ಶೂಟಿಂಗ್ ಅಖಾಡಕ್ಕೆ ಇಳಿದ ವಿಜಯ್ ಸೇತುಪತಿ..ಪುರಿ ಜಗನ್ನಾಥ್ ಆಕ್ಷನ್ ಕಟ್
ಟಾಲಿವುಡ್ ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಜೋಡಿಯ ಬಹುನಿರೀಕ್ಷಿತ ಸಿನಿಮಾ ಇಂದು ಸೆಟ್ಟೇರಿದೆ. ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ಶುರುವಾಗಿದ್ದು, ಪ್ರಸ್ತುತ ವಿಜಯ್ ಸೇತುಪತಿ, ಸಂಯುಕ್ತಾ ಮತ್ತು ಇತರ ತಾರಾಬಳಗ ಒಳಗೊಂಡ ಪ್ರಮುಖ ಸನ್ನಿವೇಶಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಟ್ಸ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಸಹಯೋಗದಲ್ಲಿ ಚಾರ್ಮಿ ಕೌರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಈ ಚಿತ್ರದಲ್ಲಿ ನಟಿ ಸಂಯುಕ್ತ ಮೆನನ್, ಟಬು, ದುನಿಯಾ ವಿಜಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪ್ಯಾನ್-ಇಂಡಿಯಾ ಯೋಜನೆಯು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯ ಘಟಾನುಘಟಿ ಕಲಾವಿದರ ಎಂಟ್ರಿಯಿಂದಾಗಿ ಪಾತ್ರವರ್ಗದ ತೂಕ ಹೆಚ್ಚುತ್ತಿದೆ.