Home ದೇಶ ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಭುಗಿಲೆದ್ದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುವು: ಲಾಠಿಚಾರ್ಜ್ ಬೆನ್ನಲ್ಲೇ ಪೊಲೀಸರ...

ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಭುಗಿಲೆದ್ದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುವು: ಲಾಠಿಚಾರ್ಜ್ ಬೆನ್ನಲ್ಲೇ ಪೊಲೀಸರ ವಾಹನಗಳಿಗೆ ಬೆಂಕಿ

0

ಪಂಜಾಬ್‌ನ ಫಗ್ವಾಡಾದಲ್ಲಿರುವ ಖ್ಯಾತ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ (LPU) ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕ್ಯಾಂಪಸ್ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ಸಂಭವಿಸಿದ್ದು, ಆಕ್ರೋಶಗೊಂಡ ವಿದ್ಯಾರ್ಥಿಗಳು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ರಾತ್ರಿ ವೈರಲ್ ಆದ ನಂತರ ಸಾವಿರಾರು ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದರು. ಕ್ಯಾಂಪಸ್‌ನಲ್ಲಿ ವ್ಯಾಪಕ ಧ್ವಂಸ ಕೃತ್ಯ ನಡೆಸಿದ ವಿದ್ಯಾರ್ಥಿಗಳು ಒಂದು ಕಟ್ಟಡದ ಭಾಗಕ್ಕೆ ಬೆಂಕಿ ಹಚ್ಚಿದರು. ನಂತರ ದೆಹಲಿ-ಅಮೃತಸರ ಹೆದ್ದಾರಿಯಲ್ಲಿ ಧರಣಿ ನಡೆಸಿ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದರು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪೊಲೀಸರ ವಾಹನಗಳನ್ನು ಸುಟ್ಟುಹಾಕಿದ್ದಾರೆ.

ಈ ಬೆಳವಣಿಗೆಯ ಕುರಿತು ಸ್ಪಷ್ಟನೆ ನೀಡಿರುವ ಎಲ್‌ಪಿಯು ಡೀನ್ ಸೌರಭ್ ಲಖನ್‌ಪಾಲ್, ಇಡೀ ಪ್ರಕರಣವು ಕೇವಲ ಆಧಾರರಹಿತ ವದಂತಿಗಳಿಂದ ಕೂಡಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಅನುಮಾನ ಪರಿಹರಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಲಾಗಿದ್ದು, ಅವರು ಕೇಳಿದ ಕೊಠಡಿಗಳನ್ನೂ ಪರಿಶೀಲಿಸಲು ಬಿಡಲಾಗಿದೆ; ಆದರೂ ಯಾವುದೇ ವಿದ್ಯಾರ್ಥಿನಿಯ ಹೆಸರು ಅಥವಾ ಹಾಸ್ಟೆಲ್ ಕುರಿತಾದ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.

ಕ್ಯಾಂಪಸ್‌ನ ಶಾಂತಿಯುತ ವಾತಾವರಣವನ್ನು ಹಾಳುಮಾಡಲು ಹೊರಗಿನ ಸಮಾಜಘಾತುಕ ಶಕ್ತಿಗಳು ನಡೆಸಿದ ವ್ಯವಸ್ಥಿತ ಪಿತೂರಿ ಇದಾಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಲ್ಲಿ (SIT) ಐವರು ವಿದ್ಯಾರ್ಥಿಗಳನ್ನೂ ಸೇರಿಸಿಕೊಳ್ಳಲಾಗಿದೆ ಎಂದು ಉಪಕುಲಪತಿ ಡಾ. ಜಸ್ಪಾಲ್ ಸಿಂಗ್ ಸಂಧು ತಿಳಿಸಿದ್ದಾರೆ.

ಮತ್ತೊಂದೆಡೆ, ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಜ್ ಕುಮಾರ್ ವೇರ್ಕಾ ಅವರು ಈ ಘಟನೆಗೆ ಆಡಳಿತದ ಸಂಪೂರ್ಣ ವೈಫಲ್ಯವೇ ಕಾರಣ ಎಂದು ಕಿಡಿಕಾರಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ವಾಹನಗಳೇ ಬೆಂಕಿಗೆ ಆಹುತಿಯಾಗಿ, ವಿದ್ಯಾರ್ಥಿಗಳು ಗಾಯಗೊಂಡಿದ್ದರೂ ಸರ್ಕಾರಗಳು ಮೂಕಪ್ರೇಕ್ಷಕನಾಗಿ ಉಳಿದಿವೆ ಎಂದು ಆರೋಪಿಸಿದ ಅವರು, ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಿ ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ನೂರಾರು ಟ್ರಕ್‌ಗಳು ಮತ್ತು ಪ್ರಯಾಣಿಕರು ಗಂಟೆಗಳ ಕಾಲ ಆತಂಕದಲ್ಲೇ ಸಿಲುಕಿಕೊಳ್ಳುವಂತಾಯಿತು.

You cannot copy content of this page

Exit mobile version