Friday, April 26, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ನಾಮಫಲಕ : ಎರಡು ಪ್ರಮುಖ ನಿರ್ಣಯಕ್ಕೆ ಬಂದ ಕನ್ನಡಪರ ಸಂಘಟನೆಗಳು, ನಿರ್ಣಯಗಳೇನು?

ಹಲವು ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳನ್ನು ಒಳಗೊಂಡಂತೆ ಇಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿತ್ತು. ಅದರಂತೆ ರಾಜ್ಯ ಸರ್ಕಾರ ಬಂಧಿಸಿದ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಒತ್ತಾಯಿಸಲು ವಿವಿಧ ಸಂಘಟನೆಗಳು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.

ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಮತ್ತು ಅಗತ್ಯಕ್ಕಿಂತ ಹೆಚ್ಚು ಅನ್ಯಭಾಷೆ ಬಳಸಿದ ನಾಮಫಲಕ ತೆರವಿಗೆ ಸಂಬಂಧಿಸಿದಂತೆ ಹೋರಾಟ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಹಾಗೂ ಕಾರ್ಯಕರ್ತರನ್ನು ಗುರುವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಬಂಧಿಸಲಾಗಿತ್ತು. ನಂತರ ನಾರಾಯಣ ಗೌಡ ಸೇರಿದಂತೆ 53 ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನೆ ಮಾಡಲಾಗಿದೆ

ಈ ಸಂಬಂಧ ಎಲ್ಲಾ ಸಂಘಟನೆಗಳನ್ನು ಒಳಗೊಂಡಂತೆ ಕರವೇ ನಾರಾಯಣ ಗೌಡ ಹಾಗೂ ಕಾರ್ಯಕರ್ತರನ್ನು ಬಿಡುಗಡೆಗೊಳಿಸುವಂತೆ ಎಲ್ಲಾ ಕನ್ನಡಪರ ಸಂಘಟನೆಗಳು ಇಂದು ಸರ್ಕಾರಕ್ಕೆ ಮತ್ತಷ್ಟು ಒತ್ತಡ ತರಲು ತೀರ್ಮಾನಿಸಿವೆ. ಇಂದು ನಡೆದ ಸಭೆಯಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು ಸೇರಿದ ಸಭೆಯಲ್ಲಿ ಪ್ರಮುಖವಾಗಿ ಎರಡು ನಿರ್ಣಯಗಳನ್ನು ತಗೆದುಕೊಳ್ಳಲಾಗಿದ್ದು, ಇದರಲ್ಲಿ ಪ್ರಮುಖವಾಗಿ ಬೆಂಗಳೂರು ಬಂದ್​ ಮಾಡುವ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ.

ಬಂಧನದಲ್ಲಿರುವ ಕನ್ನಡಿಗರನ್ನು ಬೇಷರತ್​ ಆಗಿ ಬಿಡುಗಡೆ ಮಾಡಬೇಕು. ಹೋರಾಟಗಾರರ ಮೇಲಿನ ಕೇಸ್​ ಹಿಂಪಡೆಯಬೇಕು ಎಂದು ಖಂಡನಾ ಸಭೆಯಲ್ಲಿ ಪ್ರಮುಖ ಎರಡು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಇದಿಷ್ಟೇ ಅಲ್ಲದೆ ಕನ್ನಡ ನಾಮಫಲಕದಲ್ಲಿ ಶೇ 60% ರಷ್ಟು ಕನ್ನಡ ಬಳಕೆ ಕಡ್ಡಾಯದ ವಿಚಾರದಲ್ಲಿ ನಾವುಗಳು (ಎಲ್ಲಾ ಕನ್ನಡಪರ ಸಂಘಟನೆಗಳು) ಒಗ್ಗಟ್ಟಿನಿಂದ ಇರುವ ಬಗ್ಗೆ ಕರೆ ನೀಡಿವೆ. ಫೆ.28ಕ್ಕೆ ಕನ್ನಡ ನಾಮಫಲಕ ಕಡ್ಡಾಯ ಆಗಬೇಕು. ಇಲ್ಲದಿದ್ರೆ ಮತ್ತೆ ನಾಮಫಲಕಗಳ ವಿಚಾರದಲ್ಲಿ ಹೋರಾಟ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಕರೆ ನೀಡಿದ್ದಾರೆ.

ಇತ್ತ ಬೋರ್ಡ್​ಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ. ಜಾಹಿರಾತು ಫಲಕಗಳಲ್ಲೂ ಇದು ಜಾರಿಗೆ ಬರಬೇಕು. ಈ ಬಗ್ಗೆ ಶಾಂತಿಯುತ ಹೋರಾಟ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಕಾನೂನು ಕೈಗೆತ್ತಿಕೊಂಡರೆ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುರುವಾರ ಎಚ್ಚರಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು