ಸಾರಿಗೆ ದರ ಹೆಚ್ಚಳ ಪ್ರಸ್ತಾಪಕ್ಕೆ ಜನಾಕ್ರೋಶ – ಗಂಡಸರಿಗೆ ಡಬಲ್ ಚಾರ್ಜ್

ಬೆಂಗಳೂರು : ರಾಜ್ಯದ (Karnataka) ಜನಸಾಮಾನ್ಯರ ಜೇಬಿಗೆ ಮತ್ತೊಮ್ಮೆ ಕತ್ತರಿ ಬೀಳುವ ಲಕ್ಷಣಗಳು ದಟ್ಟವಾಗಿವೆ. ಈಗಾಗಲೇ ವಿವಿಧ ಆರ್ಥಿಕ ಸಂಕಷ್ಟಗಳಿಂದ ತತ್ತರಿಸುತ್ತಿರುವ ಸಾರಿಗೆ ನಿಗಮಗಳು ಇದೀಗ ಬಸ್ ಟಿಕೆಟ್ (Bus Ticket) ದರವನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿವೆ. ‌ಇದರಿಂದ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಫ್ರೀ ಟಿಕೆಟ್‌ ಲಭಿಸಿದರೂ ಗಂಡಸರಿಗೆ ಮಾತ್ರ ಡಬಲ್‌ ಚಾರ್ಜ್‌ನ ಹೊರೆ ಎದುರಾಗುವ ಸಾಧ್ಯತೆ ಇದೆ.

ಕಳೆದ ವರ್ಷದ ಜನವರಿಯಲ್ಲಷ್ಟೇ ಶೇ 15 ರಷ್ಟು ದರ ಏರಿಕೆ ಮಾಡಿದ್ದ ನಿಗಮಗಳು, ಇದೀಗ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಮತ್ತೆ ಬೆಲೆ ಏರಿಕೆಗೆ ಮುಂದಾಗಿರುವುದು ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಷ್ಟು ದುಬಾರಿಯಾಗಿದೆ. ಇದರಿಂದಾಗಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಸುಮಾರು 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ವಾರ್ಷಿಕ ನಷ್ಟದ ಪ್ರಮಾಣ 480 ಕೋಟಿ ರೂಪಾಯಿ ದಾಟುವ ಆತಂಕ ಎದುರಾಗಿದ್ದು, ದರ ಏರಿಕೆ ಮಾಡದೆ ಸಂಸ್ಥೆಗಳನ್ನು ನಡೆಸುವುದು ಅಸಾಧ್ಯ ಎನ್ನುವುದು ಅಧಿಕಾರಿಗಳ ವಾದವಾಗಿದೆ.

ಇಂಧನ ದರ ಏರಿಕೆಯ ಜೊತೆಗೆ ಸಾರಿಗೆ ಸಂಸ್ಥೆಗಳ ಮೇಲೆ ಇತರೆ ಆರ್ಥಿಕ ಹೊರೆಗಳೂ ಹೆಚ್ಚಾಗಿವೆ. ಬರುವ ಜುಲೈ ತಿಂಗಳಿನಿಂದ ನೌಕರರಿಗೆ ಶೇಕಡಾ 12.5 ರಷ್ಟು ಹೊಸ ವೇತನ ನೀಡಬೇಕಾಗಿದ್ದು, ಹಳೆಯ ವೇತನ ಬಾಕಿ ಮೊತ್ತದಲ್ಲಿ ಇನ್ನೂ 821 ಕೋಟಿ ರೂಪಾಯಿಗಳನ್ನು ಪಾವತಿಸಬೇಕಿದೆ. ಇದರೊಂದಿಗೆ, ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ನಿಗಮಗಳಿಗೆ ಬರಬೇಕಿರುವ ಸುಮಾರು 5,000 ಕೋಟಿ ರೂಪಾಯಿಗಳ ಅನುದಾನವೂ ಬಾಕಿ ಉಳಿದಿದೆ. ಈ ಎಲ್ಲಾ ಕಾರಣಗಳಿಂದಾಗಿ ಸಾರಿಗೆ ಇಲಾಖೆ ತೀವ್ರ ಆರ್ಥಿಕ ಇಕ್ಕಟ್ಟಿಗೆ ಸಿಲುಕಿದೆ.

ಇತ್ತ ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಷಕ್ಕೊಮ್ಮೆ ದರ ಹೆಚ್ಚಿಸಿದರೆ ಬಡ ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದು ಹೇಗೆ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಟಿಕೆಟ್ ದರವನ್ನು ಎಲ್ಲರಿಗೂ ಹೆಚ್ಚಿಸುವ ಬದಲು ಸದ್ಯ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳೆಯರಿಂದ ಕನಿಷ್ಠ ಅರ್ಧದಷ್ಟಾದರೂ ಹಣ ಪಡೆದರೆ ನಿಗಮಗಳ ನಷ್ಟ ತುಂಬಬಹುದು ಎಂದು ಸಾರ್ವಜನಿಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸದ್ಯ ಸಾರಿಗೆ ಸಂಸ್ಥೆಗಳ ಈ ಮನವಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು