ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ 10 ಮಹಾನಗರ ಪಾಲಿಕೆಗಳ ನೌಕರರು ಇಂದಿನಿಂದ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಪಾಲಿಕೆ ಚಟುವಟಿಕೆಗಳು ಅನಿರ್ದಿಷ್ಟಾವಧಿ ತಾತ್ಕಾಲಿಕ ಬಂದ್ ಆಗಿರಲಿದೆ.
ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಏಳನೆ ವೇತನ ಆಯೋಗದ ಸೌಲಭ್ಯಗಳನ್ನು ಪಾಲಿಕೆ ನೌಕರರಿಗೂ ವಿಸ್ತರಿಸಿ, ಅನುದಾನ ಬಿಡುಗಡೆ, ವೃಂದ ಮತ್ತು ನೇಮಕಾತಿ ನಿಯಾಮವಳಿಗಳನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸುವುದು, ಪಾಲಿಕೆ ನೌಕರರಿಗೂ ಕೆಜಿಐಡಿ, ಜಿಪಿಎಫ್ ಸೌಲಭ್ಯ ವಿಸ್ತರಣೆ ಮಾಡುವುದು, ಆರೋಗ್ಯ ಸೌಲಭ್ಯದ ಜ್ಯೋತಿ/ ಆರೋಗ್ಯ ಸಂಜೀವಿನಿ ಜಾರಿ, ಪಾಲಿಕೆ ಅಧಿಕಾರಿ/ನೌಕರರಿಗೂ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ, ವಿವಿಧ ವೃಂದಗಳ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಹಾನಗರ ಪಾಲಿಕೆಗಳ ನೌಕರರ ಸಂಘದ ರಾಜ್ಯ ಸಮಿತಿ ಕರೆ ಮೇರೆಗೆ ಮುಷ್ಕರ ಕೈಗೊಂಡಿದ್ದು, ಸ್ವಚ್ಛತಾ ಕಾರ್ಮಿಕರೂ ಸೇರಿದಂತೆ ಪಾಲಿಕೆಯ ಎಲ್ಲಾ ವಿಭಾಗಗಳ ನೌಕರರು ಪಾಲ್ಗೊಳ್ಳಲಿದ್ದಾರೆ.
ಇಂದು ರಾಜ್ಯದ 10 ಮಹಾನಗರ ಪಾಲಿಕೆಗಳನ್ನು ಬಂದ್ ಮಾಡಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಸೇರಿದಂತೆ ವಿವಿಧ ಮಹಾನಗರ ಪಾಲಿಕೆಗಳ ನೌಕರರು ಪ್ರತಿಭಟನೆ ಕೈಗೊಂಡಿದ್ದಾರೆ. ಕೆಲಸಕ್ಕೆ ರಜೆ ಹಾಕಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಾಗೂ ವಿವಿಧ ನಗರಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ.