Wednesday, June 26, 2024

ಸತ್ಯ | ನ್ಯಾಯ |ಧರ್ಮ

ಪ್ರವಾಹ ದುರಂತ-ನಲುಗಿದ ಸುಳ್ಯ

ಸುಳ್ಯ: ಕಳೆದ ಒಂದು ವಾರದಲ್ಲಿ ಸುಳ್ಯದ ಕಲ್ಮಕಾರು, ಬಾಳುಗೋಡು, ಕೊಲ್ಲಮೊಗ್ರ, ಹರಿಹರ, ಸುಬ್ರಹ್ಮಣ್ಯ ಭಾಗದಲ್ಲಿ ದೊಡ್ಡ ಪ್ರಮಾಣದ ಗುಡ್ಡ ಕುಸಿತ, ನೆರೆ ಇತ್ಯಾದಿ ಘಟನೆಗಳು ಸಂಭವಿಸಿದೆ. ಭೂ ಕುಸಿತದಿಂದ ಮರಗಳು ಉರುಳಿ ಸೇತುವೆ, ಕಿಂಡಿ ಅಣೆಕಟ್ಟೆಗಳಿಗೆ ಅಡ್ಡಲಾಗಿ ನಿಂತು ನೀರ ಹರಿವಿಗೆ ತಡೆಯಾದ ಕಾರಣ ನದಿಗಳು ತಮ್ಮ ಹರಿವಿನ ದಾರಿಯನ್ನೇ ಬದಲಾಯಿಸಿದ ಪ್ರಕರಣವೂ ನಡೆದಿದೆ. ಇದರ ಪರಿಣಾಮ ಮನೆಗಳು ಕುಸಿದಿವೆ. ಕುಸಿದ ಮನೆಯಡಿ ಸಿಲುಕಿ ಎರಡು ಮಕ್ಕಳು ಅಸು ನೀಗಿದ ದಾರುಣ ಘಟನೆಯೂ ಕಣ್ಣೆದುರಿಗಿದೆ. 2018 ರಲ್ಲಿ ಕೊಡಗಿನ ಮದೆನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಮಾದರಿಯಲ್ಲಿ ಇದು ಸಂಭವಿಸಿದೆ.

ಈ ಘಟನೆಗೆ ಅನೇಕ ಕಾರಣಗಳನ್ನು ಮುಂದಿಡಲಾಗುತ್ತಿದೆ. ಅದರಲ್ಲಿ ಒಂದು ಮುಖ್ಯ ಕಾರಣವೆಂದರೆ ಅರಣ್ಯ, ಬೆಟ್ಟ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ. ಈ ಬಗ್ಗೆ ಪಶ್ಚಿಮ ಘಟ್ಟದ ನಿವಾಸಿಯಾಗಿರುವ ಲೇಖಕ, ರಂಗಕರ್ಮಿ ʼಪ್ರಸಾದ ರಕ್ಷಿದಿʼಯವರನ್ನು ಕೇಳಿದಾಗ “ವಿಜ್ಞಾನಿಗಳು ಹೇಳಿರುವ ಪ್ರಕಾರ, ಈ ಭಾಗಗಳು ಭೂಕಂಪ ವಲಯದಲ್ಲಿ ಬರುತ್ತವೆ. ಸುಮಾರು ಒಂದು ಶತಮಾನದ ಹಿಂದೆ ಸುಮಾರಾಗಿ ಇದೇ ರೀತಿ ಭೂಕಂಪ ಮತ್ತು ಅದನ್ನು  ಹಿಂಬಾಲಿಸಿದ ಮಳೆ ಮತ್ತು ಭೂಕುಸಿತವನ್ನು ಕೊಡಗು ಕಂಡಿತ್ತು. ಅಂದರೆ, 1900 ರಿಂದ 1910 ರ ದಶಕದಲ್ಲಿ ಅಂತ ಹಿರಿಯರು ಹೇಳುತ್ತಾರೆ. 1983 -84 ರಲ್ಲಿ ಸುಳ್ಯ ದ ಬೇಂಗಮಲೆಯ ಗುಡ್ಡದಲ್ಲಿ ದೊಡ್ಡ ಪ್ರಮಾಣದ ಭೂಕುಸಿತ
(land slide) ಉಂಟಾಗಿತ್ತು. ಇಂತಹ ವಲಯದಲ್ಲಿ. ರಸ್ತೆ, ಅಣೆಕಟ್ಟು, ಅಥವಾ ಯಾವುದೇ ಅಭಿವೃದ್ಧಿ ಯೋಜನೆ ಮಾಡುವಾಗ ಹತ್ತಾರು ಸಲ ಯೋಚಿಸಬೇಕು ಮತ್ತು ಅತ್ಯಂತ ಯೋಜಿತವಾಗಿ ಮತ್ತು ಕಡಿಮೆ ಪ್ರಮಾಣದಲ್ಲಿ ಮಾಡಬೇಕು. ಅದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ನಿರಂತರವಾಗಿ ಮಾಡುತ್ತಿರುವ ಭೂ ಅತ್ಯಾಚಾರದ ಫಲವನ್ನು ನಾವೀಗ ಅನುಭವಿಸುತ್ತಿರುವುದು. ಈಗ ಕೆಲವು ದಿನದ ಹಿಂದೆ ಸಣ್ಣ ಪ್ರಮಾಣದ ಭೂಕಂಪ, ಕೊಡಗು ಮತ್ತು ಸುಳ್ಯ ವಲಯದಲ್ಲಿ ಆಗಿದೆ ಎಂಬುದನ್ನು ಗಮನಿಸಿ” ಎಂದು ಹೇಳುತ್ತಾರೆ.

ಹಿಂದೆ ನಮ್ಮಲ್ಲಿ ಬೃಹತ್ ಯಂತ್ರಗಳಿರಲಿಲ್ಲ. ಕೆಲಸಗಳಿಗೆ ಮಾನವ ಶ‍್ರಮವನ್ನೇ ಅವಲಂಬಿಸಬೇಕಾಗಿತ್ತು. ಅದಕ್ಕೊಂದು ಮಿತಿಯೂ ಇತ್ತು. ಹಾಗಾಗಿ ಗುಡ್ಡ ಬೆಟ್ಟಗಳನ್ನು ಕತ್ತರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಬೆಟ್ಟದ ಏರು ತಗ್ಗುಗಳನ್ನು ಬಳಸಿಕೊಂಡೇ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇದರಿಂದ ಪ್ರಕೃತಿಗೆ ಹಾನಿಯಿರಲಿಲ್ಲ. ಆದರೆ ಈಗ ನಾವು ಯಂತ್ರಯುಗದಲ್ಲಿ ಬದುಕುತ್ತಿದ್ದೇವೆ. ಪ್ರತೀ ಊರುಗಳಲ್ಲಿ ಮಣ್ಣು ಅಗೆಯುವ ಬೃಹತ್ ಜೆಸಿಬಿ ಯಂತ್ರಗಳು ದೊಡ್ಡ ಸಂಖ್ಯೆಯಲ್ಲಿವೆ. ಜನರ ಬಳಿ ಹಣವೂ ಇದೆ. ಮಿಲಿಯಗಟ್ಟಲೆ ವರ್ಷ ಹಿಂದೆ ನಿರ್ಮಾಣವಾದ ಬೆಟ್ಟಗಳನ್ನು ಈ ಯಂತ್ರಗಳು ಗಂಟೆಗಳಲ್ಲಿ ಕತ್ತರಿಸಿ ನೆಲ ಸಮ ಮಾಡುತ್ತಿವೆ. ಅದರ ಪರಿಣಾಮವನ್ನು ನಾವೀಗ ನೋಡುತ್ತಿರುವುದು ಎಂದೂ ಜನರು ಮಾತಾಡಿಕೊಳ್ಳುತ್ತಿದ್ದಾರೆ.

ನಿನ್ನೆ ಅಧಿಕಾರಿಗಳು ನೆರೆ ಸಂತ್ರಸ್ತರನ್ನು ಭೇಟಿಯಾಗಿ ಪರಿಹಾರದ ಭರವಸೆಯನ್ನು ನೀಡಿದ್ದಾರೆ. ಆದರೆ ಅಭಿವೃದ್ಧಿ ವಿಷಯದಲ್ಲಿ ಶಾಪಗ್ರಸ್ತವಾಗಿರುವ ಸುಳ್ಯದಂತಹ ಗ್ರಾಮೀಣ ಪ್ರದೇಶವನ್ನು ಈ ವರೆಗಿನ ಯಾವ ಸರಕಾರಗಳೂ ಗಂಭೀರವಾಗಿ ಪರಿಗಣಿಸಿಲ್ಲವಾದ್ದರಿಂದ  ಸಂತ್ರಸ್ತರು ಮತ್ತೆ ಬದುಕು ಕಟ್ಟಿಕೊಳ್ಳುವುದಕ್ಕೆ ಇನ್ನೆಷ್ಟು ವರ್ಷ ಬೇಕಾದೀತು ಎನ್ನುವುದು ಯಕ್ಷ ಪ್ರಶ್ನೆ.

Related Articles

ಇತ್ತೀಚಿನ ಸುದ್ದಿಗಳು