧನೆ ಮತ್ತು ಬಿಜೆಪಿಯವರು ನುಡಿದಂತೆ ನಡೆಯದಿರುವ ಬಗ್ಗೆ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್‌ರವರು, ʼಮಹಾತ್ಮ ಗಾಂಧಿ ಪ್ರಾರಂಭಿಸಿದ ಸರ್ವೋದಯ ಹೋರಾಟ ಹಾಗೂ ಧ್ವನಿ ಮೇಲೆ ಖರ್ಗೆ ಅವರು ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಸರ್ವೋದಯ ಸಮಾವೇಶ ಎಂದು ಹೆಸರಿಟ್ಟಿದ್ದೇವೆ. 52 ವರ್ಷಗಳ ನಂತರ ರಾಜ್ಯದ ನಾಯಕರು ಎಐಸಿಸಿ ಅಧ್ಯಕ್ಷರಾಗಿದ್ದಾರೆʼ ಎಂದು ಹೇಳಿದರು.

ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಾವು ತ್ರಿವರ್ಣ ಧ್ವಜದ ಆಶ್ರಯದಲ್ಲಿ ದೇಶಕ್ಕೆ ಸ್ವಾತಂತ್ರ್ಯ, ಶಕ್ತಿ ತಂದುಕೊಟ್ಟಿದ್ದೇವೆ. ಖರ್ಗೆ ಅವರ ಈ ಜವಾಬ್ದಾರಿ ಮಹತ್ವವಾಗಿದೆ. ಗಾಂಧಿ, ಸುಭಾಷ್ ಚಂದ್ರ ಬೋಸ್, ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನಿಜಲಿಂಗಪ್ಪ, ರಾಹುಲ್ ಗಾಂಧಿ ಅವರು ಅಲಂಕರಿಸಿದ ಸ್ಥಾನದಲ್ಲಿ ಖರ್ಗೆ ಅವರು ಕೂತಿದ್ದಾರೆ. ಕಾರ್ಮಿಕರ ಪುತ್ರನಾಗಿ ಕುಗ್ರಾಮದಿಂದ ಬಂದು ದೆಹಲಿವರೆಗೂ ಬೆಳೆದು ನಿಂತಿದ್ದಾರೆ. ಪಕ್ಷ ನಿಷ್ಠೆ, ಪ್ರಾಮಾಣಿಕತೆ, ತ್ಯಾಗಕ್ಕೆ ಮತ್ತೊಂದು ಹೆಸರು ಮಲ್ಲಿಕಾರ್ಜುನ ಖರ್ಗೆಯವರು ಎಂದು ಮಾತನಾಡಿದರು.

ಅವರು ಈ ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ಅವರ ತ್ಯಾಗದ ಗುಣದಿಂದ ಈ ಸ್ಥಾನವೇ ಅವರನ್ನು ಹುಡುಕಿಕೊಂಡು ಬಂದಿದೆ. ಖರ್ಗೆಯವರು ಜಾತಿ, ಧರ್ಮದ ಮೇಲೆ ನಂಬಿಕೆ ಇಟ್ಟವರಲ್ಲ. ಪರಿಶಿಷ್ಟ ಜಾತಿ ಆಧಾರದ ಮೇಲೆ ಅಧಿಕಾರ ಸಿಗಬೇಕು ಎಂದು ಬಯಸಿದವರಲ್ಲ. ಸಚಿವ ಸಂಪುಟದಲ್ಲಿ, ಅವರ ನೇತೃತ್ವದ ವಿರೋಧ ಪಕ್ಷದಲ್ಲಿ, ಅವರ ಅಧ್ಯಕ್ಷತೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಈಗ ಅವರು ಎಐಸಿಸಿ ಅಧ್ಯಕ್ಷರಾಗಿರುವಾಗ ಅವರ ಕೆಳಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡರು.

ರಾಹುಲ್ ಗಾಂಧಿ ಅವರು ದೇಶದ ಏಕತೆ, ಸಮಗ್ರತೆ, ಐಕ್ಯತೆ, ಶಾಂತಿ, ನಿರುದ್ಯೋಗಿ ಯುವಕರು, ರೈತರು, ಕಾರ್ಮಿಕರಿಗೆ ಶಕ್ತಿ ತುಂಬಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಹೆಜ್ಜೆ ಹಾಕುವ ಸಮಯದಲ್ಲಿ ಈ ಚುನಾವಣೆ ನಡೆಯಿತು. ನಮ್ಮ ರಾಜ್ಯದ ನಾಯಕರನ್ನು ಈ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೆಸರು ಸೂಚಿಸುವ ಭಾಗ್ಯ ನಮಗೆ ಸಿಕ್ಕಿತು.

ಈ ದೇಶದ 90ರಷ್ಟು ಮಂದಿ ಮಲ್ಲಿಕಾರ್ಜುನ ಖರ್ಗೆ ಅವರ ಪರ ಮತ ಹಾಕಿದರು. ಈ ಇತಿಹಾಸ ತಿರುಚಲು ಸಾಧ್ಯವಿಲ್ಲ. ಯಾತ್ರೆ ರಾಜ್ಯದಲ್ಲಿ ಮುಕ್ತಾಯ ಆಗುವ ಹೊತ್ತಿಗೆ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಎಂದರು.

ಖರ್ಗೆ ಅವರು ರಾಜ್ಯಕ್ಕೆ ಮಾತ್ರ ಅಲ್ಲ, ಇಡೀ ರಾಷ್ಟ್ರದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಮುಂದಾಗಿದ್ದಾರೆ. ಸೋನಿಯಾ ಗಾಂಧಿ ಅವರು ಒಮ್ಮೆ ಸಂಸತ್ತಿನಲ್ಲಿ ಮಾತನಾಡುತ್ತಾ ಮಲ್ಲಿಕಾರ್ಜುನ ಖರ್ಗೆ ಅವರು ಬಡವರ ಪರವಾಗಿ ಬಂಡೆಯಂತೆ ಕೆಲಸ ಮಾಡುವ ನಾಯಕ ಎಂದು ಗುಣಗಾನ ಮಾಡಿದ್ದರು ರೈಲ್ವೆ, ಕಾರ್ಮಿಕ ಸಚಿವರಾಗಿ ಇತಿಹಾಸ ನಿರ್ಮಿಸಿದ್ದಾರೆ. ಕಾರ್ಮಿಕರಿಗೆ ಸಾಂವಿಧಾನಿಕ ಹಕ್ಕು ನೀಡಿದ್ದಾರೆ. ಇಎಸ್ ಐ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜು ಮಾಡಿ ಕಾರ್ಮಿಕರ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗುವಂತೆ ಮಾಡಿರುವುದು ಮಲ್ಲಿಕಾರ್ಜುನ ಖರ್ಗೆಯವರು ಎಂದು ಹೇಳಿದರು.

ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕಕ್ಕೇ ವಿಶೇಷ ಸ್ಥಾನ ಮಾನ ನೀಡಲು ಆಗುವುದಿಲ್ಲ ಎಂದು ಹೇಳಿತ್ತು ಆದರೆ ಖರ್ಗೆಯವರು ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ಕಲ್ಯಾಣ ಕರ್ನಾಟಕಕ್ಕೇ ಆರ್ಟಿಕಲ್ 371ಜೆ ತಂದು ಇತಿಹಾಸ ಸೃಷ್ಟಿಸಿದರು ಎಂದು ತಿಳಿಸಿದರು.

ಇಡೀ ರಾಷ್ಟ್ರದಲ್ಲಿ ಸ್ಟೀಫನ್ ಅವರ ನಂತರ ದಕ್ಷಿಣ ಭಾರತದಿಂದ ದೊಡ್ಡ ಧ್ವನಿಯಾಗಿ ಬೆಳೆದಿರುವುದು ಖರ್ಗೆ ಅವರು. ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅವರು ಚುನಾವಣೆ ಸಮಯದಲ್ಲಿ 600 ಭರವಸೆ ನೀಡಿದ್ದು, ಅದರಲ್ಲಿ 550 ಈಡೇರಿಸಿಲ್ಲ. ನಾವು ದಿನನಿತ್ಯ ಪ್ರಶ್ನೆ ಹಾಕಿ ಅವರಿಂದ ಉತ್ತರ ಕೇಳುತ್ತಿದ್ದೇವೆ. ಆದರೆ ಇದುವರೆಗೂ ಒಂದೂ ಪ್ರಶ್ನೆಗೂ ಉತ್ತರ ನೀಡಲು ಆಗಿಲ್ಲ ಎಂದು ಹೇಳಿದರು.

ಡಬಲ್ ಇಂಜಿನ್ ಸರ್ಕಾರ ನೀರಾವರಿ ಯೋಜನೆ ಬಗ್ಗೆ ಕೊಟ್ಟ ಭರವಸೆ ಏನಾಯ್ತು? ನುಡಿದಂತೆ ನಡೆಯಲು ನಿಮ್ಮಿಂದ ಆಗಲಿಲ್ಲ. ಪಂಪ್ ಸೆಟ್ ಗೆ ಸೋಲಾರ್ ಹಾಕುವ ರೈತರಿಗೆ ಶೆ.100ರಷ್ಟು ಸಬ್ಸಿಡಿ ನೀಡುತ್ತೇವೆ ಎಂದಿರಿ, ಅದು ಏನಾಯ್ತು? ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಆಧಾರದ ಮೇಲೆ ಬಜೆಟ್ ಅನುದಾನ ನೀಡಲು ಕಾನೂನು ತೆಗೆದುಕೊಂಡು ಬಂದೆವು. ಆದರೆ ನೀವು ಅವರಿಗೆ ರಕ್ಷಣೆ ನೀಡಲಿಲ್ಲ. ಮದಕರಿ ನಾಯಕರ ಹೆಸರಲ್ಲಿ ಮನೆ ನಿರ್ಮಾಣ ಯೋಜನೆಗೆ 6500 ಕೋಟಿ ನೀಡುವುದಾಗಿ ಹೇಳಿದ್ದೀರಿ. ಅದನ್ನು ಮಾಡಲಿಲ್ಲ ಎಂದು ಪ್ರಶ್ನಿಸಿ ಮಾತನಾಡಿದರು.

ಪ್ರಧಾನ ಮಂತ್ರಿ ಅವರು ಹೇಳಿದಂತೆ ರೈತರ ಆದಾಯ ಡಬಲ್ ಆಯಿತೆ? ರೈತರಿಗೆ ನೇರ ಮಾರುಕಟ್ಟೆ ನಿರ್ಮಾಣ ಎಂದಿರಿ. ಅವರಿಗೆ ಸಹಾಯ ಮಾಡಲು ಆಗಲಿಲ್ಲ. ರೈತನಿಗೆ ಪಿಂಚಣಿ, ನಿವೃತ್ತಿ, ಬಡ್ತಿ, ಲಂಚ ಇಲ್ಲ. ಆದರೆ ನಿಮ್ಮ ಸರ್ಕಾರ 40% ಲಂಚ ಪಡೆಯುತ್ತಿದೆ. ರೈತರ ಬೆಳೆಗೆ ಉತ್ತಮ ಬೆಲೆ ನೀಡಲಿಲ್ಲ. ಆದಾಯ ಪಾತಾಳ ಸೇರಿದ್ದು, ಬೆಲೆ ಗಗನಕ್ಕೇರಿದೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

You cannot copy content of this page

Exit mobile version