Home ದೆಹಲಿ 24 ಗಂಟೆಗಳಲ್ಲಿ 300ಕ್ಕೂ ಹೆಚ್ಚು ಶರಣಾಗತಿ: ‘ಭಯೋತ್ಪಾದನೆ ನಡೆಯುತ್ತಿದ್ದ ಜಾಗದಲ್ಲಿ ಈಗ ಒಲಿಂಪಿಕ್ಸ್ ತಯಾರಿ ನಡೆಯುತ್ತಿದೆʼ...

24 ಗಂಟೆಗಳಲ್ಲಿ 300ಕ್ಕೂ ಹೆಚ್ಚು ಶರಣಾಗತಿ: ‘ಭಯೋತ್ಪಾದನೆ ನಡೆಯುತ್ತಿದ್ದ ಜಾಗದಲ್ಲಿ ಈಗ ಒಲಿಂಪಿಕ್ಸ್ ತಯಾರಿ ನಡೆಯುತ್ತಿದೆʼ – ಪ್ರಧಾನಿ ಮೋದಿ ಸಂತಸ

0

ದೆಹಲಿ: ಕಳೆದ 24 ಗಂಟೆಗಳಲ್ಲಿ 300ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಹಿತಿ ನೀಡಿದ್ದಾರೆ. ಒಂದು ಕಾಲದಲ್ಲಿ ಬಾಂಬ್ ಸ್ಫೋಟಗಳು ಮತ್ತು ಹತ್ಯೆಗಳಿಗೆ ಸಾಕ್ಷಿಯಾಗಿದ್ದ ಸ್ಥಳದಲ್ಲಿ ಈಗ ಒಲಿಂಪಿಕ್ಸ್ ಕ್ರೀಡಾಕೂಟದ ತಯಾರಿಯು ನಡೆಯುತ್ತಿರುವುದು ದೊಡ್ಡ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎನ್‌ಡಿಟಿವಿ ವಿಶ್ವ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾವೋವಾದಿಗಳು ಕಳೆದ 50-55 ವರ್ಷಗಳಲ್ಲಿ ಸಾವಿರಾರು ಜನರ ಜೀವಗಳನ್ನು ಬಲಿತೆಗೆದುಕೊಂಡಿದ್ದಾರೆ. ಅಲ್ಲದೆ, ಶಾಲೆಗಳನ್ನು, ಆಸ್ಪತ್ರೆಗಳನ್ನು ನಿರ್ಮಿಸಲು ಬಿಡಲಿಲ್ಲ. ವೈದ್ಯರು ಚಿಕಿತ್ಸಾಲಯಗಳಿಗೆ ಹೋಗದಂತೆ ತಡೆದರು. ಈ ಸಂಘಟನೆಗಳ ದಾಳಿಯಿಂದಾಗಿ ಯುವಕರಿಗೆ ಅನ್ಯಾಯವಾಗಿತ್ತು. ಇದೇ ಮೊದಲ ಬಾರಿಗೆ ಜಗತ್ತಿನ ಮುಂದೆ ನನ್ನ ನೋವನ್ನು ಹೇಳಿಕೊಳ್ಳುತ್ತಿದ್ದೇನೆ ಎಂದು ಈ ಸಂದರ್ಭದಲ್ಲಿ ಅವರು ಭಾವುಕರಾದರು.

ಶರಣಾದ 303 ನಕ್ಸಲರು; ಶಸ್ತ್ರಾಸ್ತ್ರ ವಶ:

ದಾರಿ ತಪ್ಪಿದ ಹಾಗೂ ಅನ್ಯಾಯಕ್ಕೆ ಒಳಗಾದ ಯುವಕರನ್ನು ತಲುಪಿ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರಲು ನಮ್ಮ ಸರ್ಕಾರ ವಿಶೇಷ ಪ್ರಯತ್ನಗಳನ್ನು ನಡೆಸಿದೆ. ಈ ಪ್ರಯತ್ನಗಳ ಫಲಿತಾಂಶವನ್ನು ಇಡೀ ದೇಶ ಇಂದು ನೋಡುತ್ತಿದೆ. ಈಗ ಒಟ್ಟು 303 ನಕ್ಸಲರು ಶರಣಾಗಿದ್ದಾರೆ.

“ಛತ್ತೀಸ್‌ಗಢದಲ್ಲಿ ಗುರುವಾರ ಒಂದೇ ದಿನ 170 ನಕ್ಸಲರು ಶರಣಾಗಿದ್ದಾರೆ. ಇವರು ಸಾಮಾನ್ಯ ಜನರಾಗಿರಲಿಲ್ಲ. ಇವರ ತಲೆಗೆ ಬಹುಮಾನ ನಿಗದಿ ಮಾಡಲಾಗಿತ್ತು. ಈಗ ಅವರೇ ಸ್ವತಃ ಮುಕ್ತವಾಗಿ ಶರಣಾಗಿದ್ದು, ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ,” ಎಂದು ಪ್ರಧಾನಿ ವಿವರಿಸಿದರು.

ಬಸ್ತಾರ್‌ನಲ್ಲಿ ‘ಒಲಿಂಪಿಕ್ಸ್’ ಸಂಭ್ರಮ:

ಸಾಮೂಹಿಕ ಶರಣಾಗತಿಯ ಪರಿಣಾಮವಾಗಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ತೀವ್ರವಾಗಿ ಇಳಿಕೆಯಾಗಿದೆ. ಹಿಂದೆ 125 ಇದ್ದ ನಕ್ಸಲ್ ಪೀಡಿತ ಜಿಲ್ಲೆಗಳು ಈಗ ಕೇವಲ 11ಕ್ಕೆ ಇಳಿದಿವೆ. ನಕ್ಸಲ್ ಚಟುವಟಿಕೆಗಳನ್ನು ತಡೆಯುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ.

“ಈ ಹಿಂದೆ ಬಸ್ತಾರ್‌ನಲ್ಲಿ (ತೀವ್ರವಾಗಿ ಬಾಧಿತವಾದ ಜಿಲ್ಲೆ) ಮಾವೋವಾದಿಗಳು ವಾಹನಗಳನ್ನು ಸ್ಫೋಟಿಸಿ ಭದ್ರತಾ ಸಿಬ್ಬಂದಿಗಳನ್ನು ಹತ್ಯೆ ಮಾಡಿದ್ದರು. ಇಂದು ಅಲ್ಲಿನ ಯುವಕರು ‘ಬಸ್ತಾರ್ ಒಲಿಂಪಿಕ್ಸ್’ ಆಯೋಜಿಸುತ್ತಿದ್ದಾರೆ. ಇದು ಅತಿದೊಡ್ಡ ಬದಲಾವಣೆ. ಈಗ ಶಾಂತಿಯ ದೀಪಾವಳಿ ಆಚರಿಸಲು ಸಾಧ್ಯವಾಗುತ್ತದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು.

ನಗರ ನಕ್ಸಲರ ಕುರಿತು ವಾಗ್ದಾಳಿ:

ಕಾಂಗ್ರೆಸ್ ಈ ಸಮಸ್ಯೆಗೆ ಗಮನ ನೀಡಲಿಲ್ಲ ಎಂದು ಆರೋಪಿಸಿದ ಪ್ರಧಾನಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈ ಪರಿಸರ ವ್ಯವಸ್ಥೆಯ ಕುರಿತು ಚರ್ಚಿಸುವುದನ್ನೇ ಸಂಪೂರ್ಣವಾಗಿ ಹತ್ತಿಕ್ಕಲಾಗಿತ್ತು ಎಂದು ವಾಗ್ದಾಳಿ ನಡೆಸಿದರು. “ಬಹಳ ದೊಡ್ಡ ಸೆನ್ಸಾರ್‌ಶಿಪ್ ಕಾರ್ಯವಿಧಾನವು ಆಗ ಕಾರ್ಯನಿರ್ವಹಿಸುತ್ತಿತ್ತು. ಕಾಂಗ್ರೆಸ್ ಆಳ್ವಿಕೆಯಲ್ಲಿ ಪ್ರವರ್ಧಮಾನಕ್ಕೆ ಬಂದವರೇ, ಸಂಸ್ಥೆಗಳನ್ನು ವಶಪಡಿಸಿಕೊಂಡು ತಮ್ಮನ್ನು ‘ನಗರ ನಕ್ಸಲರು’ ಎಂದು ಕರೆದುಕೊಂಡಿದ್ದರು,” ಎಂದು ಪ್ರಧಾನಿ ಮೋದಿ ಕಿಡಿಕಾರಿದರು.

You cannot copy content of this page

Exit mobile version