ಕಲಬುರಗಿ : ಪಿಎಸ್ಐ ಹಗರಣದಲ್ಲಿ (PSI Scam) ಸಿಲುಕಿದ್ದ ಬಿಜೆಪಿ ಕಾರ್ಯಕರ್ತೆ (BJP) ದಿವ್ಯಾ ಹಾಗರಗಿ (Divya Hagaragi) ಮತ್ತೆ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. PSI ಪರೀಕ್ಷೆ ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಮನೆ ಮೇಲೆ ಸಿಸಿಬಿ ದಾಳಿ ಮಾಡಿದೆ. ಮನೆಯಲ್ಲಿ ಇಸ್ಪೀಟ್ ಆಡುತ್ತಿದ್ದಾಗ CCB ದಾಳಿ ಮಾಡಿ ಶಾಕ್ ಕೊಟ್ಟಿದೆ. ದಿವ್ಯಾ ಹಾಗರಗಿ ಮನೆಯಲ್ಲಿ ಗುಂಪು ಕಟ್ಟಿ ಜೂಜಾಟ ಆಡಲಾಗುತ್ತಿತ್ತು. ಸಿಸಿಬಿ ದಾಳಿ ವೇಳೆ 42 ಸಾವಿರ ನಗದು ಜಪ್ತಿ ಮಾಡಲಾಗಿದ್ದು, 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರೋ ದಿವ್ಯ ಹಾಗರಗಿ ಮನೆ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ರು. ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜು ಲೆಂಗಟಿ, ರವಿ ಮಾನಕರ್, ಭಗವಾನ್, ಸಂಗಮೇಶ ನಾಗನಹಳ್ಳಿ, ಶಿವಶರಣಪ್ಪ, ಮಲ್ಲಿನಾಥ್ ಮಂಗಲಗಿ ಖಾಕಿ ಬಲೆಗೆ ಬಿದ್ದಿದ್ದಾರೆ.
ದಿವ್ಯಾ ಹಾಗರಗಿ – ಯಾರೀಕೆ?
2020ರಲ್ಲಿ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಒಟ್ಟು 545 ಅಭ್ಯರ್ಥಿಗಳ ಪೈಕಿ ಕಲಬುರಗಿ ಜಿಲ್ಲೆಯಿಂದಲೇ 92 ಅಭ್ಯರ್ಥಿಗಳು ಆಯ್ಕೆಯಾಗಿದ್ರು. ಆದ್ರೆ ಇವರಲ್ಲಿ ಅಕ್ರಮವಾಗಿ ಪಾಸ್ ಆದವರು ಎಷ್ಟು ಮಂದಿ ಎಂಬುದರ ಕುರಿತಾಗಿಯೂ ತನಿಖೆ ನಡೆದಿತ್ತು.
ಕಲಬುರಗಿ ಜಿಲ್ಲೆಯ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆದ ಬರೋಬ್ಬರಿ 11 ಅಭ್ಯರ್ಥಿಗಳು ಪಾಸ್ ಆಗಿದ್ದರು. ಇವರೆಲ್ಲರೂ ಅಕ್ರಮವಾಗಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದಲ್ಲಿ ಇದೇ ದಿವ್ಯಾ ಹಾಗರಗಿ ಭಾಗಿಯಾಗಿದ್ದರು ಎಂದು ಹೇಳಲಾಗಿತ್ತು.
16 ಪಿಎಸ್ಐಗಳ ನೇಮಕಕ್ಕೆ ದಿವ್ಯಾ ಕಾರಣ?
2016-17ರ ಬ್ಯಾಚ್ ನೇಮಕಾತಿಯಲ್ಲೂ ಅಕ್ರಮವೆಸಗಿರುವ ಆರೋಪ ಕೇಳಿ ಬಂದಿತ್ತು. ಇದೇ ದಿವ್ಯಾ ಹಾಗರಗಿ ಮತ್ತು R.D. ಪಾಟೀಲ್ ಅವರು ಅಕ್ರಮವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಯಾದಗಿರಿಯ ಶ್ರೀನಿವಾಸ್ ಕಟ್ಟಿ ಅನ್ನೋರು 16 ಅಭ್ಯರ್ಥಿಗಳು ಹಣ ಕಟ್ಟಿ ನೇಮಕವಾಗಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ರು. ಆ 16 PSIಗಳ ಹೆಸರು, ಮೊಬೈಲ್ ಸಂಖ್ಯೆ ಸಮೇತ ದೂರಿನ ಪತ್ರ ಸಲ್ಲಿಸಿದ್ರು. 2016-17 ಪಿಎಸ್ಐ ಬ್ಯಾಚ್ ನಲ್ಲಿಯೂ ಬ್ಲೂಟೂತ್ ಡಿವೈಸ್ ಮತ್ತು ಪತ್ರಿಕೆ ಸೋರಿಕೆ ಮಾಡಿ ಅಕ್ರಮ ಮಾಡಿದ್ದಾರೆ. ಆಯ್ಕೆ ಡೀಲ್ ಗೆ 16 ಅಭ್ಯರ್ಥಿಗಳು ತಲಾ 40 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಸ್ವತಃ ನೊಂದ ಅಭ್ಯರ್ಥಿ ಎಂದು ಕರೆದುಕೊಂಡಿದ್ದ ಯಾದಗಿರಿಯ ಶ್ರೀನಿವಾಸ ಕಟ್ಟಿ ಸಿಎಂಗೆ ದೂರು ನೀಡಿದ್ದರು.
ಇಷ್ಟೆಲ್ಲಾ ಅಕ್ರಮ ಎಸಗಿದ ಆರೋಪ ಹೊತ್ತಿದ್ದ ದಿವ್ಯಾ ಹಾಗರಗಿ ಇದೀಗ ಇಸ್ಪೀಟ್ ಆಡಿಸ್ತಿದ್ರಂತೆ. ಅದರಲ್ಲೂ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷನೂ ಇಸ್ಪೀಟ್ ಆಡ್ತಾ ಇದ್ದ ಅನ್ನೋದು ದುರಂತ.