Home ಜನ-ಗಣ-ಮನ ನಾಡು-ನುಡಿ ಪುನೀತ್ ರಾಜಕುಮಾರ್ ಈ ಪ್ರಶಸ್ತಿಗೆ ಅರ್ಹರಾಗಿರಲಿಲ್ಲವೇ? ಇದು ಕನ್ನಡಿಗರ ಕಣ್ಮಣಿಗೆ ಮಾಡಿದ ಅಪಮಾನವಲ್ಲವೇ?

ಪುನೀತ್ ರಾಜಕುಮಾರ್ ಈ ಪ್ರಶಸ್ತಿಗೆ ಅರ್ಹರಾಗಿರಲಿಲ್ಲವೇ? ಇದು ಕನ್ನಡಿಗರ ಕಣ್ಮಣಿಗೆ ಮಾಡಿದ ಅಪಮಾನವಲ್ಲವೇ?

0

ಅಕ್ಟೋಬರ್ 20 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಕುಲಕೋಟಿಯ ಕಣ್ಮಣಿ ಡಾ.ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಯಿತು. ಆದರೆ ಇಲ್ಲಿ ಅವಮಾನಕರ ಪ್ರಸಂಗವೆಂದರೆ ಈವರೆಗೂ ಈ ಪ್ರಶಸ್ತಿಗಿದ್ದ ಕೆಲವು “ಮಾರ್ಗಸೂಚಿ ಗಳಿಗೆ ವಿನಾಯಿತಿ ನೀಡಿ”  ಅಂದ್ರೆ ಮಾನದಂಡಗಳನ್ನು ಸಡಿಲಿಸಿ ಈ ಪ್ರಶಸ್ತಿಯನ್ನು ಪುನೀತ್ ಅವರಿಗೆ ನೀಡಲಾಗುತ್ತಿದೆ ಎಂದು ಹೊರಡಿಸಿರುವ ಸರ್ಕಾರದ ಆದೇಶ ವಿವಾದಕ್ಕೆ ಕಾರಣ !

1992 ರಲ್ಲಿ ಡಾ.ರಾಜ್ ಕುಮಾರ್ ಅವರಿಗಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿ ಮತ್ತು ಶಿವರಾಜ್ ಕುಮಾರ್ ಅವರಿಗೆ ಹೆಣ್ಣು ಕೊಟ್ಟ ಮಾವ ಎಸ್ ಬಂಗಾರಪ್ಪನವರು ರೂಪಿಸಿದ್ದರು. ಆದರೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಓಂ ಪ್ರಥಮವಾಗಿ ಪಡೆಯಲು ರಾಜ್ ಕುಮಾರ್ ನಿರಾಕರಿಸಿದರೆನ್ನಲಾಗಿ ಅಂದು ರಾಷ್ಟ್ರಕವಿ ಕುವೆಂಪು ಅವರಿಗೆ ಮೊದಲ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದ ನಂತರ ಡಾ.ರಾಜ್ ಪ್ರಶಸ್ತಿ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದರು. ಅಂದು ಬಂಗಾರಪ್ಪನವರು ನ ಭೂತೋ ನ ಭವಿಷ್ಯತಿ ಅನ್ನುವಂತೆ ವಿಧಾನಸೌಧದ ಮುಂಭಾಗ ಕಾರ್ಯಕ್ರಮ ನಡೆಸಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.

ಬಂಗಾರಪ್ಪ ರಾಜ್ ಅವರ ಪ್ರಸಿದ್ಧ  ಗೀತೆ ಯಾರೇ ಕೂಗಾಡಲಿ ಎಮ್ಮೆ ನಿನಗೆ ಸಾಟಿಯಿಲ್ಲ ಹಾಡಿ ರಂಜಿಸಿದ್ದರು. ಈಗ ಅದೇ ವೇದಿಕೆಯಲ್ಲಿ ಅವರ ಪುತ್ರನ ಹೆಸರಿನಲ್ಲಿ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರದಾನಿಸಲಾಗುತ್ತಿದೆ.

ಎಲ್ಲಾ ರಂಗಗಳಲ್ಲೂ ವಿಫಲವಾಗಿರುವ ಈ ಸರ್ಕಾರ ಚಲನಚಿತ್ರ ರಂಗದ ಮೂಲಕ ಅಭಿಮಾನಿ ದೇವರುಗಳ ಮನ ಒಲಿಸಲು ಹೊರಟಂತಿದೆ.

ಅದಕ್ಕಾಗಿಯೇ ಹೊರ ರಾಜ್ಯದ ಸೂಪರ್ ಸ್ಟಾರ್ ಗಳನ್ನು ಕರೆಸಿ ವಿಧಾನಸೌಧದ ಮುಂಭಾಗದಲ್ಲಿ ನಿಲ್ಲಿಸಿ ಮಾತನಾಡಿಸಿ ರಾಜ್ಯದ ತಮಿಳು ತೆಲುಗು ಸೇರಿದಂತೆ ಇತರೆ ಅಭಿಮಾನಿಗಳ ಮನಸಲ್ಲಿ ಈ ಸರ್ಕಾರದ ಬಗ್ಗೆ ಕಿಂಚಿತ್ ಅಭಿಮಾನ ಮೂಡಿಸಿಕೊಳ್ಳುವ ಪ್ರಯತ್ನವಿದು.

ಸರ್ಕಾರದ ಹಲವಾರು ಕೆಟ್ಟ ನಿರ್ಧಾರಗಳಿಂದ ಜನಮಾನಸದಿಂದ ದೂರ ಸರಿಯತ್ತಿರುವ ಸಂದರ್ಭದಲ್ಲಿ ಇಂತಹ ಒಂದು ಅವಕಾಶವನ್ನು ಸೃಷ್ಟಿಸಿಕೊಳ್ಳಲು ಕರ್ನಾಟಕ ರತ್ನ ಪ್ರಶಸ್ತಿ ಪಡೆಯಲು ಇರಬೇಕಾದರೆ ಮಾರ್ಗಸೂಚಿಗಳನ್ನು ಈ ಪ್ರಕರಣದಲ್ಲಿ ಸಡಿಲಗೊಳಿಸಲಾಗಿದೆ ಎಂದು ಹೇಳಿರುವ ಕಾರಣ ಸಹಜವಾಗಿ ಅನುಮಾನ ಮತ್ತು ಅವಮಾನ ಒಡಮೂಡಿದೆ.

ಪುನೀತ್ ರಾಜಕುಮಾರ್ ಈ ಪ್ರಶಸ್ತಿಗೆ ಅರ್ಹರಾಗಿರಲಿಲ್ಲವೇ ? ಹಾಗಿದ್ದರೆ ಕರ್ನಾಟಕ ರತ್ನ ಪ್ರಶಸ್ತಿಯ  “ಮಾರ್ಗಸೂಚಿಯಲ್ಲಿನ ಅಂಶಗಳಿಗೆ ವಿನಾಯಿತಿ ನೀಡಿ” ಎಂದು ನಮೂದಿಸುವ ಅಗತ್ಯವೇನಿತ್ತು. ಈ ಪ್ರಶಸ್ತಿಯ ಮಾರ್ಗಸೂಚಿಯಾದರೂ ಏನು?

ಕರ್ನಾಟಕದಲ್ಲಿ ಹುಟ್ಟಿ ರಾಜ್ಯ,ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಂದರೆ ಸಾಂಸ್ಕೃತಿಕ, ಚಲನಚಿತ್ರ , ಕೃಷಿ,ಜನಪದ, ವೈಜ್ಞಾನಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ಗಣ್ಯರಿಗೆ ಕರ್ನಾಟಕ ಸರ್ಕಾರ ನಿರ್ಧರಿಸುವ ಗಣ್ಯವ್ಯಕ್ತಿಗಳಿಗೆ ಕರ್ನಾಟಕ ಪ್ರಶಸ್ತಿಯನ್ನು ನೀಡುತ್ತ ಬರಲಾಗುತ್ತಿದೆ. ಅಂದ ಮೇಲೆ ಸಮಸ್ಯೆ ಏನು? ಈ ಸರ್ಕಾರೀ ಆದೇಶ ಹೊರಡಿಸಿದವರಿಗೆ ? ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಗೀತಾಬಾಯಿ ಹೊರಡಿಸಿರುವ ಈ ಆದೇಶದಲ್ಲಿ ಅನಾವಶ್ಯಕವಾದ ಈ ಅಂಶವನ್ನು ಸೇರಿಸಿದ್ದೇಕೆ ? ಮಾರ್ಗಸೂಚಿ ಅಂಶಗಳಿಗೆ ವಿನಾಯಿತಿ ನೀಡಿ ಪುನೀತ್ ರಾಜಕುಮಾರ್ ಅವರಿಗೆ ನೀಡಲಾಗುತ್ತಿದೆ ಅಂದ್ರೆ ಏನರ್ಥ ಇಲ್ಲೂ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಈ ಪ್ರಶಸ್ತಿ ಪಡೆಯಲು ಪುನೀತ್ ಅರ್ಹರಾಗಿರಲಿಲ್ಲವೇ ? ಅವರು ಆರು ತಿಂಗಳ ಮಗುವಾಗಿನಿಂದ ನಲವತ್ತೈದು ವರ್ಷಗಳವರೆಗೆ ಬಾಲನಟ, ರಾಷ್ಟ್ರಪ್ರಶಸ್ತಿ ವಿಜೇತ, ಸಮಾಜ ಸೇವಾಕರ್ತ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲವೇ?

ಅಕಸ್ಮಾತ್ ಪುನೀತ್ ಬದುಕಿದ್ದರೇ ಕರ್ನಾಟಕ ರತ್ನ ಪ್ರಶಸ್ತಿಯನ್ನು ಈ ಸರ್ಕಾರ ಕೊಡುತ್ತಿತ್ತಾ ? ಖಂಡಿತಾ ಇಲ್ಲ! ಹಾಗಾಗಿ ಇದೊಂದು ಗಿಮಿಕ್ ಅಭಿಮಾನಿಗಳ ಅಭಿಮಾನದ ದುರುಪಯೋಗ. ಅಂತಹ ಅಭಿಮಾನ ಸರ್ಕಾರಕ್ಕಿದ್ದರೆ ಈಗಲೇ ಮಾರ್ಗಸೂಚಿಗಳಿಗೆ ವಿನಾಯಿತಿ ನೀಡಿ ಎಂಬ ಅಂಶವನ್ನು ಡಿಲೀಟ್ ಮಾಡಿ ನೇರವಾಗಿ ಆದೇಶ ಹೊರಡಿಸಬೇಕು ?

ಪ್ರಶಸ್ತಿಗಳಿಂದ ವ್ಯಕ್ತಿಗೆ ಹೆಸರು ಬರುವ ಬದಲು ವ್ಯಕ್ತಿಯಿಂದ ಆ ಪ್ರಶಸ್ತಿಯ ಘನತೆ ಹೆಚ್ಚಬೇಕಲ್ಲವೇ ?

ವೈ ಜಿ ಅಶೋಕ್ ಕುಮಾರ್

You cannot copy content of this page

Exit mobile version