‘ಕೆಪಿಎಸ್‌ಸಿ ಹಗರಣದ ಆರೋಪಿಗಳ ಜತೆ ಶಾಮೀಲಾಗಿರುವ ಬಿಜೆಪಿಗರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ’: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕರ್ನಾಟಕ ಬಿಜೆಪಿಯ ನಾಯಕರು ಹತಾಶೆಯಿಂದ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ; ಆದರೆ ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು ಎಂದು ಕೇಳಿದರೆ ಅವರ ಬಳಿಯೇ ಯಾವುದೇ ಉತ್ತರವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ತಿರುಗೇಟು ನೀಡಿದ್ದಾರೆ. ಕೇವಲ ಕೂಗಾಟ ನಡೆಸಿದ ಮಾತ್ರಕ್ಕೆ ಸತ್ಯವನ್ನು ಹೂತುಹಾಕಲು ಸಾಧ್ಯವಿಲ್ಲ ಎಂದಿರುವ ಅವರು, ತಮ್ಮ ರಾಜೀನಾಮೆ ಕೇಳುವ ಮುನ್ನ ರಾಜ್ಯದ ಜನತೆಗೆ ಕೆಲವು ನೇರ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಕೆಪಿಎಸ್‌ಸಿ (KPSC) ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಸವರಾಜ್ ಕನ್ನಾಳೆ ಕುರಿತು ಬಿಜೆಪಿ ನಾಯಕರು ಏಕೆ ಮೌನಕ್ಕೆ ಶರಣಾಗಿದ್ದಾರೆ ಎಂದು ಖರ್ಗೆ ನೇರವಾಗಿ ಪ್ರಶ್ನಿಸಿದ್ದಾರೆ. “ಆರೋಪಿ ಬಸವರಾಜ್ ಕನ್ನಾಳೆ ಬಿಜೆಪಿಯ ಅಧಿಕೃತ ಸಭೆಗಳಲ್ಲಿ ಭಾಗವಹಿಸುತ್ತಾನೆ. ಬಿಜೆಪಿ ನಾಯಕರ ಜತೆ ದೇಶ-ವಿದೇಶಗಳ ಪ್ರವಾಸ ಮಾಡುತ್ತಾನೆ. ಇವರ ‘ಅಪ್ಪಾಜಿ’ಯ ಆಶೀರ್ವಾದ ಪಡೆಯುತ್ತಾನೆ. ಆತನ ಹುಟ್ಟುಹಬ್ಬದ ಸಂಭ್ರಮಾಚರಣೆಗಳಲ್ಲಿ ಬಿಜೆಪಿ ನಾಯಕರು ಹಾಜರಿರುತ್ತಾರೆ, ಆತನ ವ್ಯಾಪಾರ-ಉದ್ಯಮಗಳಿಗೆ ಚಾಲನೆ ನೀಡುತ್ತಾರೆ ಮತ್ತು ಅತ್ಯಂತ ಪ್ರೀತಿಯಿಂದ ಆತನಿಗೆ ತುತ್ತು ತಿನ್ನಿಸುತ್ತಾರೆ. ಇಷ್ಟೆಲ್ಲಾ ಸಖ್ಯವಿಟ್ಟುಕೊಂಡಿರುವ ಬಿಜೆಪಿಗರು, ನೈತಿಕತೆಯೇ ಇಲ್ಲದೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇಷ್ಟೇ ಅಲ್ಲದೆ, ಕೆಪಿಎಸ್‌ಸಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ದೇಶ ಬಿಟ್ಟು ಪರಾರಿಯಾಗಲು ಯತ್ನಿಸಿದ ಆರೋಪದ ಬಗ್ಗೆ ಬಿಜೆಪಿ ನಾಯಕರು ತುಟಿಕ್ಪಿಟಿಕ್ ಎನ್ನದಿರುವುದು ಏಕೆ ಎಂದು ಪ್ರಶ್ನಿಸಿರುವ ಅವರು, ಶಿವಶಂಕರಪ್ಪ ಸಾಹುಕಾರ್ ವಿಚಾರ ಬಂದಾಗ ಬಿಜೆಪಿಗರ ಬಾಯಿ ಏಕೆ ಬಂದ್ ಆಗಿದೆ ಎಂದು ಛೇಡಿಸಿದ್ದಾರೆ.

ಇವೆಲ್ಲಕ್ಕಿಂತ ದೊಡ್ಡ ಪ್ರಶ್ನೆಯೆಂದರೆ, “ಹಿಂದೆ ಕೆಪಿಎಸ್‌ಸಿ ಸದಸ್ಯರು ಹಾಗೂ ಅಧ್ಯಕ್ಷ ಹುದ್ದೆಗಳನ್ನು ಹಂಚಲು ಬಿಜೆಪಿ ನಾಯಕರು ಎಷ್ಟು ಕೋಟಿ ಲೂಟಿ ಮಾಡಿದರು? ಕೆಪಿಎಸ್‌ಸಿ ಹಗರಣದ ಬಗ್ಗೆ ಇದುವರೆಗೆ ಎಷ್ಟು ಜನ ಬಿಜೆಪಿ ನಾಯಕರು ನೈಜವಾಗಿ ಧ್ವನಿ ಎತ್ತಿದ್ದಾರೆ ಅಥವಾ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದಾರೆ?” ಎಂದು ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರಶ್ನೆಗಳನ್ನು ಮುಂದಿಟ್ಟು ಬಿಜೆಪಿಯ ಬೂಟಾಟಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು