Tuesday, February 24, 2026

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ನಾಯಕರ ಜೊತೆ ಪ್ರೀತಂ ಗೌಡ ಸಂಚಾರ: ಪಕ್ಷಾಂತರದ ಮುನ್ಸೂಚನೆಯೇ?

ಹಾಸನ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರು ಕಾಂಗ್ರೆಸ್ ಮುಖಂಡರ ಜೊತೆ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅವರ ಪಕ್ಷಾಂತರದ ಕುರಿತು ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಮೈಸೂರಿನ ಪ್ರತಿಷ್ಠಿತ ಲಲಿತ್ ಮಹಲ್ ಹೋಟೆಲ್ ಆವರಣದಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಮತ್ತು ಹಾಸನ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಾವಗಲ್ ಮಂಜುನಾಥ್ ಅವರೊಂದಿಗೆ ಪ್ರೀತಂ ಗೌಡ ಒಂದೇ ಕಾರಿನಲ್ಲಿ ಸಂಚರಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.

ಹಾಸನ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿರುವ ಪ್ರೀತಂ ಗೌಡ ಅವರು ಕಳೆದ ಕೆಲವು ಸಮಯದಿಂದ ಬಿಜೆಪಿಯ ಕೆಲವೊಂದು ಆಂತರಿಕ ನಿರ್ಧಾರಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈಗ ಅವರು ಬಹಿರಂಗವಾಗಿ ಕಾಂಗ್ರೆಸ್ ಶಾಸಕರ ಜೊತೆ ಓಡಾಟ ನಡೆಸುತ್ತಿರುವುದು, ಅವರು ಶೀಘ್ರದಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದು ಹಾಸನ ಜಿಲ್ಲಾ ಬಿಜೆಪಿ ಪಾಳಯದಲ್ಲಿ ತಲ್ಲಣ ಮೂಡಿಸಿದೆ.

ವೈರಲ್ ಆಗಿರುವ ಈ ವಿಡಿಯೋ ಯಾವ ದಿನಾಂಕದ್ದು ಎಂಬುದು ಇನ್ನು ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ರಾಜಕೀಯ ವಲಯದಲ್ಲಿ ಮಾತ್ರ ಇದು ತೀವ್ರ ಸಂಚಲನ ಮೂಡಿಸಿದೆ. ಶಾಸಕ ಹರೀಶ್ ಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವುದರಿಂದ, ಪ್ರೀತಂ ಗೌಡ ಅವರ ಕಾಂಗ್ರೆಸ್ ಸೇರ್ಪಡೆಗೆ ತೆರೆಮರೆಯಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಇದು ನಿಜವಾದಲ್ಲಿ, ಹಾಸನದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆಯಾಗುವ ಸಾಧ್ಯತೆ ಇದೆ.

ಸದ್ಯಕ್ಕೆ ಈ ವಿಡಿಯೋ ಕುರಿತಂತೆ ಪ್ರೀತಂ ಗೌಡ ಅವರಾಗಲಿ ಅಥವಾ ಕಾಂಗ್ರೆಸ್ ಮುಖಂಡರಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಆದರೆ, ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ತರ ಬದಲಾವಣೆಗಳು ನಡೆಯುತ್ತಿವೆ ಎಂಬ ವದಂತಿಗಳ ನಡುವೆ ಈ ಬೆಳವಣಿಗೆಯೂ ಗಮನಾರ್ಹವಾಗಿದೆ. ಪ್ರೀತಂ ಗೌಡ ಅವರ ಮುಂದಿನ ನಡೆಯು ಹಾಸನ ಜಿಲ್ಲೆಯ ರಾಜಕೀಯ ಸಮೀಕರಣಗಳನ್ನು ಬದಲಿಸುವುದರಲ್ಲಿ ಸಂಶಯವಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page