ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿ, ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಸುತ್ತಿದ್ದ ಎರಡು ಪ್ರಮುಖ ವಾಣಿಜ್ಯ ಸಂಸ್ಥೆಗಳಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಬರೋಬ್ಬರಿ ₹1.25 ಲಕ್ಷ ದಂಡ ವಿಧಿಸಿದೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲಕ್ಕಸಂದ್ರ ವಾರ್ಡ್‌ನ ಹೊಸೂರು ಮುಖ್ಯ ರಸ್ತೆಯಲ್ಲಿರುವ ಪಿವಿಆರ್ ಸಿನೆಮಾಸ್‌ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮೂಲದಲ್ಲೇ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸದೆ ಇರುವುದು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿರುವುದು ಪತ್ತೆಯಾಗಿದೆ. ನಿಯಮ ಉಲ್ಲಂಘನೆಗಾಗಿ ಸ್ಥಳದಲ್ಲೇ ₹75,000 ದಂಡ ವಿಧಿಸಲಾಗಿದ್ದು, ಇದರಲ್ಲಿ ಕಸ ವಿಂಗಡಿಸದಿದ್ದಕ್ಕೆ ₹50,000 ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ₹25,000 ದಂಡ ಸೇರಿದೆ.
ಮತ್ತೊಂದು ಪ್ರಕರಣದಲ್ಲಿ, ಕನಕಪುರ ಮುಖ್ಯ ರಸ್ತೆಯ ಉತ್ತರಹಳ್ಳಿ ವ್ಯಾಪ್ತಿಯ ಜಯನಗರ ಹೌಸಿಂಗ್ ಸೊಸೈಟಿ ಲೇಔಟ್‌ನಲ್ಲಿರುವ ಶಾಪ್ ವೆಲ್ ಸೂಪರ್‌ಮಾರ್ಕೆಟ್ ಬಳಿ ಒಳಚರಂಡಿ ಸಂಸ್ಕರಣಾ ಘಟಕದ (ಎಸ್‌ಟಿಪಿ) ತ್ಯಾಜ್ಯವನ್ನು ಎಸೆದಿದ್ದಕ್ಕಾಗಿ ಫೋರಂ ಮಾಲ್‌ಗೆ ದಂಡ ವಿಧಿಸಲಾಗಿದೆ. ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಈ ತ್ಯಾಜ್ಯವು ಮಾಲ್‌ನಿಂದಲೇ ಬಂದಿರುವುದನ್ನು ದೃಢಪಡಿಸಿಕೊಂಡು ತಕ್ಷಣವೇ ₹50,839 ದಂಡ ವಿಧಿಸಿ ವಸೂಲಿ ಮಾಡಿದ್ದಾರೆ.
ನಗರದಲ್ಲಿರುವ ವಾಣಿಜ್ಯ ಸಂಸ್ಥೆಗಳು, ಮಾಲ್‌ಗಳು, ಚಿತ್ರಮಂದಿರಗಳು ಮತ್ತು ಹೋಟೆಲ್‌ಗಳು ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಎಚ್ಚರಿಕೆ ನೀಡಿದ್ದಾರೆ.
