Home ಜನ-ಗಣ-ಮನ ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ

ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ

0

ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ಭಾರತದ ಸಂವಿಧಾನದ ಪೀಠಿಕೆಯು ದೇಶದ ಆತ್ಮದಂತಿದ್ದು, ಅದರ ಆಶಯಗಳನ್ನು ಪ್ರತಿಯೊಬ್ಬ ನಾಗರಿಕರು ಅರಿತುಕೊಳ್ಳುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್ ವಕೀಲ ಆದಿತ್ಯ ಚಟರ್ಜಿ ಅಭಿಪ್ರಾಯಪಟ್ಟರು.

ಸಂವಿಧಾನ ಓದು ಅಭಿಯಾನ ಕರ್ನಾಟಕ ವತಿಯಿಂದ ನಗರದ ಕ್ರೈಸ್ಟ್ ಅಕಾಡಮಿ ಆಫ್ ಲಾ ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ರಾಜ್ಯಮಟ್ಟದ ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂವಿಧಾನವು ದೇಶದ ಎಲ್ಲ ವರ್ಗದ ಜನರನ್ನು ಒಂದೇ ಚೌಕಟ್ಟಿನಡಿ ತಂದು ಸಮಾನ ಹಕ್ಕುಗಳನ್ನು ನೀಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿ ಸಂವಿಧಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ನ್ಯಾಯಾಂಗದ ವಿವಿಧ ತೀರ್ಪುಗಳಲ್ಲಿ ಸಂವಿಧಾನದ ಮಹತ್ವ ಕುರಿತು ವ್ಯಾಪಕ ಚರ್ಚೆಗಳು ನಡೆದಿವೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಸಂದರ್ಭದಲ್ಲಿ ದೇಶದ ಹಲವೆಡೆ ನಾಗರಿಕರು ರಾಷ್ಟ್ರಧ್ವಜ ಹಿಡಿದು ಸಂವಿಧಾನದ ರಕ್ಷಣೆಗೆ ಹೋರಾಟ ನಡೆಸಿದ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. ಸಂವಿಧಾನಕ್ಕೆ ಹಲವು ಸಂದರ್ಭಗಳಲ್ಲಿ ಸವಾಲುಗಳು ಎದುರಾದರೂ ಅದರ ರಕ್ಷಣೆಯೇ ದೇಶದ ರಕ್ಷಣೆಯಾಗಿದೆ. ನ್ಯಾಯ, ಸಮಾನತೆ ಮತ್ತು ಹಕ್ಕುಗಳ ಅರಿವಿಗಾಗಿ ಯುವಜನತೆ ಸಂವಿಧಾನವನ್ನು ಓದಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಲಾ ಕಾಲೇಜಿನ ಪ್ರಾಂಶುಪಾಲ ಫಾದರ್ ಪಿ.ವಿ. ಡೇವಿಸ್ ಮಾತನಾಡಿ, ಸಂವಿಧಾನವು ದೇಶದ ಹೃದಯದಂತಿದ್ದು, ಹೃದಯ ರಕ್ತಸಂಚಲನ ನಡೆಸುವಂತೆ ರಾಷ್ಟ್ರದ ಆಡಳಿತ ಮತ್ತು ನ್ಯಾಯ ವ್ಯವಸ್ಥೆಗೆ ಜೀವ ತುಂಬುತ್ತಿದೆ ಎಂದು ಹೇಳಿದರು.

ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ಶಕ್ತಿ ಸಂವಿಧಾನಕ್ಕಿದೆ. ಇದೇ ಉದ್ದೇಶದಿಂದ ಕಾಲೇಜು ‘ನ್ಯಾಯ ಶ್ರದ್ಧಾ’ ಕಾರ್ಯಕ್ರಮದ ಮೂಲಕ ಜನರಿಗೆ ನ್ಯಾಯ ಮತ್ತು ಸಂವಿಧಾನದ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ತಿಳಿಸಿದರು. ಇದೇ ಹಿನ್ನೆಲೆಯಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಸಿನಿ ಜಾನ್, ಸಂವಿಧಾನ ಓದು ಅಭಿಯಾನ ಕರ್ನಾಟಕದ ಸಂಚಾಲಕ ಬಿ. ರಾಜಶೇಖರಮೂರ್ತಿ, ಹೈಕೋರ್ಟ್ ವಕೀಲ ಶ್ರೀಹರಿ, ಕನ್ನಡ ಪ್ರಾಧ್ಯಾಪಕ ಡಾ. ಮಹೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಕಾನೂನು ಕಾಲೇಜುಗಳ ಸುಮಾರು 250 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ವಿಜೇತರಿಗೆ ಈ ತಿಂಗಳ ಕೊನೆಯ ವಾರದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

You cannot copy content of this page

Exit mobile version