Friday, March 6, 2026

ಸತ್ಯ | ನ್ಯಾಯ |ಧರ್ಮ

ಸಿದ್ದರಾಮಯ್ಯ 17 ನೇ ಐತಿಹಾಸಿಕ ಬಜೆಟ್ ಮಂಡನೆ : ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರಪ್ರಸಾರಕ್ಕೆ ಸಿದ್ಧತೆ

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಆಯವ್ಯಯವನ್ನು ಮಾರ್ಚ್ 6ರಂದು ಶುಕ್ರವಾರ ಮಂಡಿಸಲಾಗುತ್ತಿದೆ. ಹಣಕಾಸು ಸಚಿವರ ಹುದ್ದೆಯನ್ನೂ ವಹಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದು 17ನೇ ಬಾರಿ ಬಜೆಟ್ ಮಂಡಿಸುತ್ತಿದ್ದು, ಇದರೊಂದಿಗೆ ಹೊಸ ದಾಖಲೆ ನಿರ್ಮಿಸುತ್ತಿದ್ದಾರೆ.

ರಾಜ್ಯದ ಆಡಳಿತದ ಪ್ರಮುಖ ಕೇಂದ್ರವಾದ ವಿಧಾನಸೌಧ ನಲ್ಲಿ ನಡೆಯುವ ಬಜೆಟ್ ಮಂಡನೆ ಕಾರ್ಯಕ್ರಮದ ನೇರಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆ ರಾಜ್ಯದಾದ್ಯಂತ ಇರುವ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಜಿಟಲ್ ಡಿಸ್ಪ್ಲೇ (ಎಲ್‌ಇಡಿ) ಪರದೆಗಳ ಮೂಲಕ ಬಜೆಟ್ ಮಂಡನೆಯ ನೇರಪ್ರಸಾರವನ್ನು ಹಮ್ಮಿಕೊಳ್ಳಲಿದೆ.

ಬಜೆಟ್ ಭಾಷಣದ ಜೊತೆಗೆ ನಂತರ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯ ನೇರಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿರುವ ಜನರು, ಪ್ರಯಾಣಿಕರು ಹಾಗೂ ಸಾಮಾನ್ಯ ನಾಗರಿಕರು ಸರ್ಕಾರದ ಆಯವ್ಯಯದ ವಿವರಗಳನ್ನು ನೇರವಾಗಿ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.

ಸರ್ಕಾರದ ಮಹತ್ವದ ಆರ್ಥಿಕ ನಿರ್ಣಯಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page