ಸಂಸತ್ತಿನ ಪೂರ್ವಸೂರಿಗಳು – 30 : ಹೆಚ್.‌ವಿ. ಕಾಮತ್‌; ಸಂಸತ್ತನ್ನು “ಪ್ರಕೃತಿಯ ಕೊಡುಗೆಯ” ಮಿಲನ ತಾಣವಾಗಿಸಿದ ಕಲಾವಿದ

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಮೂವತ್ತನೇ ಲೇಖನ

ಹರಿ ವಿಷ್ಣು ಕಾಮತ್‌ ತನ್ನ ಬದುಕಿನಲ್ಲಿ ಹಲವು ಪಾತ್ರಗಳನ್ನು ನಿಭಾಯಿಸಿದ್ದರು. ಅವುಗಳಲ್ಲಿ ಒಂದು ಮಾತ್ರ ಅವರಿಗೆ ವಿಶೇಷವಾಗಿ ಹೊಂದುತ್ತಿತ್ತು. ಅದು ಸಂಸತ್ತಿನ ಮಧ್ಯಪ್ರವೇಶಕನ ಪಾತ್ರ.

ಭಾರತೀಯ ನಾಗರಿಕ ಸೇವಾ ಪ್ರವೇಶ (1929), ಸಹಾಯಕ ಆಯುಕ್ತ (1931-1932), ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (1934-35), ಅಧೀನ ಕಾರ್ಯದರ್ಶಿ (1936), ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (1937-38)… ಸ್ವಾತಂತ್ರ್ಯ ಹೋರಾಟಗಾರ (1938-47), ರಾಜಕೀಯ ವಿಮರ್ಶಕ (1982 ರಲ್ಲಿ ಮರಣದವರೆಗೂ).

ಹೀಗೆ ಹರಿ ವಿಷ್ಣು ಕಾಮತ್‌ ಅವರು ಹಲವು ಟೋಪಿಗಳನ್ನು ಧರಿಸಿಕೊಂಡಿದ್ದರು. ಅವುಗಳಲ್ಲಿ ಒಂದು ಮಾತ್ರ ಅವರಿಗೆ ವಿಶೇಷವಾಗಿ ಹೊಂದುತ್ತಿತ್ತು. ಅದು ಸಂಸತ್ತಿನ ಮಧ್ಯಪ್ರವೇಶಕನ ಪಾತ್ರ. ಕಾಮತ್‌ ಅವರ ಪ್ರತಿಭೆ ಅದೆಷ್ಟರ ಮಟ್ಟಿಗೆ ಇತ್ತೆಂದರೆ, ಜವಹರಲಾಲ್‌ ನೆಹರೂ ಅವರು ತಮ್ಮ ಪ್ರಖ್ಯಾತ “ಟ್ರೈಸ್ಟ್ ವಿತ್ ಡೆಸ್ಟಿನಿ” ಭಾಷಣವನ್ನು ಮಾಡಿದ ಆ ಮಹತ್ವಪೂರ್ಣ ಸಂದರ್ಭದಲ್ಲೂ, ಅವರಿಗೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗಿರಲಿಲ್ಲ.

1947 ಆಗಸ್ಟ್‌ 14 ರಂದು ಪ್ರಧಾನ ಮಂತ್ರಿ ತಮ್ಮ ಭಾಷಣವನ್ನು ಮುಗಿಸಿ, ರಾಷ್ಟ್ರಪತಿಗಳಾಗಿದ್ದ ರಾಜೇಂದ್ರ ಪ್ರಸಾದ್‌ ಅವರು ಹೊಸ ರಾಷ್ಟ್ರಕ್ಕೆ ಪ್ರತಿಜ್ಞೆ ಕೈಗೊಳ್ಳುವಂತೆ ಸದಸ್ಯರಿಗೆ ಇನ್ನೇನು ಕರೆ ನೀಡಲಿದ್ದರು. ಆ ಗಳಿಗೆಯಲ್ಲಿ ಎದ್ದು ನಿಲ್ಲುವ ಕಾಮತ್‌ ಅವರು, ತಮ್ಮ ಹೆಸರಿನಲ್ಲಿ ಎರಡು ತಿದ್ದುಪಡಿ ಪ್ರಸ್ತಾವನೆಗಳನ್ನು ಪಟ್ಟಿ ಮಾಡಲಾಗಿದೆ ಎಂದು ಬೊಟ್ಟು ಮಾಡಿ ತೋರಿಸುತ್ತಾರೆ.

ಆಗ ಉದಾರ ಮನೋಭಾವವನ್ನು ತೋರ್ಪಡಿಸಿಕೊಳ್ಳುವ ಕಾಮತ್‌ ಅವರು ರಾಷ್ಟ್ರಪತಿಗಳಿಗೆ ಹೀಗೆ ಹೇಳುತ್ತಾರೆ. “ತಾವು ತಮ್ಮ ಭಾಷಣದಲ್ಲಿ ದೇವರ ಪವಿತ್ರ ಹೆಸರನ್ನು ಉಲ್ಲೇಖಿಸಿರುವುದರಿಂದ ಮತ್ತು ರಾತ್ರಿ ಬಹಳವೇ ಆಗಿರುವುದರಿಂದ ನಾನು ನನ್ನ ತಿದ್ದುಪಡಿಗಳನ್ನು ಮಂಡಿಸಲು ಬಯಸುವುದಿಲ್ಲ.” ಆ ಮಾತು ನಿಜಕ್ಕೂ ಅಲ್ಲಿ ಅನಗತ್ಯವಾಗಿತ್ತು. ಆದರೆ ಆ ಐತಿಹಾಸಿಕ ಸಂದರ್ಭದಲ್ಲಿ ತನ್ನ ಉಪಸ್ಥಿತಿಯನ್ನು ಸ್ಥಾಪಿಸಲೆಂದು ಮಾತ್ರ ಅವರು ಆ ಮಾತನ್ನು ಹೇಳಿದ್ದರು. ಆಗ ಸದಸ್ಯರ ಪ್ರತಿಕ್ರಿಯೆ ಏನಾಗಿತ್ತು ಎಂಬುದನ್ನು ಕಲಾಪಗಳ ದಾಖೆಲಗಳಲ್ಲಿ ದಾಖಲಿಸಲಾಗಿಲ್ಲ. ಆದರೆ, ಸಂವಿಧಾನ ರಚನೆಯನ್ನು ನಾಟಕೀಯವಾಗಿ ತೋರಿಸುವ ಸಂವಿಧಾನ್‌ ಎಂಬ 2014 ರ ಟಿವಿ ಧಾರಾವಾಹಿಯಲ್ಲಿ ಇತರ ಸದಸ್ಯರು ಕಾಮತ್‌ ಅವರ ಬಾಯಿ ಮುಚ್ಚಿಸಲು ಕೂಗುತ್ತಿರುವಂತೆ ತೋರಿಸಲಾಗಿದೆ.

ಕಾಮತ್‌ ಅವರ ಬಗ್ಗೆ ರಾಜೇಂದ್ ಪ್ರಸಾದ್‌ ಸಹಿತ ಹಲವು ಸಭಾಧ್ಯಕ್ಷರುಗಳು ಆಗಾಗ ಅನುಭವಿಸುತ್ತಿದ್ದ ಭಾವನೆ ಸುಮಾರಾಗಿ ಇದೇ ರೀತಿ ಇತ್ತು. ಕಾಮತ್ ಒಬ್ಬ ಶ್ರಮಶೀಲ, ಚಟುವಟಿಕೆಯ ವ್ಯಕ್ತಿ. ಅವರು ಮಂಡಿಸಿದ ಹಲವು ತಿದ್ದುಪಡಿ ಪ್ರಸ್ತಾವನೆಗಳನ್ನು ಗಮನಿಸಿದರೆ ಅವರ ದೂರದೃಷ್ಟಿಯನ್ನು ಗುರುತಿಸಬಹುದು. ಇವೆಲ್ಲವುಗಳ ಜೊತೆಗೆ ಅವರು ಸಮಯವನ್ನು ವ್ಯರ್ಥ ಮಾಡುವ ವಿಶೇಷ ಪ್ರತಿಭೆಯನ್ನೂ ಹೊಂದಿದ್ದರು. 1949 ಆಗಸ್ಟ್‌ 31 ರ ಒಂದು ಕಲಾಪದಲ್ಲಿ ಅವರು ಅಂತರ್ಗ್ರಹ ಪ್ರಯಾಣದ ಬಗ್ಗೆ ಭಾರತದ ನಿಲುವನ್ನು ಸದನವು ಪರಿಗಣಿಸಬೇಕೆಂದು ಸೂಚಿಸಿದರು. ಟಿ.ಟಿ. ಕೃಷ್ಣಮಾಚಾರಿಯವರನ್ನು ಕೆರಳಿಸಿದ್ದ ಈ ಸೂಚನೆ ಅವರಿಂದ ಈ ಹೇಳಿಕೆ ನೀಡುವಂತೆ ಮಾಡಿತು. “ಇದರ ಬಗ್ಗೆ ಚರ್ಚಿಸುವುದರಿಂದ ಸದನದ ಕಲಾಪಗಳು ಅಸಂಬದ್ಧವಾಗಿ ಬಿಡುತ್ತವೆ.”

ಕಾಮತ್‌ ತನ್ನ ಜೀವನದುದ್ದಕ್ಕೂ ಧೃತಿಗೆಡದ ಮನುಷ್ಯರಾಗಿದ್ದರು. ತನ್ನ ಸ್ವಂತ ದೃಷ್ಟಿಕೋನಗಳ ಮೇಲಿನ ನಂಬಿಕೆ, ಅವುಗಳನ್ನು ಇತರರಿಗೆ ಹಂಚುವ ಬಯಕೆ ಮತ್ತು ಅದನ್ನು ಸಾಧಿಸುವ ಪ್ರತಿಭೆ ಅವರಲ್ಲಿ ಚೂರೇ ಚೂರು ಕುಗ್ಗಿರದ ಕಾರಣದಿಂದ ಇದು ಸಾಧ್ಯವಾಯಿತು.

ಸುಭಾಷ್‌ ಚಂದ್ರ ಭೋಸ್‌ ಅವರ ಆಪ್ತ ಸಹಾಯಕರಾಗಿದ್ದ ಕಾಮತ್‌ ಐಸಿಎಸ್‌ (ಭಾರತೀಯ ನಾಗರಿಕ ಸೇವೆ)ಗೆ ರಾಜೀನಾಮೆ ನೀಡಿದ್ದರು. ಅವರೊಬ್ಬ ಮಹಾನ್‌ ಸ್ವಾತಂತ್ರ್ಯ ಹೋರಾಟಗಾರ, ತನ್ನ ಕಾಲದ ಅತ್ಯಂತ ಶ್ರೇಷ್ಟ ಸಂಸದೀಯ ಪಟುಗಳಲ್ಲಿ ಒಬ್ಬರು, ಸಮಾಜ ಸೇವಕ ಮತ್ತು ಸ್ವತಂತ್ರ ಪತ್ರಕರ್ತರೂ ಆಗಿದ್ದರು.

1907 ಜುಲೈ 13 ರಂದು ಕರ್ನಾಟಕದ ಮಂಗಳೂರಿನಲ್ಲಿ ಕಾಮತ್‌ ಅವರ ಜನನ. ಕೆನರಾ ಹೈಸ್ಕೂಲ್‌ ಮತ್ತು ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದುಕೊಂಡಿದ್ದರು. ನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಾರೆ. ಅವರ ಕೊನೆಯ ಪದವಿಗಳನ್ನು ಲಂಡನ್‌ ಸ್ಕೂಲ್‌ ಆಫ್‌ ಇಕನಾಮಿಕ್ಸ್‌, ಯೂನಿವರ್ಸಿಟಿ ಕಾಲೇಜ್‌ ಲಂಡಮ್ ಮತ್ತು ಆಗಿನ ಸ್ಕೂಲ್‌ ಆಫ್‌ ಓರಿಯೆಂಟಲ್‌ ಸ್ಟಡೀಸ್‌ ಮೊದಲಾದ ಕಡೆಗಳಿಂದ ಪಡೆದುಕೊಂಡಿದ್ದರು.

1929 ರಲ್ಲಿ ಮುಕ್ತ ಪರೀಕ್ಷೆಯಲ್ಲಿ ಐಸಿಎಸ್‌ಗೆ ಅರ್ಹತೆ ಪಡೆದ 48 ಜನರಲ್ಲಿ ಕಾಮತ್‌ ಒಬ್ಬರಾಗಿದ್ದರು. ಬ್ರಿಟಿಷ್‌ ಸರಕಾರದಲ್ಲಿ ಅವರು ಸಹಾಯಕ ಆಯುಕ್ತರು, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಅಧೀನ ಕಾರ್ಯದರ್ಶಿ ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹಿತ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.

1938 ರಲ್ಲಿ ಕಾಮತ್‌ ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಅದು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಲೆಂದು ತಮ್ಮ ಐಸಿಎಸ್‌ ವೃತ್ತಿ ಬದುಕಿಗೆ ರಾಜೀನಾಮೆ ನೀಡಿದ್ದು. 1938 ರಲ್ಲಿ ಆಗಿನ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ನೆಹರೂ ಅವರ ಅಡಿಯಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯ ಕಾರ್ಯದರ್ಶಿಯಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸೇರುತ್ತಾರೆ. 1940-41 ರಲ್ಲಿ ಮೊದಲ ಬಾರಿಗೆ ಜೈಲು ಪಾಲಾಗುವ ಕಾಮತ್‌, 1940 ರಿಂದ 1945 ರವರೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಾರಣಕ್ಕೆ ಹಲವು ಬಾರಿ ಸೆರೆಮನೆ ಸೇರಬೇಕಾಗಿ ಬರುತ್ತದೆ. ಕ್ವಿಟ್‌ ಇಂಡಿಯಾ ಚಳುವಳಿಯ ಸಮಯದಲ್ಲಿ ಅವರನ್ನು ಸಿಯೋನಿ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಡಲಾಗಿತ್ತು. ಅಲ್ಲಿಂದ ಬಿಡುಗೆಡಯಾದ ನಂತರ ಅವರು ಬ್ರಿಟಿಷರ ದೌರ್ಜನ್ಯಗಳ ವಿರುದ್ಧ ಮಾತನಾಡುತ್ತಾರೆ.

ನಂತರ 1940 ರಲ್ಲಿ ಸುಭಾಷ್‌ ಚಂದ್ರ ಬೋಸ್‌ ಅವರ ಫಾರ್ವರ್ಡ್‌ ಬ್ಲಾಕ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆ ಪಕ್ಷಕ್ಕೆ ಸೇರುತ್ತಾರೆ. ಬೋಸ್‌ ಅವರ ಕಣ್ಮರೆಯ ಕುರಿತು ತನಿಖೆ ನಡೆಸುವಂತೆ ನೆಹರೂ ಮೇಲೆ ನಂತರದಲ್ಲಿ ಒತ್ತಡ ಹಾಕಿದವರಲ್ಲಿ ಕಾಮತ್‌ ಪ್ರಮುಖರು.

ಕಾಮತ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೇಂದ್ರ ಪ್ರಾಂತ್ಯಗಳು ಮತ್ತು ಬೇರಾರ್‌ ಕ್ಷೇತ್ರದಿಂದ ಸಂವಿಧಾನ ಸಭೆಗೆ ಆಯ್ಕೆಯಾಗುತ್ತಾರೆ. 1946 ರಿಂದ 1949 ರವರೆಗೆ ಅವರು ಸಂವಿಧಾನ ಸಭೆ ಮತ್ತು 1950 ರಿಂದ 1952 ರವರೆಗೆ ತಾತ್ಕಾಲಿಕ ಸಂಸತ್ತಿನ ಸದಸ್ಯರಾಗಿದ್ದರು.

ಭಾರತದ ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಓದುವ ಯಾರಿಗೇ ಆದರೂ ಕಾಮತ್‌ ಅವರನ್ನು ಗುರುತಿಸದಿರಲು ಸಾಧ್ಯವಿಲ್ಲ. ಸದಸ್ಯರು ಕೈ ಎತ್ತುವ ಬದಲಿಗೆ ಔಪಚಾರಿಕ ಮತ ಚಲಾಯಿಸುವ ಮೂಲಕ ದಾಖಲಿಸಬೇಕಾದ ಸಂದರ್ಭಗಳಲ್ಲಿ ಮಧ್ಯಪ್ರವೇಶ ಮಾಡುವ, ಆಕ್ಷೇಪಣೆಗಳನ್ನು ಎತ್ತುವ ಮತ್ತು ವಿಭಜನೆಗಳ ಬೇಡಿಕೆ ಇಡುವವರಲ್ಲಿ ಕಾಮತ್‌ ಮೊದಲಿಗರಾಗಿದ್ದರು.

1950 ರ ನಂತರ ಕಾಮತ್‌ ಕಾಂಗ್ರೆಸ್‌ ಪಕ್ಷವನ್ನು ತೊರೆಯುತ್ತಾರೆ. ಪ್ರಜಾ ಸೋಷಿಯಲಿಸ್ಟ್‌ ಪಕ್ಷವನ್ನು ಸೇರುವ ಅವರು ಭಾರತದ ಮೊಟ್ಟ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಆದರೆ 174 ಮತಗಳ ಅಂತರದಿಂದ ಸೋಲುತ್ತಾರೆ. ಸುಪ್ರೀಂ ಕೋರ್ಟಿನಲ್ಲಿ ಆ ಚುನಾವಣೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಅವರು ಮತ್ತೆ ಚುನಾವಣೆಯನ್ನು ಎದುರಿಸಿ ಲೋಕಸಭೆಗೆ ಆಯ್ಕೆಯಾಗುತ್ತಾರೆ. 1955-57 ಮತ್ತು 1962-67 ಈ ಎರಡು ಅವಧಿಗಳಲ್ಲಿ ಕೂಡ ಅವರು ಲೋಕಸಭೆಗೆ ಚುನಾಯಿತರಾಗಿದ್ದರು.

ಕಾಮತ್‌ ಒಬ್ಬ ಪ್ರದರ್ಶನಶೀಲ ರಾಜಕಾರಣಿಯಾಗಿದ್ದರು. ಗಮನ ಸೆಳೆಯುವ ಸಂದರ್ಭಗಳಿಗಾಗಿ ಕಾಯುತ್ತಾ ಕೂರುತ್ತಿದ್ದರು. ಪ್ರಚಾರ ಸಿಗುವ ಕಾರ್ಯಗಳ ಬಗ್ಗೆ ಎಚ್ಚರದಿಂದಿರುತ್ತಿದ್ದರು ಮತ್ತು ತನ್ನ ಕೆಲಸಗಳಲ್ಲಿ ಆಕ್ರಮಣಕಾರಿ ಸ್ವಭಾವವನ್ನು ತೋರ್ಪಡಿಸುತ್ತಿದ್ದರು. ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಸಂಸತ್ತಿನಿಂದ ಅಮಾನತ್ತುಗೊಂಡ ಮೊದಲ ಸಂಸದರಲ್ಲಿ ಅವರು ಒಬ್ಬರಾಗಿದ್ದರು. 1955 ರ ದಿ ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಪ್ರಕಾರ ಕಾಮತ್‌ ಅವರು ಜೋರು ದನಿಯಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಉಪಸಭಾಪತಿಗಳು ಎಚ್ಚರಿಕೆ ನೀಡಿದಾಗ ಅವಿವೇಕಿಯಂತೆ “ಇದು ಪ್ರಕೃತಿಯ ಕೊಡುಗೆ” ಎಂದು ಉತ್ತರಿಸಿದ್ದರು.

ಮಧ್ಯಪ್ರದೇಶದ ಹೋಶಂಗಾಬಾದ್‌ನಿಂದ ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದರು. 1955 ಮತ್ತು 1962 ರಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಿಂದ ಮತ್ತು 1977 ರಲ್ಲಿ ಜನತಾ ಪಕ್ಷದಿಂದ. 1969 ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಕಾಮತ್‌ ಅವರು ಸಂಸತ್ತಿನ ತನ್ನ ಆಸನವನ್ನು ಪ್ರವಚನ ಪೀಠವಾಗಿ ಸಂತೋಷದಿಂದಲೇ ಬಳಸಿಕೊಳ್ಳುತ್ತಿದ್ದರು. ಆ ಮೂಲಕ ತನ್ನ ಮಾತುಗಳು ಸುದ್ದಿಯಾಗುವಂತೆ ನೋಡಿಕೊಳ್ಳುತ್ತಿದ್ದರು. 1948 ರಲ್ಲಿ ಅವರು ವನಸ್ಪತಿ ತುಪ್ಪದ ಆರೋಗ್ಯ ಗುಣಗಳ ಬಗ್ಗೆ ಪ್ರಶ್ನೆಯೆತ್ತಿದ್ದರು. 1950 ರಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆಯೂ ಅವರು ಚಕಾರವೆತ್ತಿದ್ದರು. 1963 ರಲ್ಲಿ ಅವರು ಸಂವಿಧಾನಕ್ಕೆ ತರುತ್ತಿರುವ ಅನಂತ ತಿದ್ದುಪಡಿಗಳ ಬಗ್ಗೆ ಆತಂಕ ವ್ಯಕ್ತ ಪಡಿಸಿಕೊಂಡು, ಮುಂದೆ ತಿದ್ದುಪಡಿಗಳನ್ನು ತರಲಾಗದ ಹಾಗೆ ಒಂದೇ ಒಂದು ಕೊನೆಯ ತಿದ್ದುಪಡಿಗಾಗಿ ಪ್ರತಿಭಟನೆಯನ್ನೂ ನಡೆಸಿದ್ದರು.

1965 ರಲ್ಲಿ ಅವರು ಮಂತ್ರಿಗಳಿಗೆ ನೀಡಲಾಗುವ ಉಚಿತ ವಿದ್ಯುತ್‌, ನೀರು ಮತ್ತು ಪೀಠೋಪಕರಣಗಳನ್ನು ನಿಲ್ಲಿಸಲೆಂದು ಮಸೂದೆಯೊದನ್ನು ಮಂಡಿಸಿದ್ದರು. 1966 ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸದಸ್ಯರಿಗೆ ಸಂಸತ್ತಿನಲ್ಲಿ ಸ್ಥಾನಗಳನ್ನು ಮೀಸಲಿಡಬೇಕೆಂದು ಸೂಚಿಸಿದ್ದರು. ನಿಷೇಧಗಳ ವಿರುದ್ಧ ಧ್ವನಿ ಎತ್ತಿದ ಅಪರೂಪದ ವ್ಯಕ್ತಿಗಳಲ್ಲಿ ಕಾಮತ್ ಒಬ್ಬರು. ಅವರು ನಿಷೇಧಗಳ ಬಗ್ಗೆ ಹೇಳಿದ ಮಾತು ಹೀಗಿದೆ. “ಇದರಿಂದ ಆಯಾ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ಕಳ್ಳಸಾಗಣೆದಾರರಿಗೆ ಮಾತ್ರವೇ ಲಾಭವುಂಟಾಗುತ್ತದೆ.”

ಇದರ ಜೊತೆಗೆ ಕಾಮತ್‌ ಅವರಿಗೆ ಲಂಡನ್ನಿನಲ್ಲಿ ನಡೆದ ವಿಶ್ವ ಸರಕಾರಿ ಸಮ್ಮೇಳನ, ಇಸ್ರೇಲಲ್ಲಿ ನಡೆದ ಅಂತರಾಷ್ಟ್ರೀಯ ಸಮಾಜವಾದಿ ಸಮ್ಮೇಳನ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನ ಸೇರಿದಂತೆ ಹಲವು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶಗಳು ಕೂಡ ದೊರೆತಿದ್ದವು. ಯಹೂದಿ ರಾಷ್ಟ್ರವಾದ ಇಸ್ರೇಲನ್ನು ಬೆಂಬಲಿಸಿದ್ದರು. ಭಾರತ ಸರಕಾರ ಇಸ್ರೇಲ್‌ಗೆ ಮಾನ್ಯತೆ ನೀಡಬೇಕು ಮತ್ತು ಆ ದೇಶದೊಂದಿಗೆ ಸೌಹಾರ್ದಯುತ ರಾಜತಾಂತ್ರಿಕೆ ಸಂಬಂಧಗಳನ್ನು ಇಟ್ಟುಕೊಳ್ಳಬೇಕೆಂದು ಒತ್ತಾಯಿಸಿದ್ದರು.

ಕಾಮತ್‌ ಅವರ ಹಲವಾರು ಪ್ರಚೋದನಕಾರಿ ಕೆಲಸಗಳನ್ನು ಈ ಕಾಲದಲ್ಲಿ ಬಹುತೇಕ ಮರೆತೇ ಬಿಡಲಾಗಿದೆ. ಒಂದು ಕಾಲದಲ್ಲಿ ಅವರು ಭಾರತದ ವಿಶಾಲ ಸಂಸ್ಕೃತಿಯ ಮೇಲೆ ಬಹಳವೇ ಪ್ರಭಾವ ಬೀರಿದ್ದರು ಎಂಬುದನ್ನು ಕೂಡ ನಾವು ಮರೆತಿದ್ದೇವೆ. 1977 ರಲ್ಲಿ ಜನತಾ ಪಕ್ಷ ಸರಕಾರವು ಕೋಕಾ ಕೋಲಾವನ್ನು ಭಾರತದಿಂದಲೇ ಹೊರಹಾಕಿ, ಅದರ ಬದಲಿಗೆ ದೇಸೀ ಉತ್ಪನ್ನವೊಂದನ್ನು ತಂದಿತ್ತು. ತಮ್ಮ ಪಕ್ಷದ ವಿಜಯ ವರ್ಷವನ್ನು ಸೂಚಿಸುವ 77 ಎಂದು ಅದಕ್ಕೆ ಹೆಸರಿಡುವಂತೆ ಕಾಮತ್‌ ಸೂಚಿಸಿದ್ದರು. ಆದರೆ, ಬಹಳ ಬೇಗನೇ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತದೆ. 77 ಮತ್ತೆ ಬದಿಗೆ ಸರಿಯುತ್ತದೆ. ಡಬಲ್‌ ಸೆವೆನ್‌ ಎಂಬ ಹೆಸರಿನ ಬದಲಿಗೆ ಡಬಲ್‌ ಕೋಲಾ ಎಂದು ಹೆಸರಿಡಲಾಗುತ್ತದೆ. ಆದರೆ ಕೊನೆಗದು ಸಂಪೂರ್ಣವಾಗಿ ನಿಂತೇ ಬಿಡುತ್ತದೆ.

ಕಾಮತ್‌ ಅವರು ಆ ಹೆಸರು ಸೂಚಿಸಿದ್ದಕ್ಕೆ ಪಾರಿತೋಷಿಕವಾಗಿ 10,000 ರೂಪಾಯಿಗಳ ನಗದು ಬಹುಮಾನವನ್ನು ಗೆದ್ದಿದ್ದರು. ಬಹುಷ ಅವರ ವೃತ್ತಿಜೀವನದಲ್ಲಿ ಆರ್ಥಿಕ ಲಾಭ ಪಡೆದ ಕೆಲವೇ ಕೆಲವು ಸಂದರ್ಭಗಳಲ್ಲಿ ಅದೊಂದಾಗಿತ್ತು. 1982 ರಲ್ಲಿ ತನ್ನ 75 ನೇ ವಯಸ್ಸಿನಲ್ಲಿ ಅವರು ನಿಧನರಾಗುವಾಗ ತನ್ನ ಸೆಂಟ್ರಲ್‌ ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನು ವಿದ್ಯಾರ್ಥಿ ವೇತನಕ್ಕೆ ಬಳಸಬೇಕೆಂದು ಹೇಳಿದ್ದರು. ಅವರು ಮದುವೆಯಾಗಿರಲಿಲ್ಲ.

ಕಾಮತ್‌ ಅವರನ್ನು ಈ ಕಾಲದಲ್ಲಿ ಅತಿ ಹೆಚ್ಚಾಗಿ ಓದುವವರು ಸಂವಿಧಾನ ಸಭೆಯ ಚರ್ಚೆಗಳ ಬಗ್ಗೆ ಓದುವವರು. ಕೆಲವರಿಗೆ ಅವರ ನಡತೆ ಕಿರಿಕಿರಿ ಅನಿಸಿದರೆ, ಕೆಲವರಿಗೆ ರಂಜನೆಯಾಗಿ ಅನಿಸುತ್ತದೆ. ಆದರೆ ಕೆಲವರು ಮಾತ್ರವೇ ಅವರ ವಿರೋಧಾಭಾಸದ ವೃತ್ತಿಜೀವನದಲ್ಲಿ ಸಾದ್ಯವಾಗಬಹುದಾದ ರಾಜಕೀಯ ಕ್ಷಣಗಳನ್ನು ಕಂಡುಕೊಳ್ಳುತ್ತಾರೆ.

ತುರ್ತು ಪರಿಸ್ಥಿತಿಯ ಕಾಲದಲ್ಲಿ 1975 ಅಕ್ಟೋಬರ್‌ 2 ರಂದು ಅವರನ್ನು ರಾಜ್‌ಘಾಟಿನ ಗಾಂಧಿ ಸಮಾಧಿಯಿಂದ ಬಂಧಿಸಲಾಗುತ್ತದೆ. ಹಾಗೆ ಬಂಧನಕ್ಕೊಳಗಾಗುವ ಅವರನ್ನು ಡಿಫೆನ್ಸ್‌ ಆಫ್‌ ಇಂಡಿಯಾ ರೂಲ್‌ ಅಡಿಯಲ್ಲಿ ವಿಚಾರಣೆಗೆ ಗುರಿ ಪಡಿಸಲಾಗುತ್ತದೆ. ಒಂದು ತಿಂಗಳ ವಿಚಾರಣೆಯ ನಂತರ 1976 ಮೇ ತಿಂಗಳಲ್ಲಿ ಖುಲಾಸೆಗೊಳ್ಳುತ್ತಾರೆ.

ಕಾಮತ್‌ ಒಬ್ಬ ಧಾರ್ಮಿಕ ನಂಬಿಕೆಯ ವ್ಯಕ್ತಿಯಾಗಿದ್ದರು. ಆದರೆ ಸಂವಿಧಾನ ಸಭೆಯಲ್ಲಿ, ಪ್ರತಿಯೊಬ್ಬರು ಅವರ ನಂಬಿಕೆಯನ್ನು ವ್ಯಕ್ತಪಡಿಸಲು ಸ್ವತಂತ್ರರಾಗಿರಬೇಕು ಮತ್ತು ಪ್ರಭುತ್ವವು ಯಾವುದೇ ನಿರ್ದಿಷ್ಟ ಧರ್ಮವನ್ನು ಬೆಂಬಲಿಸುವುದಾಗಲೀ ತಾರತಮ್ಯ ಮಾಡುವುದಾಗಲೀ ಮಾಡಬಾರದೆಂಬ ಜಾತ್ಯಾತೀತತೆಯ ಮೂಲ ಸಂದೇಶವನ್ನು ಗಟ್ಟಿಯಾಗಿ ಬೆಂಬಲಿಸಿದ್ದರು.

ಸಮರ್ಥ ಲೇಖಕರಾಗಿದ್ದ ಅವರು ಕಮ್ಯುನಿಸ್ಟ್‌ ಚೀನಾ ಕಾಲನೈಸಸ್‌ ಟಿಬೆಟ್‌, ಇನ್ವೇಡ್ಸ್‌ ಇಂಡಿಯಾ, ಪ್ರಿನ್ಸಿಪಲ್ಸ್‌ ಆಂಡ್‌ ಟೆಕ್ನಿಕ್‌ ಆಫ್‌ ಅಡ್ಮಿನಿಸ್ಟ್ರೇಷನ್‌ (1971), ದಿ ಲಾಸ್ಟ್‌ ಡೇಸ್‌ ಆಫ್‌ ಜವಹರ್‌ ಲಾಲ್‌ ನೆಹರೂ (1977) ಪುಸ್ತಕಗಳನ್ನು ಪ್ರಕಟಿಸಿದ್ದರು.

1982 ರಲ್ಲಿ ಅವರು ನಾಗಪುರದಲ್ಲಿ ನಿಧನರಾದರು. ಅವರಿಗೆ ಆಗ 75 ವರ್ಷ ಪ್ರಾಯವಾಗಿತ್ತು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು