Home ಬೆಂಗಳೂರು ಸಾಮಾಜಿಕ ಜಾಲತಾಣದಲ್ಲಿ ಹರೀಶ್ ಕುಮಾರ್‌ಗೆ ಜೀವಬೆದರಿಕೆ: ಪುನೀತ್ ಕೆರೆಹಳ್ಳಿ ವಿರುದ್ಧ ದೂರು

ಸಾಮಾಜಿಕ ಜಾಲತಾಣದಲ್ಲಿ ಹರೀಶ್ ಕುಮಾರ್‌ಗೆ ಜೀವಬೆದರಿಕೆ: ಪುನೀತ್ ಕೆರೆಹಳ್ಳಿ ವಿರುದ್ಧ ದೂರು

0

ಬೆಂಗಳೂರು: ಕರ್ನಾಟಕ ರಣಧೀರ ಪಡೆಯ ಪ್ರಮುಖರಾದ ಶ್ರೀ ಬೈರಪ್ಪ ಹರೀಶ್ ಕುಮಾರ್ ರಾಜಾಧ್ಯಕ್ಷ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುವ ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ದಾಖಲಾಗಿದೆ.

ಕಳೆದ ಮಾರ್ಚ್ 12ರಂದು ಹರೀಶ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪುನೀತ್ ಕೆರೆಹಳ್ಳಿ ಅವರ ನಡೆಯನ್ನು ಖಂಡಿಸಿ ಪೋಸ್ಟ್ ಒಂದನ್ನು ಮಾಡಿದ್ದರು. ಈ ಹಿಂದೆ ವಲಸಿಗರ ವಿರುದ್ಧ ಕಾನೂನುಬಾಹಿರವಾಗಿ ಹಲ್ಲೆ ನಡೆಸಿದ ಆರೋಪ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ನೈತಿಕ ಪೊಲೀಸ್‌ಗಿರಿ’ ಪ್ರದರ್ಶಿಸುತ್ತಿರುವ ಪುನೀತ್ ಕೆರೆಹಳ್ಳಿ ಅವರ ವರ್ತನೆಯನ್ನು ಹರೀಶ್ ಕುಮಾರ್ ಟೀಕಿಸಿದ್ದರು. ಈ ಪೋಸ್ಟ್‌ನಿಂದ ಕೆರಳಿದ ಪುನೀತ್ ಕೆರೆಹಳ್ಳಿ, ಹರೀಶ್ ಕುಮಾರ್ ಹಾಗೂ ಅವರ ತಾಯಿಯ ವಿರುದ್ಧ ಅತ್ಯಂತ ಹೀನಾಯ ಪದಬಳಕೆ ಮಾಡಿ ನಿಂದಿಸಿದ್ದಾರೆ ಎನ್ನಲಾಗಿದೆ.

ನಿಂದನೆಯಷ್ಟೇ ಅಲ್ಲದೆ, ಹರೀಶ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸುವುದಾಗಿ ಮತ್ತು ಅವರನ್ನು ಕೊಲೆ ಮಾಡುವುದಾಗಿ ಪುನೀತ್ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. “ಈ ರೀತಿಯ ನಡೆ ನನ್ನ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವುದರ ಜೊತೆಗೆ ನನ್ನ ಕುಟುಂಬದ ಮಾನಹಾನಿಗೂ ಕಾರಣವಾಗಿದೆ ಮತ್ತು ನನಗೆ ಪ್ರಾಣಭೀತಿ ಉಂಟುಮಾಡಿದೆ” ಎಂದು ಹರೀಶ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ಪುನೀತ್ ಕೆರೆಹಳ್ಳಿ ಈ ಹಿಂದೆಯೂ ಹರೀಶ್ ಕುಮಾರ್ ಅವರ ವಿರುದ್ಧ ಜಾತಿ ನಿಂದನೆ ಮಾಡಿದ್ದ ಆರೋಪದ ಮೇಲೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊ.ಸಂ-428/2023) ದಾಖಲಾಗಿತ್ತು. ಆ ಪ್ರಕರಣದಲ್ಲಿ ಸುಮಾರು ಒಂದು ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದ ಪುನೀತ್, “ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ” ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿ ಜಾಮೀನು ಪಡೆದುಕೊಂಡಿದ್ದರು. ಆದರೆ, ನ್ಯಾಯಾಲಯಕ್ಕೆ ನೀಡಿದ ಭರವಸೆಯನ್ನು ಮೀರಿ ಈಗ ಮತ್ತೆ ಅದೇ ರೀತಿಯ ಅವಹೇಳನಕಾರಿ ಪೋಸ್ಟ್ ಮತ್ತು ವಿಡಿಯೋಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಹರೀಶ್ ಕುಮಾರ್ ದೂರಿದ್ದಾರೆ.

ಕಳೆದ ಬಾರಿ ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಹೋದಾಗಲೂ ಈ ವಿಷಯವನ್ನು ನ್ಯಾಯಮೂರ್ತಿಗಳ ಗಮನಕ್ಕೆ ತರಲಾಗಿತ್ತು. ಆಗ ನ್ಯಾಯಮೂರ್ತಿಗಳು ಮೌಖಿಕವಾಗಿ ಪೊಲೀಸರಿಗೆ ಸೂಚನೆ ನೀಡಿದ್ದರೂ ಸಹ, ಪುನೀತ್ ತನ್ನ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

You cannot copy content of this page

Exit mobile version