ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಇನ್ನು ಕೆಲವೇ ನಿಮಿಷಗಳಲ್ಲಿ ವೆಬ್‌ಸೈಟ್ ಗಳಲ್ಲಿ ಪ್ರಕಟವಾಗಲಿದೆ. ಈ ನಡುವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಎಂದಿನಂತೆ ಈ ಬಾರಿಯೂ ಸಹ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
ಈ ಬಾರಿ 73.4% ಮಕ್ಕಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 57%, ಅನುದಾನಿತ ಕಾಲೇಜುಗಳಲ್ಲಿ 60% , ಅನುದಾನ ರಹಿತ ಕಾಲೇಜುಗಳಲ್ಲಿ 90%, ವಸತಿ ಶಾಲೆಗಳಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದೆ ಎಂದು ಶಿಕ್ಷಣ ಸಚಿವರು ತಿಳಿಸಿದರು.
ಪಿಯುಸಿ ಪರೀಕ್ಷೆಯ ದ್ವಿತೀಯ ಮತ್ತು ತೃತೀಯ ಪರೀಕ್ಷೆಗಳನ್ನು ಈ ಬಾರಿ ಕಳೆದ ಬಾರಿಗಿಂತ ಬೇಗನೆ ಮಾಡುತ್ತಿದ್ದೇವೆ. ನಾವು ಅನುತ್ತೀರ್ಣರಾದ ಮಕ್ಕಳನ್ನು ಕಡೆಗಣಿಸುವುದಿಲ್ಲ. ಅವರ ಭವಿಷ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಪರೀಕ್ಷೆ ಪ್ರಕ್ರಿಯೆ ಇದುವರೆಗೂ ಪೂರ್ಣವಾಗಿಲ್ಲ. ವಿದ್ಯಾರ್ಥಿಗಳಿಗೆ ಇನ್ನೂ ಎರಡು ಬಾರಿ ಇದೇ ಶೈಕ್ಷಣಿಕ ವರ್ಷದಲ್ಲಿ ಅವಕಾಶ ನೀಡಲಾಗುತ್ತದೆ. ಹೀಗಾಗಿ ಅನುತ್ತೀರ್ಣಗೊಂಡ ಮಕ್ಕಳು ಆತಂಕ ಪಡಬೇಕಿಲ್ಲ ಎಂದು ಶಿಕ್ಷಣ ಸಚಿವರು ಹೇಳಿದರು.