Home ರಾಜ್ಯ ಕಲ್ಬುರ್ಗಿ ಆರ್‌ಎಸ್‌ಎಸ್ ತನ್ನ ಲೆಟರ್‌ಹೆಡ್‌ನಲ್ಲೇ ಖರ್ಗೆ ವಿರುದ್ಧ ದೂರು ನೀಡಲಿ: ಸಚಿವ ಪ್ರಿಯಾಂಕ್ ಖರ್ಗೆ ಸವಾಲು

ಆರ್‌ಎಸ್‌ಎಸ್ ತನ್ನ ಲೆಟರ್‌ಹೆಡ್‌ನಲ್ಲೇ ಖರ್ಗೆ ವಿರುದ್ಧ ದೂರು ನೀಡಲಿ: ಸಚಿವ ಪ್ರಿಯಾಂಕ್ ಖರ್ಗೆ ಸವಾಲು

0

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ವಿಷಸರ್ಪ’ ಹೇಳಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೇರವಾಗಿ ದೂರು ದಾಖಲಿಸದೆ ಇತರರ ಮೂಲಕ ದೂರು ಕೊಡಿಸುತ್ತಿರುವುದೇಕೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರ್‌ಎಸ್‌ಎಸ್ ಒಂದು ನೋಂದಾಯಿತ ಸಂಸ್ಥೆಯಾಗಿದ್ದರೆ, ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ತಮ್ಮದೇ ಅಧಿಕೃತ ಲೆಟರ್‌ಹೆಡ್ ಬಳಸಿ ಪ್ರಕರಣ ದಾಖಲಿಸಲಿ” ಎಂದು ನೇರ ಸವಾಲು ಹಾಕಿದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ನಾವು ಅನುಸರಿಸುತ್ತೇವೆ ಎಂದು ಪ್ರತಿಪಾದಿಸಿದ ಪ್ರಿಯಾಂಕ್, “ನಮ್ಮ ಸಿದ್ಧಾಂತವು ಎಲ್ಲರಿಗೂ ಸಮಾನ ಪಾಲು ಮತ್ತು ಸಮಾನ ಬದುಕನ್ನು ನೀಡುವುದಾಗಿದೆ. ಆದರೆ ಕೆಲವರು ಸಂವಿಧಾನ ಮತ್ತು ಈ ತತ್ವಗಳ ವಿರುದ್ಧವಾಗಿದ್ದಾರೆ. ಯಾರಾದರೂ ಹಾದಿಯಲ್ಲಿ ವಿಷಸರ್ಪ ಕಂಡರೆ ಅದಕ್ಕೆ ಹಾಲು ಎರೆಯುತ್ತಾರೆಯೇ?” ಎಂದು ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದೇ ವೇಳೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ “ಖರ್ಗೆ ತಂದೆ-ಮಗನನ್ನು ಜೈಲಿಗೆ ಹಾಕುತ್ತೇವೆ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಅವರಿಗೆ ಶಕ್ತಿ ಇದ್ದರೆ ಸ್ಕ್ವಾಡ್ ಕರೆದುಕೊಂಡು ಬಂದು ನಮ್ಮನ್ನು ಬಂಧಿಸಲಿ” ಎಂದು ಗುಡುಗಿದರು.

ಬಿಜೆಪಿಯ ದ್ವಂದ್ವ ನೀತಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, “ಬಿಜೆಪಿಯವರು ಒಂದು ಕಡೆ ಮುಸ್ಲಿಂ ರಾಷ್ಟ್ರಗಳನ್ನು ದೂರುತ್ತಾರೆ, ಮತ್ತೊಂದೆಡೆ ಯುಎಇಯನ್ನು ತಬ್ಬಿಕೊಳ್ಳುತ್ತಾರೆ. ಅಲ್ಲಿಂದ ತೈಲ ಮತ್ತು ಯೂರಿಯಾ ಪಡೆಯುತ್ತಾರೆ. ಕೋವಿಡ್ ಸಮಯದಲ್ಲಿ ಅಮಿತ್ ಶಾ ಅವರ ಮಗ ದುಬೈನಲ್ಲಿ ಐಪಿಎಲ್ ಆಡಿದ್ದರು. ಇಂತಹ ದ್ವಂದ್ವ ನೀತಿ ಏಕೆ? ಶಕ್ತಿ ಇದ್ದರೆ ಮುಸ್ಲಿಂ ದೇಶಗಳ ಜೊತೆಗಿನ ವ್ಯವಹಾರವನ್ನು ನಿಲ್ಲಿಸಲಿ” ಎಂದು ಕಿಡಿಕಾರಿದರು. ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನಲ್ಲಿದ್ದಾಗ ಇದೇ ಸಿದ್ಧಾಂತದಲ್ಲಿದ್ದರು, ಆದರೆ ಬಿಜೆಪಿ ಸೇರಿ ಆರ್‌ಎಸ್‌ಎಸ್ ಹೊತ್ತುಕೊಂಡ ಮೇಲೆ ಬದಲಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ ಮತ್ತು ಜೆಸ್ಕಾಮ್ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಸೇರಿದಂತೆ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

You cannot copy content of this page

Exit mobile version