ಕೋಲಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಆರು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಬದಲಾಗಲಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೋಲಾರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. “ಬಿಜೆಪಿಯವರಿಗೆ ಧರ್ಮ ಸಂಘರ್ಷ, ಮುಸ್ಲಿಂ ವಿರೋಧಿ ಹೇಳಿಕೆಗಳು ಮತ್ತು ಸುಳ್ಳು ಹಿಂದುತ್ವದ ರಾಜಕಾರಣ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಿಜೆಪಿಯ ಯಾವುದೇ ನಾಯಕರ ಮಕ್ಕಳು ಎಂದಾದರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆಯೇ?” ಎಂದು ಪ್ರಶ್ನಿಸಿದರು.
ಮದ್ದೂರು ಗಲಭೆಯ ಕುರಿತು ಪ್ರತಿಕ್ರಿಯಿಸಿದ ಅವರು, ಮೆರವಣಿಗೆಯ ಸಂದರ್ಭದಲ್ಲಿ ಕಲ್ಲುತೂರಾಟ ನಡೆಯಬಾರದಿತ್ತು. ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಆದರೆ, ಬಿಜೆಪಿಯವರು ಇದರಲ್ಲಿಯೂ ಹಿಂದೂ-ಮುಸ್ಲಿಂ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ನೇಪಾಳದ ಕನ್ನಡಿಗರ ರಕ್ಷಣೆಗೆ ಸಿದ್ಧ
ನೇಪಾಳದಲ್ಲಿರುವ ಕನ್ನಡಿಗರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಾಡ್, “ನೇಪಾಳದಲ್ಲಿರುವ ಕನ್ನಡಿಗರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ತಾವು ಇರುವ ಸ್ಥಳದಲ್ಲೇ ಸುರಕ್ಷಿತವಾಗಿರುವಂತೆ ಹೇಳಿದ್ದೇನೆ. ಮುಖ್ಯಮಂತ್ರಿಗಳು ಸೂಚಿಸಿದರೆ, ಕನ್ನಡಿಗರ ರಕ್ಷಣೆಗಾಗಿ ನೇಪಾಳಕ್ಕೆ ಹೋಗಲು ನಾನು ಸಿದ್ಧ,” ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ ಎಂದು ಅವರು ತಿಳಿಸಿದರು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಪರಿಸ್ಥಿತಿಯನ್ನು ಪ್ರಶ್ನಿಸಿದ ಅವರು, ದೇಶಾದ್ಯಂತ ಕರ್ನಾಟಕದ ಆರ್ಥಿಕ ಮಾದರಿಯನ್ನು ಅನುಸರಿಸಬೇಕಾಗಿದೆ ಎಂದು ಹೇಳಿದರು.
ಭದ್ರಾವತಿ ಶಾಸಕರು “ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ” ಎಂದು ಹೇಳಿರುವ ಬಗ್ಗೆ ಮಾತನಾಡಿದ ಲಾಡ್, “ಹಿಂದೆ ದೇವೇಗೌಡರು ಸಹ ಇದೇ ಮಾತನ್ನು ಹೇಳಿದ್ದರು, ಇದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು.
ಪಾಕಿಸ್ತಾನಕ್ಕೆ ನೀರು ನಿಲ್ಲಿಸುವ ಬಗ್ಗೆ ಮಾತನಾಡುವವರು ಏಷ್ಯಾ ಕಪ್‌ನಲ್ಲಿ ಅವರ ವಿರುದ್ಧ ಕ್ರಿಕೆಟ್ ಪಂದ್ಯ ಆಡಿಸಲು ಮುಂದಾಗುತ್ತಾರೆ ಎಂದು ಲಾಡ್ ವ್ಯಂಗ್ಯ ಮಾಡಿದರು. “ಕ್ರೀಡೆ ಮತ್ತು ಸಿನಿಮಾವನ್ನು ಆ ದೃಷ್ಟಿಯಿಂದಲೇ ನೋಡಬೇಕು. ಮನಬಂದಂತೆ ನಡೆದುಕೊಂಡರೆ ಪ್ರಶ್ನಿಸುವವರು ಯಾರೂ ಇಲ್ಲ ಎಂಬ ವರ್ತನೆ ಸರಿಯಲ್ಲ,” ಎಂದು ಕಿಡಿಕಾರಿದರು.
“ಇನ್ನೂ ತಮ್ಮನ್ನು ಶ್ರೇಷ್ಠ ಪ್ರಧಾನಿ ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ಆದರೆ ಪಾಕಿಸ್ತಾನಕ್ಕೆ ಹೋಗಿ ಬಂದವರು ನರೇಂದ್ರ ಮೋದಿ ಮತ್ತು ಅಡ್ವಾಣಿ” ಎಂದು ತೀಕ್ಷ್ಣವಾಗಿ ಟೀಕಿಸಿದರು. ಕಳೆದ ಅವಧಿಯಲ್ಲಿ ಬಿಜೆಪಿ ಮಾಡಿರುವ ಸಾಲವನ್ನು ತಮ್ಮ ಸರ್ಕಾರ ತೀರಿಸುತ್ತಿದೆ ಎಂದು ಲಾಡ್ ತಿಳಿಸಿದರು.
ಧರ್ಮಸ್ಥಳ ಕ್ಷೇತ್ರಕ್ಕೆ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಭೇಟಿ ಕುರಿತು ಪ್ರತಿಕ್ರಿಯಿಸಿ, “ಹಿಂದುತ್ವವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬಿಟ್ಟರೆ ಬಿಜೆಪಿಗೆ ಮತ್ತೇನು ಗೊತ್ತು?” ಎಂದು ಪ್ರಶ್ನಿಸಿದರು. “ಹಿಂದೂ ಧರ್ಮದ ಬಗ್ಗೆ ಕಾಳಜಿಯಿದ್ದರೆ, ಸಮಾಜದಲ್ಲಿನ ಬೇರೆ ಸಮುದಾಯದವರನ್ನು ಕೀಳಾಗಿ ಕಾಣುವುದನ್ನು ನಿಲ್ಲಿಸಿ, ಬದಲಾವಣೆಗೆ ಸಹಕರಿಸಿ,” ಎಂದು ಕಿವಿಮಾತು ಹೇಳಿದರು.