ಉತ್ತರ ಪ್ರದೇಶದಲ್ಲಿ ಸುರಿದ ಭೀಕರ ಮಳೆ ಮತ್ತು ಬಿರುಗಾಳಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಕಳೆದ 48 ಗಂಟೆಗಳಲ್ಲಿ ಮಳೆ ಸಂಬಂಧಿತ ದುರಂತಗಳಿಗೆ ಬಲಿಯಾದವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಇದೇ ವೇಳೆ 46ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸೆಪ್ಟೆಂಬರ್ 25ರಿಂದ ಸೆಪ್ಟೆಂಬರ್ 27ರ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 97.6 ಮಿಮೀ ಮಳೆಯಾಗಿದೆ; ವಾಡಿಕೆಯಂತೆ ಈ ಅವಧಿಯಲ್ಲಿ ಕೇವಲ 4.5 ಮಿಮೀ ಮಳೆಯಾಗಬೇಕಿತ್ತು. ರಾಜ್ಯದ ಒಟ್ಟು 75 ಜಿಲ್ಲೆಗಳ ಪೈಕಿ 56 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ ಸುರಿದಿದೆ ಎಂದು ಪರಿಹಾರ ಆಯುಕ್ತ ಋಷಿಕೇಶ್ ಭಾಸ್ಕರ್ ಯಶೋದ್ ತಿಳಿಸಿದ್ದಾರೆ.
ವರುಣನ ಆರ್ಭಟಕ್ಕೆ 1,020ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿದ್ದು, 107 ಜಾನುವಾರುಗಳು ಮೃತಪಟ್ಟಿವೆ. ಫರೂಖಾಬಾದ್‌ನಲ್ಲಿ ವಾಡಿಕೆಗಿಂತ ಶೇ. 7,385 ರಷ್ಟು ಅಧಿಕ ಮಳೆಯಾಗಿದ್ದರೆ, ಕನೌಜ್‌ನಲ್ಲಿ ಶೇ. 5,664, ಷಹಜಹಾನ್‌ಪುರದಲ್ಲಿ ಶೇ. 4,408 ಮತ್ತು ಮಹೋಬಾದಲ್ಲಿ ಶೇ. 4,100 ರಷ್ಟು ಹೆಚ್ಚು ಮಳೆಯಾಗಿದೆ. ಸದ್ಯ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದರೂ, ತೇರಾಯಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮತ್ತೊಂದೆಡೆ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೆರೆಯ ಒಡಿಶಾದಲ್ಲೂ ಪ್ರವಾಹದ ಭೀತಿ ಎದುರಾಗಿದೆ. ಮಹಾನದಿ ನದೀಪಾತ್ರದ ಮುಂಡಲಿ ಬ್ಯಾರೇಜ್ ಮೂಲಕ ಸೋಮವಾರ ಬೆಳಿಗ್ಗೆ ವೇಳೆಗೆ ಸುಮಾರು 8 ಲಕ್ಷ ಕ್ಯೂಸೆಕ್ಸ್ ನೀರು ಹರಿದುಬರುವ ಸಾಧ್ಯತೆಯಿದೆ ಎಂದು ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ದಿಲೀಪ್ ಕುಮಾರ್ ರಾವತ್ ಎಚ್ಚರಿಸಿದ್ದಾರೆ.
ಮಹಾನದಿಯ ಉಪನದಿಗಳಾದ ಕಾಠಜೋಡಿ, ಕುವಾಖೈ, ಲೂನಾ ಮತ್ತು ಚಿತ್ರೋತ್ಪಲ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಖುರ್ದಾ, ಕಟಕ್, ಪುರಿ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳ ತಗ್ಗು ಪ್ರದೇಶಗಳು ಮುಳುಗಡೆಯಾಗುವ ಆತಂಕದಲ್ಲಿದ್ದು, ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಉತ್ತರ ಒಡಿಶಾದ ವೈತರಣಿ, ಸಾಲಂದಿ ಮತ್ತು ಸುವರ್ಣರೇಖಾ ನದಿಗಳೂ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಇತ್ತ ಉತ್ತರಾಖಂಡದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಗಂಗಾ ನದಿಯಲ್ಲಿ ನೀರಿನ ಹರಿವು ಅಪಾಯಕಾರಿ ಮಟ್ಟ ತಲುಪಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಿಷಿಕೇಶದ ಮುನಿ-ಕಿ-ರೇತಿ ಪ್ರದೇಶದಲ್ಲಿ ಗಂಗಾ ನದಿಯ ಸಾಹಸ ಕ್ರೀಡೆಯಾದ ರಿವರ್ ರಾಫ್ಟಿಂಗ್ ಅನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ನದಿಯ ನೀರಿನ ಮಟ್ಟ ತಗ್ಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕವೇ ರಾಫ್ಟಿಂಗ್ ಪುನರಾರಂಭಿಸಲು ಅನುಮತಿ ನೀಡಲಾಗುವುದು ಎಂದು ಪ್ರವಾಸೋದ್ಯಮ ಅಧಿಕಾರಿ ಸೋಬತ್ ಸಿಂಗ್ ರಾಣಾ ತಿಳಿಸಿದ್ದಾರೆ.
