ಶಿವಮೊಗ್ಗ, ಡಿಸೆಂಬರ್ 05 ಮಣ್ಣಿನ ಸರಿಯಾದ ವಿಶ್ಲೇಷಣೆ ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಅತೀ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ. ಪಿ. ಕೆ.ಬಸವರಾಜ್ ತಿಳಿಸಿದರು.
ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 05-12-2024 ರಂದು ಏರ್ಪಡಿಸಲಾಗಿದ್ದ ವಿಶ್ವ ಮಣ್ಣು ದಿನಾಚರಣೆಯನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಕೃಷಿ ಪರಿಸರ ವ್ಯವಸ್ಥೆ ಹಾಗೂ ಹವಾಮಾನ ನಿಯಂತ್ರಣದಲ್ಲಿ ಮಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಇದು ನೈಸರ್ಗಿಕ ಫಿಲ್ಟರ್ ರೂಪದಲ್ಲಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಆರ್. ಸಿ. ಜಗದೀಶ ಮಾತನಾಡಿ ಪ್ರತಿನಿತ್ಯ ಬರಿಗಾಲಲ್ಲಿ ಮಣ್ಣಿನ ಮೇಲೆ ನಡೆದಾಡಿದರೆ ಮಣ್ಣಿನ ಗುಣ ಧರ್ಮವನ್ನು ತಿಳಿಯಲು ಸಾಧ್ಯವಾಗುತ್ತದೆ. ಇದರಿಂದ ಆ ಮಣ್ಣಿನ ನಿರ್ವಹಣೆ ಮಾಡುವುದು ನಮಗೆ ಸುಲಭವಾಗುತ್ತದೆ. ರೈತರು ಗುಣಮಟ್ಟ ಮತ್ತು ಹೆಚ್ಚಿನ ಇಳುವರಿ ಪಡೆಯಲು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಆದ್ದರಿಂದ ಪ್ರತಿಯೊಬ್ಬ ರೈತರು ಪ್ರತಿ 2 ವರ್ಷಕ್ಕೊಮ್ಮೆ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಶಿಫಾರಸ್ಸು ಮಾಡಿದಷ್ಟೇ ಪ್ರಮಾಣದ ಗೊಬ್ಬರಗಳನ್ನು ಭೂಮಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವುದರ ಜೊತೆಗೆ ಬೇಸಾಯದ ಖರ್ಚು ಕಡಿಮೆ ಮಾಡಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದು. ಅಲ್ಲದೆ, ಮಣ್ಣಿನ ಫಲವತ್ತತೆಯ ಮಾಹಿತಿ ನಕ್ಷೆಗಳನ್ನು ತಯಾರಿಸುವುದು ಇತ್ತೀಚಿನ ದಿನಗಳಲ್ಲಿ ಅವಶ್ಯವಿದೆ ಎಂದರು.
ಕೆ.ಶಿ.ನಾ.ಕೃ.ತೋ.ವಿ.ವಿ. ಶಿಕ್ಷಣ ನಿರ್ದೇಶಕರಾದ ಡಾ. ಬಿ. ಹೇಮ್ಲಾ ನಾಯ್ಕ್ ಮಾತನಾಡಿ ಇರುವುದು ಒಂದೇ ಭೂಮಿ, ಆದ್ದರಿಂದ ಮಣ್ಣಿನ ಆರೋಗ್ಯ ಕಾಪಾಡಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕನಿಷ್ಠ ಎರಡು ದನ-ಕರುಗಳನ್ನು ಸಾಕಾಣಿಕೆ ಮಾಡಿಕೊಂಡು ಕೃಷಿ ತ್ಯಾಜ್ಯಗಳನ್ನು ಬಳಸಿ ಸಾವಯವ ಗೊಬ್ಬರ ತಯಾರಿಸಿ ತಮ್ಮ ಜಮೀನಿಗೆ ಬಳಸಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಬಹುದೆಂದು ತಿಳಿಸಿದರು.
ಕೆ.ಶಿ.ನಾ.ಕೃ.ತೋ.ವಿ.ವಿ. ವಿಸ್ತರಣಾ ನಿರ್ದೇಶಕರಾದ ಡಾ. ಕೆ. ಟಿ. ಗುರುಮೂರ್ತಿ ಮಾತನಾಡಿ, ಕರ್ನಾಟಕದ ಮಣ್ಣಿನಲ್ಲಿ ಸಾವಯವ ಅಂಶ ಶೇ.40ರಷ್ಟು ಕೊರತೆ ಇದೆ. ಆದ್ದರಿಂದ ರೈತರು ಮಣ್ಣು ನಿರ್ವಹಣೆಯ ಮಹತ್ವವನ್ನು ಅರಿಯಬೇಕಿದೆ, ಇದಕ್ಕೆ ರೈತರು ಸಾವಯವ ಕೃಷಿ, ಹಸಿರೆಲೆ ಗೊಬ್ಬರಗಳನ್ನು ಯಥೇಚ್ಚವಾಗಿ ಬಳಸಿ ಮಣ್ಣಿನ ನಿರ್ವಹಣೆ ಮಾಡಬೇಕಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಡಾ. ಕಿರಣ್‌ಕುಮಾರ್ ಮಾತನಾಡಿ, ಮಣ್ಣು ಕೃಷಿಗೆ ಮೂಲ. ಆದ್ದರಿಂದ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಗೊಬ್ಬರಗಳ ಬಳಕೆ ಮಾಡುವುದು ಸೂಕ್ತ. ರೈತರು ಬೆಳೆ ಪರಿವರ್ತನೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂತನ ಮಾದರಿಯ ‘ಮಣ್ಣು ಆರೋಗ್ಯ ಚೀಟಿ’ಯನ್ನು ಬಿಡುಗಡೆ ಗೊಳಿಸಿ, ಫಲಾನುಭವಿ ರೈತರಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಕೆ.ವಿ.ಕೆ.ಯಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಸಿ. ಸುನಿಲ್, ಸ್ವಾಗತಿಸಿದರು. ವಿಜ್ಞಾನಿ (ಮಣ್ಣು ವಿಜ್ಞಾನ) ಡಾ. ಅಂಜಲಿ, ಎಂ.ಸಿ., ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಒಟ್ಟು 95 ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮವನ್ನು ಹಿರಿಯ ತಾಂತ್ರಿಕ ಅಧಿಕಾರಿ ಡಾ. ನಾಗರಾಜ, ಆರ್. ನಿರೂಪಿಸಿದರು. ್ನಡಾ. ಮಂಜುನಾಥ ಬಿ.ಕುದರಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಕೇಂದ್ರ, ಶಿವಮೊಗ್ಗದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಉಪಸ್ತಿತರಿದ್ದರು.