ನವದೆಹಲಿ, ಅಕ್ಟೋಬರ್.18: 2019 ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರ ಕುಟುಂಬದ ಸದಸ್ಯರು ಸಂಭವಿಸಿದ ಲೋಪಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ನವೆಂಬರ್ 26 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ.
ಮಾಜಿ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಬ್ಯಾನರ್‌ನಡಿಯಲ್ಲಿ (Confederation of Ex-Paramilitary Forces Welfare Associations), ಹತ್ಯೆಗೀಡಾದ ಯೋಧರ ಪತ್ನಿಯರು ಮತ್ತು ಕುಟುಂಬ ಸದಸ್ಯರು ನವೆಂಬರ್ 26, ಸಂವಿಧಾನ ದಿನದಂದು ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ.
“ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಜವಾನರ ಪತ್ನಿಯರು ಮತ್ತು ಕುಟುಂಬ ಸದಸ್ಯರನ್ನು ಕರೆತರಲು ನಾವು ಯೋಜಿಸಿದ್ದೇವೆ. ಪುಲ್ವಾಮಾ ದಾಳಿಯಾಗಿ ನಾಲ್ಕು ವರ್ಷಗಳು ಕಳೆದಿವೆ ಮತ್ತು ನಮ್ಮ 40 ಯೋಧರ ಹತ್ಯೆಗೆ ಕಾರಣವಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ,” ಎಂದು ಸಂಘದ ರಾಷ್ಟ್ರೀಯ ಸಂಯೋಜಕ ರಣಬೀರ್ ಸಿಂಗ್ ತಿಳಿಸಿದ್ದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಚುನಾವಣೆಯ ಸಮಯದಲ್ಲಿ ಯಾವಾಗಲೂ ರಾಷ್ಟ್ರೀಯತೆಯನ್ನು ಪ್ರಚಾರಕ್ಕೆ ಬಳಸುವ ನರೇಂದ್ರ ಮೋದಿ ಸರ್ಕಾರವು 40 ಸಿಆರ್‌ಪಿಎಫ್ ಸಿಬ್ಬಂದಿಗಳ ಹತ್ಯೆಗೆ ಕಾರಣವಾದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ನೀಡಿಲ್ಲ ಎಂದು ಅವರು ಅವರು ಆರೋಪಿಸಿದ್ದಾರೆ. ಫೆಬ್ರವರಿ 14, 2019 ರಂದು ಸೈನಿಕರು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡು ನಲವತ್ತು ಸೈನಿಕರು ಹತರಾಗಿದ್ದರು.
“ಹತರಾದ ಈ 40 ಸಿಆರ್‌ಪಿಎಫ್ ಸೈನಿಕರ ಕುಟುಂಬಗಳಿಗೆ ಗುಪ್ತಚರ ವರದಿಗಳ ನಿರ್ಲಕ್ಷ್ಯಕ್ಕೆ ಯಾರು ಹೊಣೆ ಎಂದು ತಿಳಿದುಕೊಳ್ಳುವ ಎಲ್ಲಾ ಹಕ್ಕುಗಳಿವೆ” ಎಂದು ಸಿಂಗ್ ಹೇಳಿದ್ದಾರೆ.
ಮೋದಿ ಸರ್ಕಾರದ ಗುಪ್ತಚರ ವೈಫಲ್ಯದ ಪರಿಣಾಮವಾಗಿ ದಾಳಿ ನಡೆದಿದೆ ಎಂದು ಆರೋಪಿಸಿ ದಿ ವೈರ್‌ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ನೀಡಿದ ಸಂದರ್ಶನ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆ ಸಂದರ್ಶನದಲ್ಲಿ ಸೈನಿಕರಿಗೆ ಕೇಂದ್ರ ಸರ್ಕಾರವು ವಿಮಾನವನ್ನು ನೀಡಲು ನಿರಾಕರಿಸಿದ್ದು ಅವರ ಹತ್ಯೆಗೆ ಕಾರಣ ಎಂದು ನೇರ ಆರೋಪ ಮಾಡಿದ್ದರು. ಇದನ್ನು ಮೋದಿಯವರು ಗಮನಕ್ಕೆ ತಂದಾಗ ಅವರು “ತುಮ್ ಅಭಿ ಚುಪ್ ರಹೋ (ನೀನೂ ಈಗ ಸುಮ್ಮನಿರು)” ಎಂದು ಹೇಳಿದ್ದರು ಎಂದು ಮಲಿಕ್ ಹೇಳಿದ್ದರು.
ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸತ್ಯಪಾಲ್ ಮಲಿಕ್ ವಿರುದ್ಧ ಸಮನ್ಸ್ ಜಾರಿ ಮಾಡಿತು.
ಸತ್ಯಪಾಲ್ ಮಲಿಕ್ ಅವರ ಆರೋಪಗಳನ್ನು ಉಲ್ಲೇಖಿಸಿ ರಣಬೀರ್ ಸಿಂಗ್, “ಇದಾಗಿ ನಾಲ್ಕು ವರ್ಷಗಳು ಕಳೆದಿವೆ, ಆದರೆ ಮೋದಿ ಸರ್ಕಾರವು ಹೊಣೆಗಾರಿಕೆಯನ್ನು ಸರಿಪಡಿಸಲು ವಿಫಲವಾಗಿದೆ. ಚುನಾವಣೆ ಗೆಲ್ಲುವುದೊಂದೇ ಅವರ ಆದ್ಯತೆ. ಸಂಸತ್ ಚುನಾವಣೆಗೂ ಮುನ್ನ ಈ ಬಾರಿಯೂ ಇದೇ ರೀತಿಯ ದಾಳಿಗಳು ನಡೆಯಬಹುದು. ಈ ದೇಶದ ಜನರು ಎಚ್ಚರದಿಂದಿರಬೇಕು” ಎಂದು ಕೇಂದ್ರ ಸರ್ಕಾರವನ್ನು ಆರೋಪಿಸಿದ್ದಾರೆ.
“ಇದರ ಬದಲು ಅವರ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಿಟ್ಟು ಬಾಯಿಮುಚ್ಚಿಸುವ ಪ್ರಯತ್ನವಾಗುತ್ತಿದೆ,” ಎಂದು ಮಲಿಕ್ ಅವರಿಗೆ ಸಿಬಿಐ ಕಳಿಸಿರುವ ಸಮನ್ಸ್ ಉಲ್ಲೇಖಿಸಿ ಸಿಂಗ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ವೇಳೆ 40 ಸಿಆರ್‌ಪಿಎಫ್ ಯೋಧರ ಹತ್ಯೆ ಮತ್ತು ಬಾಲಾಕೋಟ್‌ನಲ್ಲಿ ನಡೆದ ಐಎಎಫ್ ದಾಳಿಯನ್ನು ಮೋದಿ ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಮತ್ತು ಮತದಾರರು ತಮ್ಮ ಮತವನ್ನು ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿಗೆ ಹತರಾದ ವೀರ ಯೋಧರಿಗೆ ಅರ್ಪಿಸುವಂತೆ ಕೇಳಿಕೊಂಡಿದ್ದರು ಎಂದು ಮಲಿಕ್ ಹೇಳಿದ್ದರು. ಪುಲ್ವಾಮಾ ದಾಳಿಯು 2019 ರ ಸಂಸತ್ ಚುನಾವಣೆಗೆ ಎಂಟು ವಾರಗಳ ಮೊದಲು ನಡೆದಿತ್ತು