Home ದೇಶ ಗೇಟ್ ಹಾರಿ ಒಳನುಗ್ಗಿದ ಪ್ರಿಯಾಂಕಾ ಗಾಂಧಿ, ಕಿಂಗ್ಸ್‌ವೇ ಕ್ಯಾಂಪ್‌ಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು: ರಾಹುಲ್...

ಗೇಟ್ ಹಾರಿ ಒಳನುಗ್ಗಿದ ಪ್ರಿಯಾಂಕಾ ಗಾಂಧಿ, ಕಿಂಗ್ಸ್‌ವೇ ಕ್ಯಾಂಪ್‌ಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು: ರಾಹುಲ್ ಗಾಂಧಿ ಬಿಡುಗಡೆ

0

ಹೊಸದೆಹಲಿಯ ಆಕಾಶವಾಣಿ ಭವನದ ಬಳಿ ದಿನವಿಡೀ ನಡೆದ ಪ್ರತಿಭಟನೆಯ ನಂತರ ವಶಕ್ಕೆ ಪಡೆದಿದ್ದ ವಿರೋಧ ಪಕ್ಷದ ನಾಯಕರನ್ನು ಇರಿಸಲಾಗಿದ್ದ ಕಿಂಗ್ಸ್‌ವೇ ಕ್ಯಾಂಪ್‌ನ ‘ನ್ಯೂ ಪೊಲೀಸ್ ಲೈನ್ಸ್’ ಆವರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ತಡರಾತ್ರಿ ದಿಢೀರ್ ಮುತ್ತಿಗೆ ಹಾಕಿದರು. ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಸ್ವತಃ ಪೊಲೀಸ್ ಠಾಣೆಯ ಗೇಟ್ ಹಾರಿ ಒಳಪ್ರವೇಶಿಸಿ ಕಾರ್ಯಕರ್ತರಿಗೆ ದಾರಿ ಮಾಡಿಕೊಟ್ಟಿದ್ದು, ಇಡೀ ಪ್ರದೇಶದಲ್ಲಿ ತೀವ್ರ ಹೈಡ್ರಾಮಾ ಸೃಷ್ಟಿಸಿತು. ಈ ನಾಟಕೀಯ ಬೆಳವಣಿಗೆಯ ಬೆನ್ನಲ್ಲೇ ಸುಮಾರು ಎರಡು ಗಂಟೆಗಳ ಕಾಲ ವಶದಲ್ಲಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಬಿಡುಗಡೆ ಮಾಡಿದರು.

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಗೆ ಹೊರಟಿದ್ದ ‘ಇಂಡಿಯಾ’ (INDIA) ಒಕ್ಕೂಟದ ಸಂಸದರ ಪಾದಯಾತ್ರೆಯನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದಿದ್ದರು. ಇದರಿಂದ ಆಕ್ರೋಶಗೊಂಡ ನಾಯಕರು ಆಕಾಶವಾಣಿ ಭವನದ ಆವರಣದಲ್ಲಿಯೇ ಬರೋಬ್ಬರಿ 9 ಗಂಟೆಗಳ ಕಾಲ ಧರಣಿ ಮುಂದುವರಿಸಿದರು.

ನಮಗೆ ಸಿಇಸಿ ಅವರನ್ನು ಭೇಟಿಯಾಗಲು ಅವಕಾಶ ನೀಡುವವರೆಗೂ ಕದಲುವುದಿಲ್ಲ ಎಂದು ರಾಹುಲ್ ಪಟ್ಟುಹಿಡಿದಿದ್ದರು. ಅಂತಿಮವಾಗಿ ಸಂಜೆ ವೇಳೆಗೆ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು ರಾಹುಲ್, ಪ್ರಿಯಾಂಕಾ ಹಾಗೂ ಸುಮಾರು 50 ಸಂಸದರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ಕಿಂಗ್ಸ್‌ವೇ ಕ್ಯಾಂಪ್‌ಗೆ ಕರೆದೊಯ್ದರು.

ಪೊಲೀಸ್ ಲೈನ್ಸ್ ಹೊರಗೆ ಜಮಾಯಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲೇ ಪ್ರಿಯಾಂಕಾ ಗಾಂಧಿ ಎತ್ತರದ ಗೇಟ್ ಹಾರಿ ಆವರಣದೊಳಗೆ ಪ್ರವೇಶಿಸಿದರು. ಕೂಡಲೇ ಕಾರ್ಯಕರ್ತರು ಒಳನುಗ್ಗಿ ಸರ್ಕಾರದ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಕೂಗತೊಡಗಿದರು.

ಚುನಾವಣಾ ಆಯೋಗದ ಕಚೇರಿ ಬಳಿ ಆರಂಭವಾಗಿದ್ದ ಪ್ರತಿಭಟನಾ ಸಮರ, ಕೊನೆಗೆ ಪೊಲೀಸ್ ಆವರಣದಲ್ಲಿ ನಡೆದ ಈ ನಾಟಕೀಯ ಪ್ರಸಂಗದೊಂದಿಗೆ ಅಂತ್ಯಕಂಡಿತು. ಈ ಘಟನೆಯ ಬೆನ್ನಲ್ಲೇ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಪೊಲೀಸ್ ವಶದಿಂದ ಹೊರಬಂದರು.

You cannot copy content of this page

Exit mobile version