Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮಹಿಷನನ್ನು ದೆವ್ವ ಎನ್ನುವ ಮೂಲಕ ಸಂಸದ ಪ್ರತಾಪ ಸಿಂಹ ಮೈಸೂರು ಅರಸರಿಗೆ ಅವಮಾನ ಮಾಡುತ್ತಿದ್ದಾರೆ: ಸ್ಥಳೀಯ ಆರ್‌ಎಸ್‌ಎಸ್, ಬಿಜೆಪಿ ಮುಖಂಡರ ಹೇಳಿಕೆ

ಮೈಸೂರು: ಮಹಿಷ ದಸರಾ ಮತ್ತು ಮಹಿಷಾಸುರನ ಕುರಿತಾದ ಸಂಸದ ಪ್ರತಾಪ್‌ ಸಿಂಹ್‌ ಅವರ ಹದ್ದು ಮೀರಿದ ಮಾತುಗಳ ಅವರ ಪಕ್ಷದ ಸ್ಥಳೀಯ ನಾಯಕರಿಗೇ ಮುಜುಗರ ತರಿಸಿದ್ದು ಅವರು ಪತ್ರಿಕಾಗೋಷ್ಟಿ ನಡೆಸಿ ಈ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರತಾಪ ಸಿಂಹರ ಹೋರಾಟಕ್ಕೂ, ಅವರ ಮಾತುಗಳಿಗೂ ನಮಗೂ ಸಂಬಂಧವಿಲ್ಲವೆಂದು ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಈ ಕುರಿತು ಮಾಧ್ಯಮ ವಕ್ತಾರರೊಬ್ಬರ ಜೊತೆ ಮಾತನಾಡಿರುವ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರಾದ ಗಿರಿಧರ್‌ ಅವರು “ಪ್ರತಾಪ್‌ ಸಿಂಹ ಈ ಕ್ಷೇತ್ರದ ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಅವರಿಗೆ ಇಂದು ಇಂತಹ ವಿವಾದಗಳನ್ನು ಹುಟ್ಟುಹಾಕಿ ಚುನಾವಣೆ ಗೆಲ್ಲುವ ಪ್ರಯತ್ನ ನಡೆಸಬೇಕಾಗಿ ಬರುತ್ತಿರಲಿಲ್ಲ. ನಮ್ಮದು ಕೇಡರ್‌ ಬೇಸ್‌ ಪಕ್ಷ, ಹೀಗಿರುವಾಗ ಸ್ಥಳೀಯವಾಗಿ ಯಾವುದಾದರೂ ಹೋರಾಟವನ್ನು ಸಂಘಟಿಸುವುದಿದ್ದರೆ ಮೊದಲು ಕಾರ್ಯಕರ್ತರೊಡನೆ ಸಮಾಲೋಚಿಸಬೇಕು. ಅದನ್ನು ಬಿಟ್ಟು ಹೀಗೆ ಒನ್‌ ಮ್ಯಾನ್‌ ಶೋ ನಡೆಸಲು ಹೊರಟಿರುವುದು ಖಂಡನೀಯ. ನಮ್ಮ ಪಕ್ಷದ ಕೋರ್‌ ಕಮಿಟಿಯಲ್ಲಿ ತೋಂಟದಾರ್ಯ, ನಾಗೇಂದ್ರ, ವಿಜಯಶಂಕರ್‌ ಮುಂತಾದ ನಾಯಕರಿದ್ದಾರೆ. ಕನಿಷ್ಟ ಅವರೊಂದಿಗಾದರೂ ಪ್ರತಾಪ ಸಿಂಹ ಚರ್ಚಿಸಬೇಕಿತ್ತು” ಎಂದು ಅವರು ಬೇಸರ ವ್ಯಕ್ತಪಡಿಸಿದರು.

“ಮಹಿಷಾಸುರ ಸಮಸ್ಯೆ ಸ್ಥಳೀಯವಾದದ್ದು, ಹೀಗಾಗಿ ನಮ್ಮಂತಹ ಮುಖಂಡರನ್ನು ಕೂರಿಸಿಕೊಂಡು ಈ ಕುರಿತು ಚರ್ಚಿಸಬೇಕು. ನಾವು ಯಾಕೆ ಮಹಿಷನನ್ನು ವಿರೋಧಿಸಬೇಕು? ಪಕ್ಷಕ್ಕೇನಾದರೂ ಅದರಿಂದ ಲಾಭವಿದೆಯೇ? ಇವೆಲ್ಲ ಚರ್ಚೆಯಾಗಬೇಕಿತ್ತು. ಆದರೆ ಇದು ಆಗಿಲ್ಲ. ಹೀಗಾಗಿ ಬಿಜೆಪಿ ಮತ್ತು ಆರೆಸ್ಸೆಸ್‌ ನಾಯಕನಾಗಿ ಸಂಸದರ ನಡೆಯನ್ನು ಖಂಡಿಸುತ್ತೇನೆ” ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿದ ಅವರು “ಪ್ರತಾಪ ಸಿಂಹ ನಮ್ಮದೇ ಸಂಸದ ಇರಬಹುದು, ಆದರೆ ನಮ್ಮ ದೇಶ ಪ್ರಜಾಪ್ರಭುತ್ವದ ದೇಶ ಇಲ್ಲಿ ಎಲ್ಲರಿಗೂ ಅವರವರ ಆಚರಣೆ ನಡೆಸಲು ಹಕ್ಕಿದೆ. ಮೈಸೂರಿನ ಮಹಾರಾಜರು ಚಾಮುಂಡಿ ಬೆಟ್ಟದಲ್ಲಿ ಮಹಿಷನ ಅಷ್ಟು ದೊಡ್ಡ ಮೂರ್ತಿಯನ್ನು ನಿಲ್ಲಿಸಿದ್ದಾರಲ್ಲ ಅವರಿಗೆ ಬುದ್ಧಿ ಇರಲಿಲ್ಲವೆ ಹಾಗಾದರೆ? ಅದರ ಇತಿಹಾಸ ಗೊತ್ತಿರಲಿಲ್ಲವರ ಅವರಿಗೆ? ಆ ಕಾಲದಲ್ಲೇ ಅವರು ಅಷ್ಟು ದೊಡ್ಡ ಮೂರ್ತಿಯನ್ನು ನಿಲ್ಲಿಸಿದ್ದಾರೆಂದರೆ ನಾವು ಯೋಚಿಸಬೇಕು. ಸಂಸದ ಇದೇ ಮಹಿಷಾಸುರನನ್ನು ಅಪದ್ಧ, ಅಸಹ್ಯ ಎಂದು ಅಪಮಾನ ಮಾಡುತ್ತಿದ್ದಾರೆ. ಮಹಿಷ ಇದೆಲ್ಲವೂ ಆಗಿದ್ದರೆ ಮಹಾರಾಜರಿಗೆ ಗೊತ್ತಿರಲಿಲ್ಲವೆ? ಮಹಿಷನನ್ನು ಹೀಗೆಲ್ಲ ಕರೆಯುವ ಮೂಲಕ ಸಂಸದ ಪ್ರತಾಪ ಸಿಂಹ ಮಹಿಷನ ಮೂರ್ತಿಯನ್ನು ನಿಲ್ಲಿಸಿದ ಮೈಸೂರಿನ ಮಹಾರಾಜರನ್ನು ಅಪಮಾನಿಸುತ್ತಿದ್ದಾರೆ. ಮಹಿಷನನ್ನು ದೆವ್ವ ಎನ್ನುವುದು ಸರಿಯೆನ್ನುವುದು ಎಷ್ಟು ಸರಿಯೆನ್ನುವುದನ್ನು ಅವರು ಯೋಚಿಸಲಿ” ಎಂದು ಕಿಡಿಕಾರಿದರು.

“ಇಂದು ನಾವು ಶಬರಿಮಲೆಗೆ ಹೋದರೆ ಅಲ್ಲಿ ಮೊದಲು ಬಾಬರ್‌ ಎನ್ನುವ ಮುಸ್ಲಿಂ ರಾಜನ ದರ್ಶನ ಮಾಡಿ ನಂತರ ಅಯ್ಯಪ್ಪನ ದರ್ಶನ ಮಾಡುತ್ತೇವೆ. ಹಾಗಿದ್ದರೆ ಇವರು ಅದನ್ನೂ ತೆಗೆಸುತ್ತಾರೆಯೇ? ಇವರು ಮಹಿಷನನ್ನು ದೆವ್ವ ಎಂದು ಕರೆಯುವ ಮೂಲಕ ಒಂದು ಸಮುದಾಯದ ಭಾವನಗಳನ್ನು ನೋಯಿಸಿ ಅವುಗಳಿಗೆ ಧಕ್ಕೆ ತರುತ್ತಿದ್ದಾರೆ. ಸಮುದಾಯ ಮೇಲೆ ಕಳಂಕ ಹೊರಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಮಹಿಷ ದಸರಾ ಸಮಿತಿಯು ತಾನೂ ಏನೇ ಬಂದರೂ ಮಹಿಷ ದಸರಾ ನಡೆಸಿಯೇ ಸಿದ್ಧ ಎಂದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು