100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಎದುರಿನಲ್ಲೇ ಇದ್ದರೂ ಮಹಿಳೆಯೊಬ್ಬರು ಬೀದಿ ಬದಿಯಲ್ಲಿ ಮಗುವಿಗೆ ಜನ್ಮ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುರಂತ ಎಂದರೆ ಪ್ರತಿದಿನ ಸಾವಿರಾರು ಜನ ಪವಿತ್ರ ಕ್ಷೇತ್ರವೆಂದು ಬಂದು ಹೋಗುವ ತಿರುಪತಿ ಕ್ಷೇತ್ರದಲ್ಲೇ ಇಂತದ್ದೊಂದು ಅಮಾನವೀಯ ದುರಂತ ನಡೆದಿದೆ.
ಆಂಧ್ರಪ್ರದೇಶದ ತಿರುಪತಿಯ ಆಸ್ಪತ್ರೆ ಸಮೀಪ ರಸ್ತೆಯ ಮಧ್ಯದಲ್ಲಿ ಕೆಲವು ಮಹಿಳೆಯರು ಗರ್ಭಿಣಿ ಮಹಿಳೆಯನ್ನು ಬೆಡ್ ಶೀಟ್ ಮೂಲಕ ಮರೆ ಮಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಜೊತೆಗೆ ಒಬ್ಬ ಪುರುಷನು ಮಗುವಿಗೆ ಜನ್ಮ ನೀಡಲು ಸಹಾಯ ಮಾಡುತ್ತಾನೆ. ಮಹಿಳೆ ನೋವಿನಿಂದ ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ತುಂಬು ಗರ್ಭಿಣಿಯಾಗಿದ್ದ ಮಹಿಳೆ ಹೆರಿಗೆಗೆಂದು ಆಸ್ಪತ್ರೆಗೆ ಬಂದರೆ ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿದ್ದಾರೆ. ಇತ್ತ ಆಸ್ಪತ್ರೆ ಮುಂಭಾಗದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಲೂ ಸಹ ಸಿಬ್ಬಂದಿ ನಿರಾಕರಿಸಿದ ಕಾರಣ ಈ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಕೆಯ ಬಳಿ ಯಾವುದೇ ದಾಖಲೆಗಳು ಇಲ್ಲದ ಮತ್ತು ಆಕೆಯ ಜೊತೆಯಲ್ಲಿ ಯಾರೂ ಇಲ್ಲದ ಕಾರಣ ಆಕೆಯನ್ನು ಸೇರಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಮಹಿಳೆಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕವಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ತನಿಖೆಗೆ ಒಪ್ಪಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಹೆರಿಗೆಯ ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ತಿರುಪತಿಯ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಗೆ ಆರೋಗ್ಯ ಕಿಟ್ ಮತ್ತು ಹಣ್ಣುಗಳನ್ನು ಕೊಟ್ಟಿದ್ದಾರೆ.