Monday, June 17, 2024

ಸತ್ಯ | ನ್ಯಾಯ |ಧರ್ಮ

ಭಾರತದಲ್ಲಿ ಪತ್ರಕರ್ತರು ಎಷ್ಟು ಸೇಫ್?

ಬೆಂಗಳೂರು: ಎನ್‌ಡಿ ಟಿವಿ ಎಂದೇ ಖ್ಯಾತವಾಗಿರುವ ನ್ಯೂ ಡೆಲ್ಲಿ ಟೆಲಿವಿಷನ್‌ 1989 ರಲ್ಲಿ ತನ್ನ ಮೊದಲ ವಾರದ ಬುಲ್ಲಟಿನ್‌ ಆರಂಭಿಸಿ, ದೇಶ ವಿದೇಶಗಳ ಸುದ್ದಿಗಳನ್ನು ಮನೆಮನಗಳಿಗೆ ತಲುಪಿಸಲು ಶುರುಮಾಡಿತು. ಸುಧೀರ್ಘ ಸುದ್ದಿ ಪಯಣದ ನಂತರ ಎನ್‌ಡಿ ಟಿವಿ 2022ರಲ್ಲಿ ತನ್ನ ಎಲ್ಲಾ ಸ್ವಂತಿಕೆಯನ್ನು ಕಳೆದುಕೊಂಡು ದೇಶದ ಅತ್ಯಂತ ಶ್ರೀಮಂತನೋರ್ವನ ಸೊತ್ತಾಗಿ ಬದಲಾಯಿತು.

ಪ್ರಣೋಯ್ ಮತ್ತು ರಾಧಿಕಾ ರಾಯ್ ಆರಂಭಿಸಿದ NDTV ಹಲವು ಬಾರಿ ಬೇರೆ ಬೇರೆ ಮಾಲೀಕರನ್ನು ಕಂಡಿದೆ. ಕೊನೆಗೆ  130 ಶತಕೋಟಿ ಡಾಲರ್ ಆಸ್ತಿಯ ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಯ ಪಾಲಾಯಿತು. 2022ರ ಆಗಸ್ಟ್‌ನಲ್ಲಿ ಅದಾನಿಯವರ ಹೊಸ ಮಾಧ್ಯಮ ಉದ್ಯಮ AMG ಮೀಡಿಯಾ ನೆಟ್‌ವರ್ಕ್ಸ್ ಎನ್‌ಡಿ ಟಿವಿಯ ಕಂಪನಿಯಲ್ಲಿದ್ದ ತನ್ನ 29% ಶೇರನ್ನು ಪರೋಕ್ಷವಾಗಿ ಸ್ವಾಧೀನಪಡಿಸಿಕೊಂಡಿತು ಮತ್ತು 26% ಗೆ ಆಫರ್‌ ನೀಡಿತು. ಇದರಿಂದ ಬೇಸರಗೊಂಡ ಪ್ರಣೋಯ್‌ ರಾಯ್‌ ರಾಜೀನಾಮೆ ನೀಡಿದರು. 

2014ರಲ್ಲಿ ಗೌತಮ್‌ ಅದಾನಿಯವರ ಸಹೋದರ ಮುಕೇಶ್‌ ಅಂಬಾನಿ ಭಾರತದ ದೊಡ್ಡ ಮೀಡಿಯಾ ಕಂಪನಿಯಾದ ನೆಟ್‌ವರ್ಕ್‌18 ಅನ್ನು ಖರೀದಿ ಮಾಡಿದ್ದರು.

Reuters Institute for the Study of Journalismನ ಅಧ್ಯಯನದ ಪ್ರಕಾರ ಟಿವಿ ಹಾಗೂ ಆನ್‌ಲೈನ್‌ಗಳಲ್ಲಿ ಸುಮಾರು 35 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಎನ್‌ಡಿ ಟಿವಿಯನ್ನು 75% ಬಿಜೆಪಿ ಹಿಂಬಾಲಕರು ಮತ್ತು 81%  ಇತರ ಪಕ್ಷಗಳ ಹಿಂಬಾಲಕರು ಸುದ್ದಿ ಹಾಗೂ ಮಾಹಿತಿಗಳಿಗಾಗಿ ಅವಲಂಬಿಸಿದ್ದರು.

ದಶಕದಿಂದ ಹೆಚ್ಚಿನ ಲಾಭವನ್ನು ಕಂಡಿದ್ದ ಹಾಗೂ ಸ್ವತಂತ್ರ ಮಾಧ್ಯಮವಾಗಿ ಗುರುತಿಸಿಕೊಂಡಿದ್ದ ಎನ್‌ಡಿ ಟಿವಿ ಗೌತಮ್‌ ಅದಾನಿ ವಶವಾಯಿತು. ಪ್ರಣೋಯ್ ರಾಯ್, ರಾಧಿಕಾ ರಾಯ್, ಸುಪರ್ಣಾ ಸಿಂಗ್, ಕನ್ವಾಲ್ಜಿತ್ ಸಿಂಗ್ ಬೇಡಿ, ರವೀಶ್ ಕುಮಾರ್, ಸಾರಾ ಜಾಕೋಬ್, ನಿಧಿ ರಜ್ದಾನ್, ಶ್ರೀನಿವಾಸನ್ ಜೈನ್ ಸೇರಿದಂತೆ ಹದಿನಾರು ಮಂದಿ ಎನ್‌ಡಿ ಟಿವಿಯ ಬೆನ್ನೆಲುಬಿನಂತಿದ್ದ ಪತ್ರಕರ್ತರು ಸಾಲು ಸಾಲಾಗಿ ಸಂಸ್ಥೆಯನ್ನು ತೊರೆದರು.

ಹೀಗೆ, ಸುಮಾರು ಮೂರು ದಶಕಗಳಿಂದ ಮಾಧ್ಯಮ ಜಗತ್ತಿನಲ್ಲಿ ಸ್ವತಂತ್ರ ವರದಿಗಾರಿಕೆಯ ಛಾಪನ್ನು ಮೂಡಿಸಿದ ಎನ್‌ಡಿ ಟಿವಿಯ ವೈಭವ ಅಂತ್ಯವಾಯಿತು.

**********************

2020ರ ಅಕ್ಟೋಬರ್‌ 7ರಂದು 19 ವರ್ಷ ಪ್ರಾಯದ ದಲಿತ ಹೆಣ್ಣುಮಗಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವರದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದ ಕೇರಳ ಮೂಲದ ಸುದ್ದಿ ಪೋರ್ಟಲ್‌ ಅಳಿಮುಖಂನ ಪತ್ರಕರ್ತ ಸಿದ್ಧಿಕ್‌ ಕಪ್ಪನ್‌ರನ್ನು ಬಂಧಿಸಲಾಗಿತ್ತು.

ಕಾನೂನು ಸುವ್ಯವಸ್ಥೆ ಕದಡಲು ಹಾಗೂ ಎಸ್‌ಎಫ್‌ಐ ಜೊತಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಪೊಲೀಸರು ಸಿದ್ಧಿಕ್‌ ಅವರನ್ನು ಬಂಧಿಸಿದ್ದರು.

ಸಿದ್ಧಿಕ್‌ ಕಪ್ಪನ್‌

ಕಪ್ಪನ್ ವಿರುದ್ಧ ಅಕ್ಟೋಬರ್ 7, 2020 ರಂದು ಮಥುರಾದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A (ದೇಶದ್ರೋಹ), 153A (ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295A (ಉದ್ದೇಶಪೂರ್ವಕ ಕೃತ್ಯಗಳು, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA), ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ (Infirmation Technilogy Act) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಯಿತು. ಇಡಿ (ಜಾರಿ ನಿರ್ದೇಶನಾಲಯ – ED) ಕೂಡಾ ಮನಿ ಲಾಂಡರಿಂಗ್‌ ಕೇಸು ದಾಖಲಿಸಿತು.  ಸದ್ಯ ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಪಡೆದು ಎರಡು ವರ್ಷಗಳ ಕಾರಾಗೃಹ ವಾಸದ ನಂತರ ಹೊರಬಂದಿದ್ದಾರೆ.

**********************

2021ರ Committee to Protect Journalists (CPJ) ವರದಿಯ ಪ್ರಕಾರ 2021 ನವೆಂಬರ್‌ನಲ್ಲಿ ಅವಿನಾಶ್ ಝಾ (BNN News), ಆಗಸ್ಟ್‌ನಲ್ಲಿ ಚೆನ್ನಕೇಶವಲು ( EV 5) ಮತ್ತು ಮನೀಷ್ ಸಿಂಗ್ (ಸುದರ್ಶನ್ ಟಿವಿ) ಮತ್ತು ಜೂನ್‌ನಲ್ಲಿ ಸುಲಭ್ ಶ್ರೀವಾಸ್ತವ (ABP News) ತಮ್ಮ  ವೃತ್ತಿಯ ಕಾರಣಕ್ಕಾಗಿ ಕೊಲ್ಲಲ್ಪಟ್ಟಿದ್ದಾರೆ.  ಸಾಧನ ಟಿವಿ ಪ್ಲಸ್‌ನ ರಮಣ್ ಕಶ್ಯಪ್ ಎಂಬ ಪತ್ರಕರ್ತ ಅಕ್ಟೋಬರ್‌ನಲ್ಲಿ ನಡೆದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಹತರಾಗಿದ್ದರು.

ಕಾಶ್ಮೀರದ ಪತ್ರಕರ್ತ ಆಸಿಫ್ ಸುಲ್ತಾನ್ ಎಂಬವರನ್ನು ಬೇಲ್‌ ಸಿಕ್ಕಿದರೂ ಪಬ್ಲಿಕ್‌ ಸೇಫ್ಟಿ ಕಾಯ್ದೆಯ ಅಡಿಯಲ್ಲಿ ಬಂಧಿಸಿ 2018ರಿಂದ ಜೈಲಿನಲ್ಲಿಯೇ ಇದ್ದಾರೆ.

ಕಾಶ್ಮೀರದ ಪತ್ರಕರ್ತ ಆಸಿಫ್ ಸುಲ್ತಾನ್

ಅಕ್ಟೋಬರ್‌  22, 2021ರಿಂದ ಯುಎಪಿಎ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಫೋಟೋ ಜರ್ನಲಿಸ್ಟ್ ಮನನ್ ದಾರ್‌ಗೆ  438 ದಿನಗಳ ನಂತರ ಸಾಕ್ಷ್ಯಗಳಿಲ್ಲದೇ ಇದ್ದರಿಂದ ಬೇಲ್‌ ಸಿಕ್ಕಿತು! 

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ್ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಾಖಾ ಏಪ್ರಿಲ್ 2020 ರಿಂದ ಜೈಲಿನಲ್ಲಿದ್ದಾರೆ. ಶಂಕಿತ ಬೇಹುಗಾರಿಕೆಯ ಆರೋಪದಡಿ ಸಪ್ಟೆಂಬರ್‌ 2020ರಂದು ದೆಹಲಿ ಪೊಲೀಸರಿಂದ ಬಂಧಿತರಾಗಿದ್ದ ಸ್ವತಂತ್ರ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಜುಲೈ 1, 2021 ರಂದು ಇಡಿ (ಜಾರಿ ನಿರ್ದೇಶನಾಲಯ) ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮತ್ತೆ ಬಂಧಿಸಿತು.

ಮಧ್ಯಪ್ರದೇಶದ ಪತ್ರಕರ್ತ, ಸಹರಾ ಸಮಯ್‌, ಎಎನ್‌ಐ, ಎನ್‌ಡಿ ಟಿವಿಗೆ ವರದಿ ಮಾಡುತ್ತಿದ್ದ ತನ್ವೀರ್ ವಾರ್ಸಿಯವರನ್ನು ಭೋಪಾಲ್‌ನಲ್ಲಿ ಅಕ್ರಮವಾಗಿ ಪೇಪರ್ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಿ ನಾಲ್ಕು ತಿಂಗಳು ಜೈಲಿನಲ್ಲಿ ಇಡಲಾಯಿತು. ಮಧ್ಯಪ್ರದೇಶ ಸರ್ಕಾರ ಕೋವಿಡ್‌-19 ನಿರ್ವಹಣೆಯಲ್ಲಿ ವಿಫಲವಾಗಿರುವ ಬಗ್ಗೆ ವರದಿ ಮಾಡಿದ್ದರು. ಇದೇ ಮಧ್ಯಪ್ರದೇಶ ಸರ್ಕಾರ ಎರಡೇ ಎರಡು ತಿಂಗಳಲ್ಲಿ ಕೋವಿಡ್‌ ಹಾಗೂ ದಲಿತರ ಮೇಲಿನ ದೌರ್ಜನ್ಯದ ವರದಿ ಮಾಡಿದ್ದಕ್ಕಾಗಿ ಆರು ಮಂದಿ ಪತ್ರಕರ್ತರನ್ನು ಬಂಧಿಸಿತ್ತು.

**********************

3 ಅಕ್ಟೋಬರ್ 2023,

ನ್ಯೂಸ್‌ಕ್ಲಿಕ್‌ ನ್ಯೂಸ್‌ಪೋರ್ಟಲ್‌ಗೆ ಸಂಬಂಧಿಸಿದ ಹಲವಾರು ಪತ್ರಕರ್ತರ ಮನೆಗಳು ಸೇರಿದಂತೆ, ಮೂವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದೆಹಲಿ ಪೊಲೀಸರು ದಾಳಿ ನಡೆಸಿದ್ದರು. ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ, ವೀಡಿಯೋ ಪತ್ರಕರ್ತ ಅಭಿಸಾರ್ ಶರ್ಮಾ, ರಾಜಕೀಯ ನಿರೂಪಕ – ಹಿರಿಯ ಪತ್ರಕರ್ತ ಔನಿಂದ್ಯೋ ಚಕ್ರವರ್ತಿ, ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ, ಭಾಷಾ ಸಿಂಗ್, ಬಪ್ಪಾ ಸಿನ್ಹಾ ಮತ್ತು ಊರ್ಮಿಳೇಶ್ ಮೊಲದಲಾದವರ ಮನೆಗಳ ಮೇಲೆ ಪೊಲೀಸ್‌ ರೈಡ್ ನಡೆಸಿ ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌, ಹಾರ್ಡ್‌ಡಿಸ್ಕ್‌ ಮತ್ತಿತರ ಇಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಂಡರು. ಪ್ರಬೀರ್ ಪುರ್ಕಾಯಸ್ಥ ಸೇರಿದಂತೆ ಕೆಲವರ ಬಂಧನವಾಯ್ತು.

ಪ್ರಬೀರ್ ಪುರ್ಕಾಯಸ್ಥ

ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದರು. ಆಗಸ್ಟ್ 2023 ರಲ್ಲಿ, ಜಾರಿ ನಿರ್ದೇಶನಾಲಯ ನ್ಯೂಸ್‌ಕ್ಲಿಕ್ ವಿರುದ್ಧ ಚೀನಾ ಪರ ಪ್ರಚಾರ, ಹಾಗೂ ಮನಿ ಲಾಂಡರಿಂಗ್‌ನಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿತ್ತು.

**********************

ಜಗತ್ತಿನಲ್ಲಿ ನಾವು ಎಲ್ಲಿದ್ದೇವೆ?

2023 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ (World Press Freedom Index) ಭಾರತದ 180 ದೇಶಗಳಲ್ಲಿ 161ರ ಸ್ಥಾನಕ್ಕೆ ಕುಸಿದಿದೆ ಎಂದು ಜಾಗತಿಕ ಮಾಧ್ಯಮ ವಾಚ್‌ಡಾಗ್, ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (RSF) ವರದಿಯೊಂದನ್ನು ಬಿಡುಗಡೆ ಮಾಡಿದೆ. 2022ರಲ್ಲಿ ಭಾರತ 150ನೇ ಸ್ಥಾನದಲ್ಲಿತ್ತು. ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಕಳೆದ ವರ್ಷ (2022)ರಲ್ಲಿ 157ನೇ ಸ್ಥಾನದಲ್ಲಿದ್ದ ಪಾಕಿಸ್ತಾನ 2023ರಲ್ಲಿ 150 ನೇ ಸ್ಥಾನಕ್ಕೆ ಸುಧಾರಣೆಯನ್ನು ಕಂಡಿದೆ.  

ಪತ್ರಕರ್ತರ ಮೇಲೆ ಹಿಂಸಾಚಾರ, ರಾಜಕೀಯ ಪಕ್ಷಪಾತದ ಮಾಧ್ಯಮಗಳು ಮತ್ತು ಮಾಧ್ಯಮಗಳಲ್ಲಿ ಮಾಲೀಕತ್ವದ ಕೇಂದ್ರೀಕರಣದಿಂದಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರಾದ, ಹಿಂದುತ್ವವಾದಿ ಪ್ರಧಾನಿ ನರೇಂದ್ರ ಮೋದಿಯವರು 2014 ರ ಆಢಳಿತವಿರುವ “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ” ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಬಿಕ್ಕಟ್ಟಿನಲ್ಲಿದೆ ಎಂಬುದನ್ನು ತೋರಿಸುತ್ತದೆ. ಹೀಗಂತ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಹೇಳದೆ.

**********************

ಬ್ರಟೀಷರ ಕಾಲದಲ್ಲಿ ಏನಾಯ್ತು?

1782ರ ಮಾರ್ಚ್ 23, ಭಾರತದ ಮೊದಲ ಪತ್ರಿಕೆಯ ‘ದಿ ಬೆಂಗಾಳ್‌ ಗಝೆಟ್‌’ನ ಮಾಲಕನನ್ನು ಬಂಧಿಸಲಾಯಿತು. ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್‌ ಬಗ್ಗೆ ಜೇಮ್ಸ್‌ ಅಗಸ್ಟಸ್‌ ಹಿಕ್ಕಿ ತನ್ನ ಪತ್ರಿಕೆಯಲ್ಲಿ  ‘ಲಾರ್ಡ್ ಕೈವ್‌ನ ಚಿಂತಾಜನಕ ಉತ್ತರಾಧಿಕಾರಿ” ಎಂದು ಬರೆದಿದ್ದ. ಇದರ ಪರಿಣಾಮವಾಗಿ ಪತ್ರಿಕೆಯ ಮುದ್ರಣಾಲಯವನ್ನು ಕೆಡವಲಾಯಿತು. ಈತ ತನ್ನ ಪತ್ರಿಕೆಯಲ್ಲಿ ಶ್ರೀಮಂತರ ಬಗ್ಗೆ , ಅವರು ಮಾಡುತ್ತಿದ್ದ ಪಾರ್ಟಿಗಳ ಬಗ್ಗೆ, ಅಲ್ಲಿ ಅವರು ಏನೇನು ಕದಿಯುತ್ತಿದ್ದರು ಎಂದೆಲ್ಲಾ ವರದಿ ಮಾಡುತ್ತಿದ್ದ. ಒಮ್ಮೆ ನ್ಯಾಯಾದೀಶರನ್ನು ಕೂಡ ಗೇಲಿ ಮಾಡಿದ್ದ. ಈ ಎಲ್ಲಾ ಕಾರಣಗಳಿಂದಾಗಿ ಹಿಕ್ಕಿ ಆರಂಭಿಸಿದ ದಿ ಬೆಂಗಾಳ್‌ ಗಝೆಟ್‌ ಮೇಲೆ ನಿಷೇಧ ಹೇರಳಾಯಿತು. ಅವನ ಮುದ್ರಣಾಲಯದ ಮೇಲೆ ದಾಳಿ ಮಾಡಲಾಯಿತು. ಸಂಪಾದಕ ಜೆಎ ಹಿಕ್ಕಿಯನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು.

1823 ರಲ್ಲಿ, ಗವರ್ನರ್-ಜನರಲ್ ಜಾನ್ ಆಡಮ್ಸ್ ಅವರು ಪರವಾನಗಿ ನಿಯಂತ್ರಣ ಸುಗ್ರೀವಾಜ್ಞೆಯನ್ನು (Licensing Regulation Ordinance) ಹೊರತಂದ. ಪರವಾನಗಿ ಇಲ್ಲದೆ  ಮುದ್ರಣಾಲಯವನ್ನು ನಡೆಸುವುದು ಶಿಕ್ಷಾರ್ಹ ಅಪರಾಧವಾವಾಯಿತು. ಮುಖ್ಯವಾಗಿ ಇದು ಭಾರತೀಯರು ನಡೆಸುತ್ತಿದ್ದ ಪತ್ರಿಕೆಗಳನ್ನು ಗುರಿಯಾಗಿಸಿ ಜಾರಿಗೊಳಿಸಲಾಗಿತ್ತು. ಇದರಿಂದಾಗಿ ರಾಜಾ ರಾಮ್ ಮೋಹನ್ ರಾಯ್ 1822 ರಲ್ಲಿ ಆರಂಭಿಸಿದ ಪರ್ಷಿಯನ್ ಜರ್ನಲ್ ‘ಮಿರಾತ್-ಉಲ್-ಅಖ್ಬರ್’ ತನ್ನ ಪ್ರಕಟಣೆಯನ್ನು ನಿಲ್ಲಿಸಬೇಕಾಯ್ತು.

ಗವರ್ನರ್-ಜನರಲ್ ಸರ್ ಚಾರ್ಲ್ಸ್ ಮೆಟ್‌ಕಾಲ್ಫ್ 1835 ರಲ್ಲಿ Press Act  ಜಾರಿಗೆ ತಂದು, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಮರುಸ್ಥಾಪಿಸಿ “liberator of the Indian press” ಎಂದು ಕರೆಸಿಕೊಂಡ. 1823 ರ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿದ. ಈ ಹೊಸ ಪತ್ರಿಕಾ ಕಾಯಿದೆ- Press Act   (1835)ಯನ್ನು Metcalfe Act ಎಂದು ಕರೆಯಲಾಗುತ್ತದೆ.

ಬ್ರಿಟಿಷ್ ಭಾರತದಲ್ಲಿ, ಭಾರತೀಯ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಮತ್ತು ಬ್ರಿಟಿಷ್ ನೀತಿಗಳ ಬಗ್ಗೆ ಬರುತ್ತಿದ್ದ ಟೀಕೆಗಳನ್ನು ತಡೆಯಲು ವೆರ್ನಾಕ್ಯುಲರ್ ಪ್ರೆಸ್ ಆಕ್ಟ್ (1878) ಜಾರಿಗೆ ತರಲಾಗಿತ್ತು. ಸರ್ಕಾರದ ಬಗ್ಗೆ ಸ್ಥಳೀಯ ಜನರಲ್ಲಿ  ಅಸಮಾಧಾನವನ್ನು ಉಂಟುಮಾಡುವ ವರದಿಗಳು ಮತ್ತು ದೇಶದ್ರೋಹದ ಬರವಣಿಗೆಯನ್ನು ಪ್ರಕಟಿಸುತ್ತಿದ್ದ ಸ್ಥಳೀಯ ಪತ್ರಿಕೆಗಳ ಮೇಲೆ ನಿಯಂತ್ರಣ ಹೇರಲು 1878ರ ವರ್ನಾಕ್ಯುಲರ್ ಪ್ರೆಸ್ ಆಕ್ಟ್ ಜಾರಿಗೊಳಿಸಲಾಯಿತು.

1910ರಲ್ಲಿ ಇಂಡಿಯನ್ ಪ್ರೆಸ್ ಆಕ್ಟ್ -1910 ಜಾರಿಗೆ ತಂದು ಸ್ವದೇಶಿ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಲಾಯಿತು.  ವರ್ನಾಕ್ಯುಲರ್ ಪ್ರೆಸ್ ಆಕ್ಟ್ ಗಿಂತಲೂ ಕರಾಳವಾಗಿ ಮಾಧ್ಯಮ ಸ್ವಾತಂತ್ರವ್ಯವನ್ನು ಈ ಕಾಯ್ದೆ ಹತ್ತಿಕ್ಕಿತು.  

ಬ್ರಿಟೀಷ್‌ ಸರ್ಕಾರ ನಿರಂತರವಾಗಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಮಾಡಿದೆ. ಅಗಸ್ಟಸ್‌ ಹಿಕ್ಕಿಯ ಗಝೆಟ್‌ ನಿಂತು ಒಂದು ದಶಕವಾದ ಮೇಲೆ ಬ್ರಿಟೀಷರು ತಂದ ಬ್ರಿಟಿಷ್ ರಾಜ್ಯದ್ರೋಹ/ದೇಶದ್ರೋಹ ಕಾನೂನಿನ ಸೆಕ್ಷನ್ 124ಎ, ಸರ್ಕಾರಕ್ಕೆ ತನ್ನ ವಿರುದ್ದ ಮಾತನಾಡುವವರನ್ನು ಹತ್ತಿಕ್ಕಲು ಎಲ್ಲಾ ರೀತಿಯ ಅಧಿಕಾರವನ್ನು ನೀಡಿತು.

ಎನ್‌ಡಿಟಿವಿಯ ನಿರೂಪಕಿ ನಿಧಿ ರಜ್ದಾನ್ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾರನ್ನು ಡಿಬೇಟ್‌ನಿಂದ ಹೊರಗೆ ಹೋಗುವಂತೆ ಹೇಳಿದ ಕೆಲವೇ ದಿನಗಳ ನಂತರ ಎನ್‌ಡಿ ಟಿವಿ ಮೇಲೆ ಸಿಬಿಐ ದಾಳಿ ನಡೆಯಿತು! ಈ ಮೇಲಿನ ಎಲ್ಲಾ ಸಾಲು ಸಾಲು ಘಟನೆಗಳು ಭಾರತದ ಪತ್ರಿಕಾ ಸ್ವಾತಂತ್ರ್ಯ ಯಾವ ದಿಕ್ಕಿನ ಕಡೆಗೆ ಹೋಗುತ್ತಿದೆ ಎಂಬುದನ್ನು ತೋರಿಸುತ್ತದೆ!

ಲೇಖನ: ಚರಣ್‌ ಐವರ್ನಾಡು

Related Articles

ಇತ್ತೀಚಿನ ಸುದ್ದಿಗಳು